ನವದೆಹಲಿ: ಆಪರೇಷನ್ ಗಂಗಾ (Operation Ganga) ಯೋಜನೆಯ ಅಡಿಯಲ್ಲಿ ಉಕ್ರೇನ್‌ನ (Ukraine) ನೆರೆಯ ದೇಶಗಳಿಂದ ವಿಶೇಷ ವಿಮಾನಗಳ ಮೂಲಕ ಸುಮಾರು 10,800 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ವಾಯುಪಡೆಯ (Indian Air Force) ಮೂರು C-17 ವಿಮಾನಗಳು ಮತ್ತು 14 ನಾಗರಿಕ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಮತ್ತೊಂದು ನಾಗರಿಕ ವಿಮಾನವು ಇಂದು ರಾತ್ರಿಯೊಳಗೆ ಆಗಮಿಸುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ಪ್ರಕಾರ, C-17 ವಿಮಾನವು 630 ಪ್ರಯಾಣಿಕರನ್ನು ಕರೆದೊಯ್ದಿತ್ತು. ಆದರೆ, ನಾಗರಿಕ ವಿಮಾನಗಳು 9,364 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದವು. 7 ಐಎಎಫ್ ವಿಮಾನಗಳು ಒಟ್ಟು 1,428 ಭಾರತೀಯ ಪ್ರಜೆಗಳನ್ನು ಮರಳಿ ಕರೆತಂದಿವೆ ಮತ್ತು ಉಕ್ರೇನ್‌ಗೆ 9.7 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ.
ಇಂದು ನಾಗರಿಕ ವಿಮಾನಗಳಲ್ಲಿ ಬುಕಾರೆಸ್ಟ್ (ರೊಮೇನಿಯಾ), 2 ಕೊಸಿಸ್ (ಸ್ಲೋವಾಕಿಯಾ), 4 ಬುಡಾಪೆಸ್ಟ್ (ಹಂಗೇರಿ), 3 ರ್ಜೆಸ್ಜೋವ್ (ಪೋಲೆಂಡ್) ನಿಂದ 4 ವಿಮಾನಗಳು ಸೇರಿದ್ದವು. IAF ಬುಕಾರೆಸ್ಟ್‌ನಿಂದ 2 ಮತ್ತು ಬುಡಾಪೆಸ್ಟ್‌ನಿಂದ 1 ವಿಮಾನಗಳ ಮೂಲಕ ಭಾರತೀಯರನ್ನು ವಾಪಾಸ್ ಕರೆತಂದಿದೆ. ಶನಿವಾರ 11 ವಿಶೇಷ ನಾಗರಿಕ ವಿಮಾನಗಳು 2,200ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರುವ ನಿರೀಕ್ಷೆಯಿದೆ. 10 ಹೊಸ ದೆಹಲಿಯಲ್ಲಿ ಮತ್ತು ಒಂದು ಮುಂಬೈನಲ್ಲಿ ಇಳಿಯಲಿದೆ. ಐದು ವಿಮಾನಗಳು ಬುಡಾಪೆಸ್ಟ್‌ನಿಂದ, ಎರಡು ರ್ಜೆಸ್ಜೋವ್‌ನಿಂದ ಮತ್ತು ನಾಲ್ಕು ಸುಸೇವಾದಿಂದ ಸಂಚರಿಸಲಿವೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿ.ಕೆ. ಸಿಂಗ್ ವಹಿಸಿಕೊಂಡಿದ್ದು, ಅದಕ್ಕೆಂದು ಈಗಾಗಲೇ ಉಕ್ರೇನ್‌ಗೆ ಹೊಂದಿಕೊಂಡಿರುವ ದೇಶಗಳಿಗೆ ಹೋಗಿದ್ದಾರೆ. ಭಾರತೀಯ ನಾಗರಿಕ ವಿಮಾನಗಳು ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ನಿಯಮಿತವಾಗಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುತ್ತಿವೆ.
ಒಟ್ಟಾರೆಯಾಗಿ, 31 ವಿಮಾನಗಳು ಮಾರ್ಚ್ 8ರವರೆಗೆ ಕಾರ್ಯ ನಿರ್ವಹಿಸಲಿದ್ದು, 6,300ಕ್ಕೂ ಹೆಚ್ಚು ಜನರನ್ನು ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ವಿಮಾನಗಳು ಸುಮಾರು 180 ಜನರ ಸಾಮರ್ಥ್ಯವನ್ನು ಹೊಂದಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ಕ್ರಮವಾಗಿ 250 ಮತ್ತು 216 ಪ್ರಯಾಣಿಕರನ್ನು ಸಾಗಿಸಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Operation Ganga: ಉಕ್ರೇನ್ ಸಂಘರ್ಷ; ಪ್ರಧಾನಿ ಮೋದಿ ನೇತೃತ್ವದಲ್ಲಿ 5ನೇ ಬಾರಿಗೆ ಉನ್ನತ ಮಟ್ಟದ ಸಭೆ
Published On - 6:24 pm, Fri, 4 March 22