UP Assembly Election: ಉತ್ತರ ಪ್ರದೇಶದ ದೇವಬಂದ್​​ನಲ್ಲಿ ಅಮಿತ್​ ಶಾ ನಡೆಸಬೇಕಿದ್ದ ಚುನಾವಣಾ ಪ್ರಚಾರ ಮೊಟಕು; ಅಂಥದ್ದೇನಾಯ್ತು?

ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸದ್ಯ ಯಾವುದೇ ರಾಜಕೀಯ ಪಕ್ಷಗಳಿಗೆ ರೋಡ್​ ಶೋ ನಡೆಸಲಾಗಲಿ, ದೊಡ್ಡಮಟ್ಟದ ಪ್ರಚಾರ ಸಭೆ ನಡೆಸಲಾಗಲಿ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಹಾಗಿದ್ದಾಗ್ಯೂ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸ್ವಲ್ಪ ಸಡಿಲಿಕೆ ನೀಡಿದೆ

UP Assembly Election: ಉತ್ತರ ಪ್ರದೇಶದ ದೇವಬಂದ್​​ನಲ್ಲಿ ಅಮಿತ್​ ಶಾ ನಡೆಸಬೇಕಿದ್ದ ಚುನಾವಣಾ ಪ್ರಚಾರ ಮೊಟಕು; ಅಂಥದ್ದೇನಾಯ್ತು?
ದೇವಬಂದ್​​ನಲ್ಲಿ ಗೃಹ ಸಚಿವ ಅಮಿತ್​ ಶಾ
Follow us
TV9 Web
| Updated By: Lakshmi Hegde

Updated on: Jan 29, 2022 | 4:43 PM

ಉತ್ತರ ಪ್ರದೇಶದ ದೇವಬಂದ್​ನಲ್ಲಿ (Deoband In Uttar Pradesh) ಇಂದು ನಡೆಸಬೇಕಿದ್ದ ಚುನಾವಣಾ ಪ್ರಚಾರವನ್ನು ಗೃಹ ಸಚಿವ ಅಮಿತ್​ ಶಾ (Union Home Minister Amit Shah) ಮೊಟಕುಗೊಳಿಸಿದ್ದಾರೆ. ಚುನಾವಣಾ ಆಯೋಗ ಹೇರಿರುವ ಮಿತಿಗೂ ಮೀರಿ ಇಲ್ಲಿ ಜನ ಸೇರಿದ್ದ ಹಿನ್ನೆಲೆಯಲ್ಲಿ ಪ್ರಚಾರವನ್ನು ಸದ್ಯ ಕೈಬಿಟ್ಟಿದ್ದಾರೆ. ನಂತರ ಮುಜಾಫರ್​ನಗರದ ದೇವಬಂದ್​ ಬಜಾರ್​ಗೆ ತೆರಳಿದ ಅಮಿತ್​ ಶಾ, ಅಲ್ಲಿನ ಶಿವನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ, ಜನ ಸಂಪರ್ಕ ಅಭಿಯಾನದಡಿ (Jan Sampark Abhiyan) ಮತದಾರರನ್ನು ಸಂಪರ್ಕಿಸಿ, ಚುನಾವಣಾ ಪ್ರಚಾರ ಕರಪತ್ರ ನೀಡಿದ್ದಾರೆ. 

ಗೃಹ ಸಚಿವ ಅಮಿತ್​ ಶಾ ಉತ್ತರಪ್ರದೇಶದಲ್ಲಿ ಮನೆ-ಮನೆ ಪ್ರಚಾರ ನಡೆಸುತ್ತ, ಜನರಿಗೆ ಕರಪತ್ರ ಹಂಚುತ್ತಿದ್ದಾರೆ. ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಸದ್ಯ ಯಾವುದೇ ರಾಜಕೀಯ ಪಕ್ಷಗಳಿಗೆ ರೋಡ್​ ಶೋ ನಡೆಸಲಾಗಲಿ, ದೊಡ್ಡಮಟ್ಟದ ಪ್ರಚಾರ ಸಭೆ ನಡೆಸಲಾಗಲಿ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಹಾಗಿದ್ದಾಗ್ಯೂ ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸ್ವಲ್ಪ ಸಡಿಲಿಕೆ ನೀಡಿದೆ. ಇಂದು ಕೂಡ ಅಮಿತ್​ ಶಾ ದೇವಬಂದ್​​ನಲ್ಲಿ ಮನೆ-ಮನೆ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಆದರೆ ಒಮ್ಮೆಲೇ ಅತ್ಯಂತ ಹೆಚ್ಚು ಜನ ಸೇರಿದ್ದರಿಂದ, ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ.

ದೇವಬಂದ್​ಗೆ ಭೇಟಿ ನೀಡಿದ ಅಮಿತ್​ ಶಾರನ್ನು ಅಲ್ಲಿನ ಜನರು ಪ್ರೀತಿಯಿಂದ ಸ್ವಾಗತಿಸಿ, ಬಿಜೆಪಿ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದ ವಿಡಿಯೋಗಳೂ ವೈರಲ್​ ಆಗಿವೆ. ಹಾಗೇ, ತಮ್ಮ ದೇವಬಂದ್​ ಪ್ರಚಾರ ಕೆಲವೇ ಹೊತ್ತು ನಡೆದರೂ, ಅಲ್ಲಿನ ಜನರು ಬಿಜೆಪಿಗೆ ಅಪಾರ ಬೆಂಬಲ ವ್ಯಕ್ತಪಡಿಸಿದ್ದು ಕಂಡುಬಂತು. ದೇವಬಂದ್​ ಜನತೆಯ ಪ್ರೀತಿ-ವಿಶ್ವಾಸ ಬಿಜೆಪಿಗೆ ಇದೆ ಎಂದು ಅಮಿತ್​ ಶಾ ಕೂಡ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇಂದು ದೇವ್​ಬಂದ್​​ನಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್​ ಶಾರಿಗೆ ಅಲ್ಲಿನ ಮಹಿಳೆಯರು, ಮಕ್ಕಳು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಹೂಮಳೆಗರೆದಿದ್ದಾರೆ. ಒಂದಷ್ಟು ಮಂದಿ ಡ್ರಮ್​​ ಬಾರಿಸುತ್ತ, ರಸ್ತೆಗಳಲ್ಲಿ ನೃತ್ಯ ಮಾಡುವ ಮೂಲಕ ಅಮಿತ್​ ಶಾರನ್ನು ಸ್ವಾಗತಿಸಿದ್ದಾರೆ.  ಒಟ್ಟಾರೆ ತುಂಬ ಉತ್ಸಾಹಭರಿತರಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:  Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!