ದೆಹಲಿ: ಇತ್ತೀಚೆಗೆ ಸರ್ಕಾರದ ಹಲವು ಕಚೇರಿಗಳು, ಇಲಾಖೆಗಳ ಟ್ವಿಟರ್ ಅಕೌಂಟ್ಗಳು(Twitter Account Hack) ಹ್ಯಾಕ್ ಆಗುತ್ತಿವೆ. ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಖಾತೆಯ ಯೂಸರ್ ನೇಮ್ಗಳನ್ನು ಬದಲಿಸಿ, ಉರ್ದುದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. 2021ರ ಡಿಸೆಂಬರ್ 12ರಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಅಕೌಂಟ್ ಕೂಡ ಹ್ಯಾಕ್ ಆಗಿತ್ತು. ಹ್ಯಾಕ್ ಮಾಡಿದವರು ಬಿಟ್ಕಾಯಿನ್ ಸಂಬಂಧಿತ ಪೋಸ್ಟ್ಗಳನ್ನು ಹಾಕಿದ್ದರು. ನಂತರ ಅದನ್ನು ಸರಿಪಡಿಸಿ, ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF)ಯ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಕೆಲವೇ ಹೊತ್ತಲ್ಲಿ ಅದನ್ನು ಟೆಕ್ನಿಕಲ್ ತಜ್ಞರು ನಿಯಂತ್ರಣಕ್ಕೆ ತೆಗೆದುಕೊಂಡು, ಭದ್ರಪಡಿಸಿದ್ದರು.
ಹಾಗೇ, ಭಾನುವಾರ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರ ಟ್ವಿಟರ್ ಖಾತೆಯಲ್ಲಿ ಒಂದೇ ಸಮ ಅರೇಬಿಕ್ ಭಾಷೆಯ ಪೋಸ್ಟ್ಗಳು ಬರಲು ಶುರುವಾಗಿದ್ದವು. ಇತ್ತ ಹರ್ಯಾಣ ಶಾಸಕ ಮತ್ತು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರ ಟ್ವಿಟರ್ ಅಕೌಂಟ್ನ ಹೆಸರು @iLoveAlbaik ಎಂದು ಬದಲಾಗಿತ್ತು. ಅಲ್ಲದೆ, ಉರ್ದು ಭಾಷೆಯ ಪೋಸ್ಟ್ಗಳನ್ನು ಹಾಕಲಾಗಿತ್ತು. ಅಂದರೆ ಇವರ ಅಕೌಂಟ್ಗಳೆಲ್ಲ ಹ್ಯಾಕ್ ಆಗಿದ್ದವು. ಅಷ್ಟೇ ಅಲ್ಲ, ರಾಜಸ್ಥಾನ ರಾಜಭಾವನದ (ರಾಜ್ಯಪಾಲ ಕಲ್ರಾಜ್ ಮಿಶ್ರಾ) ಟ್ವಿಟರ್ ಖಾತೆಯನ್ನೂ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾಗಿ ವರದಿಯಾಗಿದೆ. ಕಲ್ರಾಜ್ ಮಿಶ್ರಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಇಬ್ಬರೂ ಕೂಡ ಟ್ವಿಟರ್ ಮುಖ್ಯಸ್ಥರಿಗೆ ಹಾಗೂ ಸಂಬಂಧಪಟ್ಟ ಕೇಂದ್ರ ಆಡಳಿತಕ್ಕೆ ದೂರು ನೀಡಿದ್ದಾರೆ. ಸದ್ಯ ಇವರ ಟ್ವಿಟರ್ ಅಕೌಂಟ್ಗಳು ರಿಸ್ಟೋರ್ ಆಗಿವೆ.
ಶನಿವಾರ ಎನ್ಡಿಆರ್ಎಫ್ನ ಅಧಿಕೃತ ಟ್ವಿಟರ್ ಖಾತೆ ರಾತ್ರಿ ಸುಮಾರು 10.45ರ ಹೊತ್ತಿಗೆ ಹ್ಯಾಕ್ ಆಗಿತ್ತು. ಅದರ ಬೆನ್ನಲ್ಲೇ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋ, ಹೆಸರನ್ನೂ ಬದಲಿಸಿದ್ದರು. ಅದಾಗಿ 2-3ನಿಮಿಷದಲ್ಲಿ ಟೆಕ್ನಿಕಲ್ ತಂಡ ಅದನ್ನು ದುರಸ್ತಿಗೊಳಿಸಿ, ಮತ್ತೆ ಮೂಲ ರೂಪಕ್ಕೆ ತಂದಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಎನ್ಡಿಆರ್ಎಫ್ ಪ್ರಧಾನ ನಿರ್ದೇಶಕ ಅತುಲ್ ಕರ್ವಲ್, ನಾವು ಈ ಬಗ್ಗೆ ಗಂಭೀರ ತನಿಖೆ ನಡೆಸುತ್ತೇವೆ. ಇನ್ನೊಮ್ಮೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ದೆಹಲಿ ಪೊಲೀಸರಿಗೂ ಕೂಡ ದೂರು ನೀಡಿದ್ದೇವೆ ಎಂದು ಹೇಳಿದ್ದರು. ಅದಕ್ಕೂ ಮೊದಲು ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಅದರ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ್ದರು. ಬಳಿಕ ಸೈಬರ್ ಸೆಲ್ ವಿಭಾಗದವರು ಅದನ್ನು ರಿಸ್ಟೋರ್ ಮಾಡಿ, ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದರು. 2021ರ ಡಿಸೆಂಬರ್ನಲ್ಲಿ ಮೊದಲು ಪ್ರಧಾನಿ ಮೋದಿಯವರ ಟ್ವಿಟರ್ ಅಕೌಂಟ್ ಹ್ಯಾಕ್ ಆದ ಬೆನ್ನಲ್ಲೇ, ಹೀಗೆ ಸಾಲುಸಾಲಾಗಿ ಒಂದೊಂದೇ ವಿಭಾಗದ ಟ್ವಿಟರ್ ಖಾತೆಗಳು ಹ್ಯಾಕ್ ಆಗುತ್ತಿವೆ.
ಇದನ್ನೂ ಓದಿ: ಎಲ್ಲರೂ ಒಮಿಕ್ರಾನ್ ಸೋಂಕಿಗೆ ಒಳಗಾಗುತ್ತಾರೆಯೇ?; ಇಲ್ಲಿದೆ ವಿಶ್ವ ಆರೋಗ್ಯ ಸಂಸ್ಥೆಯ ಉತ್ತರ