ಜಮ್ಮುವಿನ ಹೀರಾನಗರ ಸೆಕ್ಟರ್‌ನಲ್ಲಿ ಸ್ಫೋಟಕ ಹೊಂದಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮುವಿನ ಹೀರಾನಗರ ಸೆಕ್ಟರ್‌ನಲ್ಲಿ ಸ್ಫೋಟಕ ಹೊಂದಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಪಾಕ್ ಡ್ರೋನ್

Jammu and Kashmir ಗಡಿ ಭಾಗದಿಂದ ಬರುತ್ತಿದ್ದ ಇದನ್ನು ತಲ್ಲಿ ಹರಿಯ ಚಕ್ ಪ್ರದೇಶದಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ. ಕಥುವಾ ಜಿಲ್ಲೆಯ ರಾಜ್‌ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲಿ ಹರಿಯ ಚಕ್ ಪ್ರದೇಶದಲ್ಲಿ ಡ್ರೋನ್ ಚಟುವಟಿಕೆಯನ್ನು ಗಮನಿಸಿ...

TV9kannada Web Team

| Edited By: Rashmi Kallakatta

May 29, 2022 | 4:39 PM

ಜಮ್ಮು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾ ಜಿಲ್ಲೆಯ (Kathua) ಹೀರಾನಗರ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ (Pakistani Drone) ಅನ್ನು ಭಾನುವಾರ ಮುಂಜಾನೆ ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಡಿ ಭಾಗದಿಂದ ಬರುತ್ತಿದ್ದ ಇದನ್ನು ತಲ್ಲಿ ಹರಿಯ ಚಕ್ ಪ್ರದೇಶದಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ. ಕಥುವಾ ಜಿಲ್ಲೆಯ ರಾಜ್‌ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲಿ ಹರಿಯ ಚಕ್ ಪ್ರದೇಶದಲ್ಲಿ ಡ್ರೋನ್ ಚಟುವಟಿಕೆಯನ್ನು ಗಮನಿಸಿ ಪ್ರತಿದಿನ ಬೆಳಿಗ್ಗೆ ಪೊಲೀಸರ ಶೋಧ ತಂಡವನ್ನು ಅಂಥಾ ಪ್ರದೇಶಗಳಿಗೆ ನಿಯಮಿತವಾಗಿ ಕಳುಹಿಸಲಾಗುತ್ತಿದೆ. ಇಂದು ಮುಂಜಾನೆ ಪೊಲೀಸರ ಶೋಧ ತಂಡವು ಗಡಿ ಭಾಗದಿಂದ ಡ್ರೋನ್ ಬರುತ್ತಿರುವುದನ್ನು ಗಮನಿಸಿ ಅವರು ಗುಂಡು ಹಾರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ. ಸ್ಫೋಟಕ ಹೊಂದಿದ್ದ ಡ್ರೋನ್ ಅನ್ನು ಹೊಡೆದುರುಳಿಸಲಾಗಿದ್ದು, ಇದನ್ನು ಬಾಂಬ್ ನಿಷ್ಕ್ರಿಯ ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಡ್ರೋನ್‌ನಲ್ಲಿ ಮೂರು ಪ್ಯಾಕೆಟ್‌ಗಳ ಸ್ಫೋಟಕ ಇತ್ತು ಎಂದು ತಿಳಿದು ಬಂದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹರಿಯ ಚಕ್ ಪ್ರದೇಶವು ಯಾವಾಗಲೂ ಪಾಕಿಸ್ತಾನಿ ಭಯೋತ್ಪಾದಕರ ಒಳನುಸುಳುವಿಕೆಗೆ ಆದ್ಯತೆಯ ಮಾರ್ಗವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳ ಮತ್ತು ವಿವಿಧ ಭಯೋತ್ಪಾದಕ ಸಂಘಟನೆಗಳ ಬೆದರಿಕೆಗಳನ್ನು ಗಮನಿಸಿದರೆ, ಜೂನ್ 30 ರಿಂದ ದಕ್ಷಿಣ ಕಾಶ್ಮೀರ ಹಿಮಾಲಯದ 13,000 ಅಡಿ ಎತ್ತರದಲ್ಲಿರುವ ಗುಹಾ ದೇಗುಲಕ್ಕೆ ಮುಂಬರುವ ವಾರ್ಷಿಕ ಅಮರನಾಥ ಯಾತ್ರೆಯು ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದೆ. ಭಾರತದ ಅತ್ಯಂತ ಪೂಜ್ಯ ಹಿಂದೂ ತೀರ್ಥಯಾತ್ರೆಗಳಲ್ಲಿ ಒಂದಾದ ಈ ಯಾತ್ರೆಯು ಎರಡು ವರ್ಷಗಳ ಬಳಿಕ ನಡೆಯಲಿದೆ. 2020 ಮತ್ತು 2021 ರಲ್ಲಿ,ದೇಶದಲ್ಲಿ ಕೊವಿಡ್  ಸಾಂಕ್ರಾಮಿಕದಿಂದಾಗಿ ತೀರ್ಥಯಾತ್ರೆಯನ್ನು ನಡೆಸಲಾಗಲಿಲ್ಲ.

ಡ್ರೋನ್‌ನಲ್ಲಿದ್ದ ಸ್ಫೋಟಕವನ್ನು ಪರಿಶೀಲಿಸಿದ ಡ್ರೋನ್ ಬಾಂಬ್ ನಿಷ್ಕ್ರಿಯ ದಳವು ಏಳು ಮ್ಯಾಗ್ನೆಟಿಕ್ ಬಾಂಬ್‌ಗಳು ಮತ್ತು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳಿಗೆ (UBGL) ಹೊಂದಿಕೆಯಾಗುವ ಏಳು ಗ್ರೆನೇಡ್‌ಗಳನ್ನು ಪತ್ತೆ ಮಾಡಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ಡ್ರೋನ್​​ನಲ್ಲಿ 7 ಮ್ಯಾಗ್ನೆಟಿಕ್ ಮಾದರಿಯ ಬಾಂಬ್‌ಗಳ ಎಲ್ಇಡಿಗಳು ಮತ್ತು 7 ಯುಬಿಜಿಎಲ್​​ಗಳನ್ನು  ವಶಪಡಿಸಿಕೊಳ್ಳಲಾಗಿದೆ. ಈ ವಸ್ತುವನ್ನು ವಶಪಡಿಸಿಕೊಳ್ಳುವ ಮೂಲಕ ನಾವು ದೊಡ್ಡ ಅನಾಹುತ ತಪ್ಪಿಸಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಥುವಾ, ಆರ್‌ಸಿ ಕೊತ್ವಾಲ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರನ್ನು ಹುಡುಕಿ ಹತ್ಯೆ ಮಾಡುವ ಭಯೋತ್ಪಾದಕ ದಾಳಿಗಳು ಭದ್ರತಾ ಸಂಸ್ಥೆಯಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿದೆ.  ಅದೇ ವೇಳೆ  ಇತ್ತೀಚೆಗೆ ಹೆಚ್ಚಿದ ಡ್ರೋನ್ ಚಟುವಟಿಕೆ ಮತ್ತು ಮೇ 4 ರಂದು ಸಾಂಬಾ ಸೆಕ್ಟರ್‌ನ ಚಕ್ ಫಕ್ವಿರಾ ಗ್ರಾಮದಲ್ಲಿ ಟ್ರಾನ್ಸ್-ಬಾರ್ಡರ್ ಸುರಂಗದ ಪತ್ತೆ ಭದ್ರತಾ ಪಡೆಗಳಿಗೆ “ಕಠಿಣ ಸಮಯ” ಎಂದು ಸೂಚಿಸುತ್ತದೆ.

2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಅಮರನಾಥ ತೀರ್ಥಯಾತ್ರೆ ಈ ಬಾರಿ ಹೆಚ್ಚಿನ ಮಹತ್ವ ಹೊಂದಿದೆ.

ಅಲ್ಪಸಂಖ್ಯಾತರ ಹತ್ಯೆ ಪ್ರಕರಣಗಳ ಹಿನ್ನಲೆಯಲ್ಲಿಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ 15,000 ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮುಂಬರುವ ಅಮರನಾಥ ಯಾತ್ರೆ ವೇಳೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 400 ತುಕಡಿಗಳನ್ನು ಇಲ್ಲಿ ನಿಯೋಜಿಸಲಾಗುವುದು. ತೀರ್ಥಯಾತ್ರೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸಿಆರ್‌ಪಿಎಫ್ ಹೆಚ್ಚಾಗಿ ಹೊತ್ತಿದ್ದರೂ, ದೇವಾಲಯವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸಲು ಸೇನಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆಗೆ ಬಿಎಸ್ಎಫ್, ಐಟಿಬಿಪಿ ಮತ್ತು ಎಸ್ಎಸ್ಬಿ ನಂತಹ ಇತರ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು ಸಹ ನಿಯೋಜಿಸಲಾಗುವುದು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada