ಭೂಪಾಲ್: ಭೂಪಾಲ್‌ನ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ (Pragya Singh Thakur) ಅವರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ ಹಿನ್ನೆಲೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಪರಿಚಿತ ಮೊಬೈಲ್ ನಂಬರ್ನಿಂದ ತಮಗೆ ಆಕ್ಷೇಪಾರ್ಹ ವಿಡಿಯೋ ಕಾಲ್ ಬಂದಿದೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಪ್ರಗ್ಯಾ ಸಿಂಗ್ ಠಾಕೂರ್ ಮೊದಲು ತಮಗೆ ಬಂದ ಫೋನ್ ಕಾಲ್ ಕಡಿತಗೊಳಿಸಿದರು. ನಂತರ ಆಕೆಗೆ ಮತ್ತೊಂದು ನಂಬರ್ನಿಂದ ಅಶ್ಲೀಲ ವಿಡಿಯೋ, ಮೆಸೇಜ್ ಕಳುಹಿಸಲಾಯಿತು. ಅಲ್ಲದೆ, ಆ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವ ಮೂಲಕ ತನ್ನ ಮಾನಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ದೂರು ನೀಡಿದ್ದಾರೆ” ಎಂದು ಇನ್ಸ್‌ಪೆಕ್ಟರ್ ಚೈನ್ ಸಿಂಗ್ ರಘುವಂಶಿ ಹೇಳಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಲೈಂಗಿಕ ಕಿರುಕುಳ), 507 (ಅನಾಮಧೇಯ ವಿಳಾಸದಿಂದ ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನಗೆ ಬಂದ ಫೋನ್ ಕರೆ ಮತ್ತು ವಿಡಿಯೋಗಳು ತನ್ನ ಮಾನಹಾನಿ ಮತ್ತು ಇಮೇಜ್ ಹಾಳು ಮಾಡುವ ಪಿತೂರಿಯ ಭಾಗವಾಗಿದೆ ಎಂದು ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ. ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Pragya Thakur: ನಾನು ಕಬಡ್ಡಿಯಾಡಿದ್ದನ್ನು ವಿಡಿಯೋ ಮಾಡಿದವರು ರಾವಣರು; ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಆಕ್ರೋಶ