ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಉದ್ದವ್ ಠಾಕ್ರೆ ಒತ್ತಾಯ
ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಿದ್ದಾರೆ ಏಕನಾಥ್ ಶಿಂಧೆ ನೇತೃತ್ವದ ಪ್ರತಿಸ್ಪರ್ಧಿ ಬಣವು ಶಿವಸೇನೆಯ ಚುನಾವಣಾ ಚಿಹ್ನೆಯನ್ನು ಬಳಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ
ಉದ್ಧವ್ ಠಾಕ್ರೆ ಮಹಾರಾಷ್ಟ್ರದಲ್ಲಿ (Maharashtra) ಮಧ್ಯಂತರ ಚುನಾವಣೆಗೆ ಒತ್ತಾಯಿಸಿದ್ದಾರೆ. ಏಕನಾಥ್ ಶಿಂಧೆ (Eknath Shinde) ನೇತೃತ್ವದ ಪ್ರತಿಸ್ಪರ್ಧಿ ಬಣವು ಶಿವಸೇನೆಯ ಚುನಾವಣಾ ಚಿಹ್ನೆಯನ್ನು ಬಳಸಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಶುಕ್ರವಾರ ಹೇಳಿದ್ದಾರೆ ಮತ್ತು ತಮ್ಮ ತಂಡವು ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ಆಗಬೇಕು ಎಂದಿದ್ದಾರೆ. ಅದೇ ವೇಳೆ ಬಂಡಾಯ ಶಾಸಕರು ಶಿವಸೇನಾದ ಚಿಹ್ನೆಯನ್ನು ಬಳಸಲು ನಾನು ಒಪ್ಪಲಾರೆ ಎಂದಿದ್ದಾರೆ. ಇವತ್ತೇ ವಿಧಾನಸಭಾ ಚುನಾವಣೆ ನಡೆಸಿ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ. ನಾವು ತಪ್ಪು ಮಾಡಿದ್ದರೆ ಜನರೇ ನಮ್ಮನ್ನು ಮನೆಗೆ ಕಳುಹಿಸುತ್ತಾರೆ. ಅವರು ಈಗ ಮಾಡಿದ್ದನ್ನು ಅವರು ಎರಡೂವರೆ ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಅದು ಗೌರವದ ರೀತಿಯಲ್ಲಿ ಮಾಡಬೇಕಿತ್ತು. ಹಾಗಿದ್ದರೆ ಈಗ ಆದಂತೆ ಆಗುತ್ತಿರಲಿಲ್ಲ ಎಂದು ಠಾಕ್ರೆ ಹೇಳಿದ್ದಾರೆ. ಶಿವಸೇನಾದ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಯಾರೊಬ್ಬರೂ ತೆಗೆದುಕೊಳ್ಳುವಂತಿಲ್ಲ. ಆದಾಗ್ಯೂ, ಜನರು ಕೇವಲ ಚಿಹ್ನೆಯನ್ನು ಮಾತ್ರ ನೋಡುವುದಿಲ್ಲ. ಆ ಚಿಹ್ನೆಯನ್ನು ಪಡೆದ ವ್ಯಕ್ತಿಯನ್ನೂ ಅವರು ನೋಡುತ್ತಾರೆ ಎಂದಿದ್ದಾರೆ ಠಾಕ್ರೆ.
ಕಳೆದ ಎರಡೂವರೆ ವರ್ಷಗಳಲ್ಲಿ ಬಿಜೆಪಿ ನನ್ನನು ಟೀಕೆ ಮಾಡಿದಾಗ ನನ್ನ ಕುಟುಂಬವನ್ನು ನಿಂದಿಸಿದಾಗ ಬಂಡಾಯ ಶಾಸಕರ ಗುಂಪು ಮೌನವಹಿಸಿತ್ತು. ನೀವು ಅವರೊಂದಿಗೆ ಸಂಪರ್ಕದದಲ್ಲಿದ್ದು ನಿಮ್ಮದೇ ಪಕ್ಷಕ್ಕೆ ಈ ರೀತಿ ಮೋಸ ಮಾಡಿದಿರಿ ಎಂದು ಶಿಂಧೆಯ ಹೆಸರು ಉಲ್ಲೇಖಿಸದೇ ಠಾಕ್ರೆ ಟೀಕೆ ಮಾಡಿದ್ದಾರೆ.
ಮಾತೋಶ್ರೀಗೆ ಕರೆದರೆ ನಾವು ಬರುತ್ತಿದ್ದೆವು ಎಂದು ಕೆಲವರು ಹೇಳಿದ್ದರು. ಅವರಿಗೆ ನನ್ನ ಮೇಲೆ ಗೌರವವಿದೆ ಅಂದಿದ್ದರು. ಅದಕ್ಕೆ ಧನ್ಯವಾದಗಳು. ಒಂದು ವೇಳೆ ನೀವು ನನ್ನ ಬಳಿ ಬಂದು ಮಾತನಾಡುತ್ತಿದ್ದರೆ ನೀವು ಈ ಪ್ರವಾಸ ಹೋಗಬೇಕಾದ ಅಗತ್ಯ ಬರುತ್ತಿರಲಿಲ್ಲ. ಈಗ ನೀವು ನನ್ನ ಕುಟುಂಬವನ್ನು ನಿಂದಿಸಿದವರ ಜತೆಗಿದ್ದೀರಿ. ಅವರು ನಮ್ಮ ಖ್ಯಾತಿ ಮೇಲೆ ದಾಳಿ ಮಾಡಿದರು. ಈಗ ನೀವು ನಿಮ್ಮ ಪ್ರೀತಿ ಮತ್ತು ಗೌರವ ನಿಜವಾಗಿದ್ದೇ ಎಂಬುದನ್ನು ನಿರ್ಧರಿಸಿ ಎಂದು ಠಾಕ್ರೆ ಹೇಳಿದ್ದಾರೆ.
Published On - 2:50 pm, Fri, 8 July 22