ಭಾರತ ಸೇರಿ ಹಲವು ದೇಶಗಳಿಗೆ UAE ಹೇರಿದ್ದ ನಿಷೇಧ ತೆರವು; ಆ. 5ರಿಂದ ವಿಮಾನ ಹಾರಾಟಕ್ಕೆ ಅನುಮತಿ
ಭಾರತ, ಪಾಕಿಸ್ತಾನ, ನೈಜೀರಿಯ, ನೇಪಾಳ, ಉಗಾಂಡ, ಶ್ರೀಲಂಕಾ ಮತ್ತಿತರ ದೇಶಗಳ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಯುಎಇ ಹಿಂಪಡೆದಿದೆ.
ನವದೆಹಲಿ: ಕಳೆದ ಒಂದೂವರೆ ವರ್ಷಗಳಿಂದ ಪ್ರಪಂಚವನ್ನು ಕಾಡುತ್ತಿರುವ ಕೊವಿಡ್ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಹೀಗಾಗಿ, ಕೊವಿಡ್-19 (Covid-19 Cases) ಮತ್ತು ರೂಪಾಂತರಿ ಕೊರೋನಾವೈರಸ್ (Covid New Variant) ಪ್ರಕರಣಗಳು ಹೆಚ್ಚಾಗಿರುವ ಭಾರತ, ಪಾಕಿಸ್ತಾನ ಸೇರಿ ಕೆಲವು ದೇಶಗಳ ವಿಮಾನ ಪ್ರಯಾಣಕ್ಕೆ ಯುಎಇ (UAE) ನಿರ್ಬಂಧ ಹೇರಿತ್ತು. ಇದೀಗ ಆ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಆಗಸ್ಟ್ 5ರಿಂದ ಭಾರತದ ಪ್ರಯಾಣಿಕರು ಯುಎಇಗೆ ಪ್ರಯಾಣಿಸಬಹುದಾಗಿದೆ.
ಭಾರತ, ಪಾಕಿಸ್ತಾನ, ನೈಜೀರಿಯ, ನೇಪಾಳ, ಉಗಾಂಡ, ಶ್ರೀಲಂಕಾ ಮತ್ತಿತರ ದೇಶಗಳ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಯುಎಇ ಹಿಂಪಡೆದಿದೆ. ಹಲವು ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ಯುಎಇಯಲ್ಲಿ ಕೆಲವು ದೇಶಗಳ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳಾಗಿತ್ತು. ಬಹುತೇಕ ಎಲ್ಲ ದಕ್ಷಿಣ ಏಷ್ಯಾದ ದೇಶಗಳು ಹಾಗೂ ಆಫ್ರಿಕನ್ ದೇಶಗಳಿಗೆ ಯುಎಇಯಲ್ಲಿ ನಿಷೇಧ ಹೇರಲಾಗಿತ್ತು. ಆಗಸ್ಟ್ 5ರ ಬಳಿಕ ಈ ರಾಷ್ಟ್ರಗಳ ವಿಮಾನಗಳು ಯುಎಇಗೆ ತೆರಳಲು ಅನುಮತಿ ನೀಡಲಾಗಿದೆ.
ಆದರೆ, ಯುಎಇಗೆ ವಿಮಾನದಲ್ಲಿ ಆಗಮಿಸುವ ಪ್ರಯಾಣಿಕರು 48 ಗಂಟೆಗಳ ಹಿಂದಿನ ಕೊವಿಡ್ ನೆಗೆಟಿವ್ ವರದಿ ನೀಡಬೇಕಾದುದು ಕಡ್ಡಾಯ. ಹಾಗೇ, ಮೊದಲೇ ಆನ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಇನ್ನು, ಈಗಾಗಲೇ ರೆಡ್ ಜೋನ್ನಲ್ಲಿರುವ (Red List) ದೇಶಗಳಿಗೆ ತನ್ನ ದೇಶದ ಪ್ರಜೆಗಳು ಪ್ರಯಾಣ ಮಾಡಬಾರದೆಂದು ಸೌದಿ ಅರೇಬಿಯಾ ಆದೇಶ ನೀಡಿದೆ. ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣ ಮಾಡಿದರೆ 3 ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ (Travel Ban) ಹೇರುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ, ರೆಡ್ ಪಟ್ಟಿಯಲ್ಲಿರುವ ದೇಶಗಳಿಗೆ ತೆರಳಿ ವಾಪಾಸಾಗುವ ತನ್ನ ದೇಶದ ಪ್ರಜೆಗಳು ದುಬಾರಿ ದಂಡ ಕಟ್ಟಬೇಕೆಂದು ಕೂಡ ಹೊಸ ಆದೇಶ ಹೊರಡಿಸಿದೆ. ಸೌದಿ ಅರೇಬಿಯಾದ ರೆಡ್ ಪಟ್ಟಿಯಲ್ಲಿರುವ ದೇಶಗಳಲ್ಲಿ ಭಾರತ ಕೂಡ ಇದೆ! ಹೀಗಾಗಿ, ಸೌದಿ ಅರೇಬಿಯಾದವರು ಭಾರತಕ್ಕೆ ಬಂದರೆ ಮೂರು ವರ್ಷಗಳ ಕಾಲ ಪ್ರಯಾಣಕ್ಕೆ ನಿಷೇಧ ಹೇರಲಾಗುತ್ತದೆ.
ಕೊರೋನಾ ಕೇಸು ಮತ್ತು ರೂಪಾಂತರಿ ಕೇಸುಗಳು ಹೆಚ್ಚಾಗಿರುವ ದೇಶಗಳನ್ನು ಸೌದಿ ಅರೇಬಿಯಾ ರೆಡ್ ಪಟ್ಟಿಗೆ ಸೇರಿಸಿದೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಅರ್ಜೆಂಟಿನಾ, ಬ್ರೆಜಿಲ್, ಈಜಿಪ್ಟ್, ಇಂಡೋನೇಷ್ಯಾ, ಲೆಬನಾನ್, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುಎಇ ರಾಷ್ಟ್ರಗಳಿಗೆ ಪ್ರಯಾಣಿಸುವ ಸೌದಿ ಪ್ರಜೆಗಳು 3 ವರ್ಷಗಳ ಕಾಲ ಪ್ರಯಾಣ ನಿಷೇಧ ಎದುರಿಸಬೇಕಾದೀತು.
ಇದನ್ನೂ ಓದಿ: Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ತುರ್ತು ಭೂಸ್ಪರ್ಶ
Saudi Arabia: ಸೌದಿ ಅರೇಬಿಯಾದ ಪ್ರಜೆಗಳು ಭಾರತಕ್ಕೆ ಬಂದರೆ 3 ವರ್ಷ ಪ್ರಯಾಣ ನಿಷೇಧ; ಕಾರಣ ಇಲ್ಲಿದೆ
(UAE Lifts Ban On Transit Flights From India Pakistan and Other Countries from August 5)
Published On - 9:29 pm, Tue, 3 August 21