ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಾ ಲಾಲ್ (Kanhaiya Lal Murder) ಅವರ ಶಿರಚ್ಛೇದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಕೇಂದ್ರ ಸರ್ಕಾರ ಇಂದು (ಬುಧವಾರ) ಆದೇಶಿಸಿದೆ. ಈ ಪ್ರಕರಣದಲ್ಲಿ ಯಾವುದೇ ಸಂಘಟನೆಯ ಒಳಗೊಳ್ಳುವಿಕೆ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಟೈಲರ್ ಅಂಗಡಿಗೆ ನುಗ್ಗಿ ಹಿಂದೂ ಯುವಕನ ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಮಂಗಳವಾರ ಎನ್‌ಐಎ ತಂಡ ಉದಯಪುರಕ್ಕೆ ಧಾವಿಸಿತು. ಇಬ್ಬರು ಮುಸ್ಲಿಂ ದಾಳಿಕೋರರು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಚಾಕು ತೋರಿಸಿ, ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಟೈಲರ್ ಮೇಲೆ ಹೇಗೆ ಹಲ್ಲೆ ನಡೆಸಲಾಗಿದೆ ಎಂಬ ಸಂಪೂರ್ಣ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂತಕರೇ ಬಿಡುಗಡೆ ಮಾಡಿದ್ದರು. ಮಂಗಳವಾರ ತಡರಾತ್ರಿ ಅವರಿಬ್ಬರನ್ನೂ ಬಂಧಿಸಲಾಗಿದೆ.
ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿರುವುದು ಎನ್‌ಐಎಗೆ ಈ ಕೇಸ್ ವರ್ಗಾಯಿಸಲು ಮತ್ತೊಂದು ಕಾರಣ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ದಾಳಿಕೋರರಾದ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಇಬ್ಬರೂ ಸುನ್ನಿ ಇಸ್ಲಾಂನ ಸೂಫಿ-ಬರೇಲ್ವಿ ಪಂಥಕ್ಕೆ ಸೇರಿದವರು. ಇವರು ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಟೈಲರ್ ಶಿರಚ್ಛೇದ: ರಾಜಸ್ಥಾನ ರಾಜ್ಯವ್ಯಾಪಿ ನಿಷೇಧಾಜ್ಞೆ ಜಾರಿ, ಬಿಗಿ ಬಂದೋಬಸ್ತ್, ವಿಡಿಯೊ ನೋಡಬೇಡಿ ಎಂದು ಪೊಲೀಸರು
ಈ ಪ್ರಕರಣದ ತನಿಖೆ ನಡೆಸಲಿರುವ ಎನ್‌ಐಎ ಈ ಕೇಸಿನಲ್ಲಿ ಇತರ ಸಂಘಟನೆಗಳ ಕೈವಾಡದ ಬಗ್ಗೆಯೂ ತನಿಖೆ ನಡೆಸಲಿದೆ. “ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ಶ್ರೀ ಕನ್ಹಯ್ಯಾ ಲಾಲ್ ತೇಲಿ ಅವರ ಕ್ರೂರ ಹತ್ಯೆಯ ತನಿಖೆಯನ್ನು ವಹಿಸಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದೆ. ಯಾವುದೇ ಸಂಘಟನೆ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳ ಒಳಗೊಳ್ಳುವಿಕೆಯನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುತ್ತದೆ” ಎಂದು ಸಚಿವಾಲಯ ಟ್ವೀಟ್ ಮಾಡಿದೆ.
MHA has directed the National Investigation Agency (NIA) to take over the investigation of the brutal murder of Shri Kanhaiya Lal Teli committed at Udaipur, Rajasthan yesterday.
The involvement of any organisation and international links will be thoroughly investigated.
— गृहमंत्री कार्यालय, HMO India (@HMOIndia) June 29, 2022
ಸಿಎಂ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯೆ:
ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಶಿರಚ್ಛೇದ ಮಾಡಿದ ಪ್ರಕರಣವನ್ನ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದು ಸಾಮಾನ್ಯ ಘಟನೆಯಲ್ಲ. ಈ ಹತ್ಯೆಯ ಹಿಂದಿರುವವರನ್ನ ಪತ್ತೆ ಹಚ್ಚಿ ಶಿಕ್ಷಿಸುತ್ತೇವೆ. ಈ ಸಂಬಂಧ ನಾನು ಅಧಿಕಾರಿಗಳ ಜತೆ ಸಭೆ ಮಾಡುತ್ತೇನೆ. ಸಭೆ ಬಳಿಕ ನಾನು ಮತ್ತಷ್ಟು ಮಾಹಿತಿ ನೀಡ್ತೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಪ್ರಕರಣ?:
ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮ ಅವಮಾನಕಾರಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ವಿಶ್ವಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿತ್ತು. ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಉದಯಪುರದ ವೃತ್ತಿಯಲ್ಲಿ ಟೈಲರ್ ಆಗಿರುವ ಹಿಂದೂ ಯುವಕ ಕನ್ನಯ್ಯ ಲಾಲ್ ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ನೂಪುರ್ ಶರ್ಮ ಅವರ ಫೋಟೋ ಹಾಕಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು.
ಇದನ್ನೂ ಓದಿ: Udaipur Murder: ಉದಯಪುರ ಹತ್ಯೆ ಪ್ರಕರಣ; ಹಿಂದೂ ಯುವಕನ ಹಂತಕನಿಗೆ ಐಸಿಸ್ ಲಿಂಕ್?
ತಮಗೆ ಜೀವ ಬೆದರಿಕೆ ಇದೆ ಎಂದು ಕನ್ನಯ್ಯ ಲಾಲ್ ಪೊಲೀಸರಿಗೆ ದೂರು ನೀಡಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ, ಜೀವಭಯದಿಂದ ಅವರು ಕಳೆದ 15-20 ದಿನಗಳಿಂದ ತಮ್ಮ ಟೈಲರ್ ಅಂಗಡಿಯನ್ನು ಬಂದ್ ಮಾಡಿದ್ದರು. ಆದರೆ, ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿದ್ದರಿಂದ ಮತ್ತೆ ಟೈಲರ್ ಅಂಗಡಿ ಬಾಗಿಲು ತೆರೆದಿದ್ದ ಅವರ ಬಳಿ ಬಟ್ಟೆ ಹೊಲಿಯಲು ಅಳತೆ ನೀಡುವ ನೆಪದಲ್ಲಿ ರಿಯಾಜ್ ಮತ್ತು ಆತನ ಸಹಚರ ಬಂದಿದ್ದರು.
ಕನ್ನಯ್ಯ ಲಾಲ್ಗೆ ಬಟ್ಟೆ ಹೊಲಿಯಲು ಅಳತೆ ನೀಡುವಾಗ ರಿಯಾಜ್ ಅವರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರ ರುಂಡ ಕತ್ತರಿಸಿದ್ದಾನೆ. ಆಗ ಆತನ ಸಹಾಯಕ ತನ್ನ ಮೊಬೈಲ್‌ನಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಇಬ್ಬರೂ ಆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.