ದೆಹಲಿ: ಆಧಾರ್ ಕಾರ್ಡ್ಗಳ ಜೆರಾಕ್ಸ್ ಪ್ರತಿಗಳನ್ನು ಸಿಕ್ಕಸಿಕ್ಕಲ್ಲಿ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರವು ಸಾರ್ವಜನಿಕರನ್ನು ಎಚ್ಚರಿಸಿದೆ. ಆಧಾರ್ ಕಾರ್ಡ್ನ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿಶಿಷ್ಟ ಗುರುತು ಪ್ರಾಧಿಕಾರ ದಿಂದ (Unique Identification Authority of India – UIDAI) ಅನುಮತಿ ಪಡೆದ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ವ್ಯಕ್ತಿಯ ಗುರುತು ಪತ್ತೆಗೆ ಬಳಸಿಕೊಳ್ಳಬಹುದು. ಆದರೆ ಹೊಟೆಲ್ ಅಥವಾ ಚಿತ್ರಮಂದಿರಗಳಿಗೆ ಸಾರ್ಜಜನಿಕರಿಂದ ಆಧಾರ್ ಮಾಹಿತಿಯ ಜೆರಾಕ್ಸ್ ಪ್ರತಿಗಳನ್ನು ಸಂಗ್ರಹಿಸಲು ಅನುಮತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.
‘ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಸ್ಥೆಯು ಆಧಾರ್ ಕಾರ್ಡ್ ಪರಿಶೀಲಿಸುವಂತಿಲ್ಲ. ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ್ ತೋರಿಸುವಂತೆ ಕೋರುವಂತಿಲ್ಲ. ಆಧಾರ್ ಕಾಯ್ದೆ 2016ರ ಅನ್ವಯ ಇದು ಅಪರಾಧವಾಗುತ್ತದೆ. ಖಾಸಗಿ ಸಂಸ್ಥೆ ಅಥವಾ ಯಾವುದೇ ವ್ಯಕ್ತಿಯು ನಿಮ್ಮ ಆಧಾರ್ ಕಾರ್ಡ್ನ ನಕಲು ಪ್ರತಿ ಕೇಳಿದರೆ ಅವರು ವಿಶಿಷ್ಟ ಗುರುತು ಪ್ರಾಧಿಕಾರದ ಅನುಮತಿ ಪಡೆದಿದ್ದಾರೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದೆ.
ಆಧಾರ್ ಕಾರ್ಡ್ನ ಫೋಟೊಕಾಪಿಗಳನ್ನು ಹಂಚಿಕೊಳ್ಳುವ ಬದಲು ಕೇವಲ ಮರೆಮಾಚಿದ ಗುರುತಿನ (Masked Aadhaar Card) ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು. ಇದರಲ್ಲಿ ಆಧಾರ್ನ ಕೊನೆಯ ನಾಲ್ಕು ಸಂಖ್ಯೆಗಳು ಮಾತ್ರವೇ ಕಾಣಿಸುತ್ತವೆ. ವಿಶಿಷ್ಟು ಗುರುತು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಮಾಸ್ಕ್ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.
ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳಲು ಸಾರ್ವಜನಿಕ ಸ್ಥಳದ ಕಂಪ್ಯೂಟರ್, ಇಂಟರ್ನೆಟ್ ಕೆಫೆ, ಕಿಯಾಸ್ಕ್ ಬಳಸುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಒಂದು ವೇಳೆ ಯಾವುದೇ ಕಂಟ್ಯೂಟರ್ನಲ್ಲಿ ಇ-ಆಧಾರ್ ಡೌನ್ಲೋಡ್ ಮಾಡಿದ್ದರೆ, ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ್ದೀರಿ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯು ಎಚ್ಚರಿಸಿದೆ.
ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೇನು? ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಮಾಸ್ಕ್ಡ್ ಆಧಾರ್ ಕಾರ್ಡ್ನಲ್ಲಿ ಆಧಾರ್ನ ಎಲ್ಲಾ 12 ಅಂಕಿಗಳು ಕಾಣಿಸುವುದಿಲ್ಲ. ಅದರ ಬದಲಿಗೆ ಕೇವಲ 4 ಅಂಕಿಗಳು ಮಾತ್ರವೇ ಕಾಣುತ್ತಿರುತ್ತವೆ. ಮಾಸ್ಕ್ಡ್ ಆಧಾರ್ ಕಾರ್ಡ್ನ ಪ್ರತಿಯನ್ನು ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮಾಸ್ಕ್ಡ್ ಆಧಾರ್ ಡೌನ್ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ…
1) https://myaadhaar.uidai.gov.in/ ವೆಬ್ಸೈಟ್ಗೆ ಹೋಗಿ
2) ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ
3) ‘Do you want a masked Aadhaar’ ಮಾಸ್ಕ್ಡ್ ಆಧಾರ್ ಡೌನ್ಲೋಡ್ ಮಾಡಿಕೊಳ್ಳುವ ಆಯ್ಕೆ ಕ್ಲಿಕ್ ಮಾಡಿ
4) ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಆಧಾರ್ ಕಾರ್ಡ್ನ ಕೊನೆಯ ನಾಲ್ಕು ಅಂಕಿಗಳಿರುವ ಪ್ರತಿಯೊಂದನ್ನು ಪಡೆಯಿರಿ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Sun, 29 May 22