Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದಾಗಿ 13 ವರ್ಷಗಳ ನಂತರ ಅತ್ಯಧಿಕ ಮಟ್ಟಕ್ಕೆ ಏರಿದ ಗೋಧಿ ಬೆಲೆ

Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದಾಗಿ 13 ವರ್ಷಗಳ ನಂತರ ಅತ್ಯಧಿಕ ಮಟ್ಟಕ್ಕೆ ಏರಿದ ಗೋಧಿ ಬೆಲೆ
ಗೋಧಿ (ಸಾಂದರ್ಭಿಕ ಚಿತ್ರ)

ರಷ್ಯಾ- ಉಕ್ರೇನ್ ಯುದ್ಧದ ಮಧ್ಯೆ ಅಗತ್ಯ ಆಹಾರ ವಸ್ತುವಾದ ಗೋಧಿಯ ಬೆಲೆ 2008ರ ನಂತರ ಅತ್ಯಧಿಕ ಮಟ್ಟಕ್ಕೆ ತಲುಪಿದೆ. ಅದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Mar 04, 2022 | 12:25 PM

ರಷ್ಯಾ- ಉಕ್ರೇನ್ ಯುದ್ಧವು (Russia- Ukraine War) ವಿಶ್ವದ ಶೇ 25ಕ್ಕಿಂತ ಹೆಚ್ಚು ರಫ್ತುಗಳನ್ನು ಸ್ಥಗಿತಗೊಳಿಸಿದ ಕಾರಣಕ್ಕೆ ಜಾಗತಿಕ ಕೊರತೆ ಆತಂಕದಲ್ಲಿ ಬ್ರೆಡ್‌ನಿಂದ ಕುಕೀಸ್ ತನಕ ಮತ್ತು ನೂಡಲ್ಸ್‌ವರೆಗೆ ಎಲ್ಲದರಲ್ಲೂ ಬಳಸಲಾಗುವ ಗೋಧಿ ಬೆಲೆಯು 2008ರ ನಂತರ ಅತ್ಯಧಿಕ ಮಟ್ಟಕ್ಕೆ ಏರಿದೆ. ಬೆಲೆಗಳು ಸುಮಾರು ಶೇ 40ರಷ್ಟು ದಾಖಲೆಯ ಸಾಪ್ತಾಹಿಕ ಗಳಿಕೆಯತ್ತ ಸಾಗುತ್ತಿದ್ದು, ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಮತ್ತು ಅಮೆರಿಕ ಹಾಗೂ ಯುರೋಪ್​ನಿಂದ ರಷ್ಯಾದ ಮೇಲೆ ವ್ಯಾಪಕ ನಿರ್ಬಂಧಗಳನ್ನು ವಿಧಿಸಿದಾಗಿನಿಂದ ಏರಿಕೆ ಆಗಿದೆ. ಈ ಯುದ್ಧವು ಉಕ್ರೇನ್‌ನಲ್ಲಿ ಪ್ರಮುಖ ಬಂದರುಗಳನ್ನು ಮುಚ್ಚಿದೆ ಮತ್ತು ಸಾಗಣೆ ಹಾಗೂ ಸಾರಿಗೆ ಸಂಪರ್ಕಗಳನ್ನು ಕಡಿತಗೊಳಿಸಿದೆ. ಈ ಕದನವು ಮುಂಬರುವ ತಿಂಗಳುಗಳಲ್ಲಿ ಬೆಳೆಗಳನ್ನು ಬೆಳೆಯುವುದಕ್ಕೆ ಆತಂಕ ತಂದಿದೆ. ಖರೀದಿದಾರರು ನಿರ್ಬಂಧಗಳ ಸಂಕೀರ್ಣತೆಯಿಂದ ಹೊರಬರುವುದಕ್ಕೆ ಕಷ್ಟಪಡುತ್ತಿದ್ದು, ಗಗನಕ್ಕೇರುತ್ತಿರುವ ವಿಮೆ ಹಾಗೂ ಸರಕು ಸಾಗಣೆ ವೆಚ್ಚದಿಂದ ರಷ್ಯಾದೊಂದಿಗಿನ ವ್ಯಾಪಾರವು ಬಹುತೇಕ ಇಲ್ಲದಂತಾಗಿದೆ.

ರಷ್ಯಾ ಮತ್ತು ಉಕ್ರೇನ್ ದೇಶಗಳು ಜೋಳ, ಬಾರ್ಲಿ ಮತ್ತು ಸೂರ್ಯಕಾಂತಿ ಎಣ್ಣೆಯ ಪ್ರಮುಖ ಪೂರೈಕೆದಾರರು. 2012ರಿಂದ ಜೋಳವು ಅತ್ಯಧಿಕ ಮಟ್ಟಕ್ಕೆ ಏರಿದೆ. ಆದರೆ ಸೋಯಾಬೀನ್ ಎಣ್ಣೆ ಮತ್ತು ತಾಳೆ ಎಣ್ಣೆ ದಾಖಲೆ ಮಟ್ಟವನ್ನು ತಲುಪಿದೆ. ಈ ಮಧ್ಯೆ, ಜೋಳ ಮತ್ತು ಸೋಯಾಬೀನ್‌ಗಳ ವಿಶ್ವದ ಅತಿದೊಡ್ಡ ಆಮದುದಾರ ಮತ್ತು ಗೋಧಿಯ ಅಗ್ರ ಖರೀದಿದಾರರಲ್ಲಿ ಒಂದಾದ ಚೀನಾ, ಜಾಗತಿಕ ಮಾರುಕಟ್ಟೆಗಳಲ್ಲಿ ಅಗತ್ಯ ಪೂರೈಕೆಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಬೆಲೆಗಳು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತಿದೆ. ಶಿಕಾಗೋದಲ್ಲಿ ಶುಕ್ರವಾರ ಗೋಧಿ ಫ್ಯೂಚರ್‌ಗಳು ವಿನಿಮಯ ಮಿತಿಯಿಂದ ಜಿಗಿದವು. ಬುಶೆಲ್‌ಗೆ ಶೇ 6.6ರಷ್ಟು ಮೇಲೇರಿ, ಯುಎಸ್​ಡಿ 12.09ಕ್ಕೆ ಏರಿತು. ಬೆಲೆಗಳು ಇನ್ನೂ ಹೆಚ್ಚಾಗುವ ಮುನ್ಸೂಚನೆಗಳಿದ್ದು, ಆಹಾರ ಹಣದುಬ್ಬರದ ಮೇಲೆ ಒತ್ತಡವನ್ನು ಹೆಚ್ಚಿಸಿದೆ ಮತ್ತು ಯುದ್ಧ ಹಾಗೂ ನಿರ್ಬಂಧಗಳು ಬೆಳವಣಿಗೆಯನ್ನು ಘಾಸಿಗೊಳಿಸುತ್ತಿರುವಾಗ ಮತ್ತು ದೀರ್ಘಕಾಲದವರೆಗೆ ವಿಶ್ವ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿರುವ ಸಮಯದಲ್ಲಿ ದರಗಳನ್ನು ಎಷ್ಟು ಹೆಚ್ಚಿಸಬೇಕೆಂಬ ಬಗ್ಗೆ ಕೇಂದ್ರೀಯ ಬ್ಯಾಂಕರ್‌ಗಳ ಸಂದಿಗ್ಧವನ್ನು ಗಾಢವಾಗಿಸುತ್ತಿದೆ.

ಸಿಟಿಗ್ರೂಪ್ ಇಂಕ್​ ಹೇಳಿರುವ ಪ್ರಕಾರ, ಒಂದು ವೇಳೆ ಕಪ್ಪು ಸಮುದ್ರದ ರಫ್ತುಗಳು ನಿಂತುಹೋದರೆ “ತೀವ್ರ ಬುಲ್” ಸನ್ನಿವೇಶದಲ್ಲಿ ಬೆಲೆಗಳು ಯುಎಸ್​ಡಿ 14 ಅಥವಾ ಯುಎಸ್​ಡಿ 14.50ರಷ್ಟು ಹೆಚ್ಚಾಗಬಹುದು. 2020ರ ಮೇ ತಿಂಗಳಲ್ಲಿ ಶಿಕಾಗೋ ಫ್ಯೂಚರ್‌ಗಳು ಅತ್ಯಧಿಕ ಮಟ್ಟದಲ್ಲಿ ಇರುವುದರೊಂದಿಗೆ ಅಕ್ಕಿ ಬೆಲೆ ಕೂಡ ಆತಂಕದಲ್ಲಿ ಮುಳುಗಿದೆ. ಬೆಲೆ ಏರಿಕೆಯು ಪ್ರಮುಖ ಆಮದುದಾರರಿಗೆ ಸರಬರಾಜುಗಳ ಬಗ್ಗೆ ಕಳವಳವನ್ನು ಹೆಚ್ಚಿಸುತ್ತಿದೆ ಮತ್ತು ಆಹಾರ ರಫ್ತುಗಳನ್ನು ಸೀಮಿತಗೊಳಿಸುವ ಮೂಲಕ ತಮ್ಮ ಮಾರುಕಟ್ಟೆಗಳನ್ನು ರಕ್ಷಿಸಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಗೋಧಿಯ ದೊಡ್ಡ ಆಮದುದಾರ ದೇಶವಾದ ಈಜಿಪ್ಟ್ ಒಂದು ಉದಾಹರಣೆಯಾಗಿದೆ. ವಿಶ್ವಸಂಸ್ಥೆಯ ಪ್ರಕಾರ, 2020ರಲ್ಲಿ ರಷ್ಯಾ ಮತ್ತು ಉಕ್ರೇನ್ ತನ್ನ ಗೋಧಿ ಆಮದಿನ ಶೇ 86ರಷ್ಟನ್ನು ವಿತರಿಸಿದೆ ಮತ್ತು ಯುದ್ಧ, ನಿರ್ಬಂಧಗಳು ಮತ್ತು ಹೆಚ್ಚುತ್ತಿರುವ ವೆಚ್ಚಗಳು ಧಾನ್ಯವನ್ನು ಸಂಗ್ರಹಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ. ಇದು ಉತ್ತರ ಆಫ್ರಿಕಾದ ರಾಷ್ಟ್ರದಲ್ಲಿ ಹೆಚ್ಚುವರಿ ಪ್ರಭಾವವನ್ನು ಹೊಂದಿದ್ದು, ಅಲ್ಲಿ ಆಹಾರದ ವೆಚ್ಚಗಳು ಒಂದು ದಶಕದ ಹಿಂದೆ ಅರಬ್ ಸ್ಪ್ರಿಂಗ್ ಪ್ರತಿಭಟನೆಗಳಿಗೆ ಕಾರಣವಾಗಿದ್ದವು.

ಚೀನೀ ಖರೀದಿದಾರರು ಇತ್ತೀಚೆಗೆ ಅಮೆರಿಕನ್ ಸೋಯಾಬೀನ್‌ನ ಸುಮಾರು 20 ಕಾರ್ಗೋಗಳನ್ನು ಮತ್ತು ಜೋಳದ ಸುಮಾರು 10 ಕಾರ್ಗೋಗಳನ್ನು ಬುಕ್ ಮಾಡಿದ್ದಾರೆ, ಎಂದು ಸಾರ್ವಜನಿಕವಾಗಿ ತಮ್ಮ ಗುರುತು ತಿಳಿಸಲು ಇಚ್ಛಿಸದ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಏರುತ್ತಿರುವ ಬೆಲೆಗಳ ಸಂದರ್ಭದಲ್ಲಿ ಸರಬರಾಜನ್ನು ಸಂಗ್ರಹಿಸುವಲ್ಲಿ ದೇಶ ನೀಡುತ್ತಿರುವ ಗಮನಕ್ಕೆ ಈ ಕ್ರಮವು ಮತ್ತೊಂದು ಉದಾಹರಣೆಯಾಗಿದೆ. ಜೋಳದ ಫ್ಯೂಚರ್ಸ್ ಈ ವಾರ ಶೇ 17ರಷ್ಟು ಹೆಚ್ಚಾಗಿದೆ ಮತ್ತು 2008ರಿಂದ ಈಚೆಗೆ ಅತಿ ದೊಡ್ಡ ಸಾಪ್ತಾಹಿಕ ಲಾಭದತ್ತ ಸಾಗುತ್ತಿದೆ. ವಿಶ್ವದ ಅಗ್ರ ಗೋಧಿ ರಫ್ತುದಾರ ದೇಶಗಳಲ್ಲಿ ಒಂದಾದ ಅರ್ಜೆಂಟೀನಾ 2024ರ ಆರಂಭದಲ್ಲಿ ಸ್ಥಳೀಯ ಮಿಲ್ಲರ್‌ಗಳಿಗೆ ಸರಬರಾಜುಗಳನ್ನು ಖಾತ್ರಿಪಡಿಸಲು ಮತ್ತು ಹಿಟ್ಟು ಹಾಗೂ ಪಾಸ್ಟಾದಂಥದ್ದರ ದೇಶೀಯ ಬೆಲೆಗಳನ್ನು ಕಡಿಮೆ ಮಾಡಲು ವ್ಯವಸ್ಥೆಯನ್ನು ಹೊಂದಿರುತ್ತದೆ. “ಯುದ್ಧ ಮತ್ತು ಹೆಚ್ಚಿನ ನಿರಂತರ ಗೋಧಿ ಬೆಲೆಗಳ ಜಾಗತಿಕ ಸನ್ನಿವೇಶದಲ್ಲಿ ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ಬೆಲೆಗಳನ್ನು ಬೇರ್ಪಡಿಸುವ ಅಗತ್ಯಕ್ಕೆ ಈ ವ್ಯವಸ್ಥೆಯು ಪ್ರತಿಕ್ರಿಯೆಯಾಗಿದೆ,” ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Stock Market: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ತತ್ತರಿಸಿದ ಷೇರುಪೇಟೆ; ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ

Follow us on

Related Stories

Most Read Stories

Click on your DTH Provider to Add TV9 Kannada