ಚೆನ್ನೈ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊವಿಡ್ ಸೋಂಕು ದೃಢ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ ಹಿಂದಿನ ವಾರದ 47ಕ್ಕೆ ಹೋಲಿಸಿದರೆ ಮಂಗಳವಾರ 55 ಕೊವಿಡ್ ಪ್ರಕರಣಗಳು ವರದಿಯಾಗಿವೆ.
ಚೆನ್ನೈ: ದುಬೈನಿಂದ (Dubai) ಬಂದ ಇಬ್ಬರು ಪ್ರಯಾಣಿಕರಿಗೆ ಇಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ (Chennai Airport) ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. ಇಬ್ಬರೂ ಪ್ರಯಾಣಿಕರು ಪುದುಕೊಟ್ಟೈ ಜಿಲ್ಲೆಯ ಅಲಂಗುಡಿಯವರಾಗಿದ್ದು, ಅವರ ಪರೀಕ್ಷಾ ಮಾದರಿಗಳನ್ನು ರಾಜ್ಯ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ.
ಈ ಹಿಂದೆ ಮಧುರೈ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾದ ನಂತರ ಚೀನಾದಿಂದ ಶ್ರೀಲಂಕಾ ಮೂಲಕ ವಿರುದುನಗರಕ್ಕೆ ವಾಪಾಸಾದ ಮಹಿಳೆ ಮತ್ತು ಅವರ 6 ವರ್ಷದ ಮಗಳಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿತ್ತು. ತಮಿಳುನಾಡಿನಲ್ಲಿ ಪ್ರತಿದಿನ ಸರಾಸರಿ 10 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಅಲರ್ಟ್ ಘೋಷಿಸಲಾಗಿದೆ.
ತಮಿಳುನಾಡಿನಲ್ಲಿ ಹಿಂದಿನ ವಾರದ 47ಕ್ಕೆ ಹೋಲಿಸಿದರೆ ಮಂಗಳವಾರ 55 ಕೊವಿಡ್ ಪ್ರಕರಣಗಳು ವರದಿಯಾಗಿವೆ. ಮತ್ತೊಂದೆಡೆ, ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ -19 ಸಿದ್ಧತೆಗಾಗಿ ಅಣಕು ಡ್ರಿಲ್ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಮಿಳುನಾಡಿನ ಆರೋಗ್ಯ ಸಚಿವ ಸುಬ್ರಮಣಿಯನ್, ರಾಜ್ಯದಲ್ಲಿ ಸಾಕಷ್ಟು ಹಾಸಿಗೆಗಳು ಮತ್ತು ಆಮ್ಲಜನಕವಿದೆ. ಜನರು ಆತಂಕ ಪಡುವ ಯಾವುದೇ ಅಗತ್ಯವಿಲ್ಲ ಎಂದು ಜನರಿಗೆ ಭರವಸೆ ನೀಡಿದರು.
ಇದನ್ನೂ ಓದಿ: Omicron BF.7: ವಿದೇಶದಿಂದ ಬಂದಿದ್ದ ನಾಲ್ವರಿಗೆ ಕೊವಿಡ್ ದೃಢ, ಬೆಂಗಳೂರು ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್
ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಮತ್ತು ತಾಲೂಕೇತರ ಆಸ್ಪತ್ರೆಗಳು ತಮ್ಮ ಮೂಲಸೌಕರ್ಯಗಳ ಸರಿಯಾದ ಮೌಲ್ಯಮಾಪನವನ್ನು ಹೊಂದಲು ಮತ್ತು ರಾಜ್ಯ ಆರೋಗ್ಯಕ್ಕೆ ವರದಿ ಮಾಡಲು ಸೂಚಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಆರೋಗ್ಯ ಇಲಾಖೆಗಳಿಗೆ ಸಲಹೆ ನೀಡಿದೆ ಎಂದು ಸುಬ್ರಮಣಿಯನ್ ಹೇಳಿದರು.
ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಬ್ರೆಜಿಲ್‌ನಂತಹ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದ ನಂತರ ಈ ಸಲಹೆಯನ್ನು ನೀಡಲಾಗಿದೆ.
ಇದನ್ನೂ ಓದಿ: Air India Express: ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಕೊವಿಡ್ ಮಾರ್ಗಸೂಚಿ ಘೋಷಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್
ಕೊವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 24ರಿಂದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರತ ಸರ್ಕಾರ ರ್ಯಾಂಡಮ್ ಪರೀಕ್ಷೆಯನ್ನು ಪ್ರಾರಂಭಿಸಿದ್ದರಿಂದ ಕಳೆದ 3 ದಿನಗಳಲ್ಲಿ ಕನಿಷ್ಠ 39 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 188 ಹೊಸ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಇಂದು ಬೆಳಿಗ್ಗೆ ಸರ್ಕಾರಿ ಅಂಕಿಅಂಶಗಳನ್ನು ಪ್ರಕಟಿಸಲಾಗಿದೆ. ಯಾವುದೇ ಹೊಸ ಸಾವು ವರದಿಯಾಗಿಲ್ಲ ಮತ್ತು ಭಾರತ ದೇಶದಲ್ಲಿ 3,468 ಸಕ್ರಿಯ ಕೊವಿಡ್ ಪ್ರಕರಣಗಳಿವೆ.