ಬಿಜೆಪಿ ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಕಾಶ್ಮೀರದಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು
ಹಕ್ಕಾನಿ ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಆಗಿದ್ದಾನೆ. 2018ರಲ್ಲಿ ವಾಘ್ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ತರಬೇತಿ ಪಡೆದ ಬಳಿಕ 2019ರಲ್ಲಿ ಭಾರತಕ್ಕೆ ನುಸುಳಿದ್ದ.
ಕಾಶ್ಮೀರದ ಬಂಡಿಪೋರಾದಲ್ಲಿ ನಿನ್ನೆ (ಭಾನುವಾರ) ನಡೆದ ಎನ್ಕೌಂಟರ್ನಲ್ಲಿ ಲಷ್ಕರ್ ಇ ತೊಯ್ಬಾ (Lashkar E Toiba-ಎಲ್ಇಟಿ) ಸಂಘಟನೆಯ ಕಮಾಂಡರ್ ಸೇರಿ ಇಬ್ಬರು ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ. ಕಳೆದ ವರ್ಷ ಬಿಜೆಪಿ ಮುಖಂಡ ವಾಸೀಮ್ ಬ್ಯಾರಿ (BJP Leader Waseem Bari )ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆಯಲ್ಲಿ ಈ ಉಗ್ರರೂ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಪೊಲೀಸರು, ಭಾರತೀಯ ಸೇನೆ ಮತ್ತು ಸಿಆರ್ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಬಂಡಿಪೋರಾದ ವಾರ್ಟಿನಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಆ ಪ್ರದೇಶವನ್ನು ಸುತ್ತುವರಿದಿದ್ದರು. ಭಾನುವಾರ ಮುಂಜಾನೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಅಲ್ಲಿ ಸೇರಿದ್ದರು.
ಅಲ್ಲಿ ಅಡಗಿದ್ದ ಉಗ್ರರಿಗೆ ಪೊಲೀಸರ ಎದುರು ಶರಣಾಗಲು ಅವಕಾಶ ನೀಡಲಾಯಿತು. ಆದರೆ ಅವರು ತಾವು ಶರಣಾಗುವುದಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ಭದ್ರತಾ ಪಡೆಗಳ ಮೇಲೆ ಒಂದೇ ಸಮ ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಹೀಗಾಗಿ ಅವರನ್ನು ಹತ್ಯೆ ಮಾಡುವುದು ಅನಿವಾರ್ಯವಾಯಿತು ಎಂದು ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೃತ ಉಗ್ರರನ್ನು ಅಬಿದ್ ರಶೀದ್ ದಾರ್ ಅಲಿಯಾಸ್ ಹಕ್ಕಾನಿ ಮತ್ತು ಅಹ್ಮದ್ ಶಾ ಎಂದು ಗುರುತಿಸಲಾಗಿದೆ. ಇಬ್ಬರೂ ಪಾಕಿಸ್ತಾನದವರೇ ಆಗಿದ್ದಾರೆಂದೂ ತಿಳಿಸಿದ್ದಾರೆ.
ಇದರಲ್ಲಿ ಹಕ್ಕಾನಿ ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಆಗಿದ್ದಾನೆ. 2018ರಲ್ಲಿ ವಾಘ್ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ತರಬೇತಿ ಪಡೆದ ಬಳಿಕ 2019ರಲ್ಲಿ ಭಾರತಕ್ಕೆ ನುಸುಳಿದ್ದ. ಕಳೆದ ವರ್ಷ ಜುಲೈನಲ್ಲಿ ಹತ್ಯೆಗೀಡಾದ ಬಿಜೆಪಿ ಮುಖಂಡ ಶೇಖ್ ವಾಸೀಮ್ ಬ್ಯಾರಿ ಮತ್ತು ಅವರ ಸಹೋದರ, ತಂದೆಯ ಹತ್ಯೆಯಲ್ಲಿ ಪಾಲ್ಗೊಂಡ ಭಯೋತ್ಪಾದಕರು ಇವರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲಿ ಈ ಹಕ್ಕಾನಿ ಯುವಕರನ್ನು ಉಗ್ರಸಂಘಟನೆಗೆ ಸೇರಿಸಿ, ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಂದ್ ಮಧ್ಯೆ ಸಿಎಂ ಬೊಮ್ಮಾಯಿ ಯಾವ ಕಾರ್ಯಕ್ರಮದಲ್ಲಿದ್ದಾರೆ? ಭಾರತ್ ಬಂದ್ ಬಗ್ಗೆ ಏನು ಹೇಳಿದರು?