Lakhimpur Kheri Violence: ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಮುಖಂಡನ ಮನೆಗೆ ಭೇಟಿ ಕೊಟ್ಟ ಕೇಂದ್ರ ಸಚಿವ ಅಜಯ್ ಮಿಶ್ರಾ; ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಂತೆ !
ಬಿಜೆಪಿಯ ಮುಖಂಡ ಶ್ಯಾಮ್ ಸುಂದರ್ ನಿಶಾದ್ ಎಂಬುವರು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಭಾನುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ, ಬಿಜೆಪಿ ನಾಯಕರಾದ ಅರವಿಂದ್ ಸಿಂಗ್ ಸಂಜಯ್, ಯೋಗೇಶ್ ವರ್ಮಾ ಮತ್ತಿತರರು ಭೇಟಿಕೊಟ್ಟಿದ್ದರು.
ಲಖಿಂಪುರ ಖೇರಿಯಲ್ಲಿ ಹಿಂಸಾಚಾರ (Lakhimpur Violence) ನಡೆದು ಒಟ್ಟು 8 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ರೈತರು. ಇನ್ನೂ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಬಂಧಿತರಾಗಿದ್ದಾರೆ. ಇದೀಗ ಘಟನೆ ನಡೆದು ಸುಮಾರು ಒಂದು ವಾರಕ್ಕೂ ಅಧಿಕದಿನಗಳಾದ ನಂತರ ಕೇಂದ್ರ ಸಚಿವ ಅಜಯ್ ಮಿಶ್ರಾ, ನಿನ್ನೆ ಮೃತ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಬಿಜೆಪಿಯ ಮುಖಂಡ ಶ್ಯಾಮ್ ಸುಂದರ್ ನಿಶಾದ್ ಎಂಬುವರು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಭಾನುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ, ಬಿಜೆಪಿ ನಾಯಕರಾದ ಅರವಿಂದ್ ಸಿಂಗ್ ಸಂಜಯ್, ಯೋಗೇಶ್ ವರ್ಮಾ ಮತ್ತಿತರರು ಭೇಟಿಕೊಟ್ಟಿದ್ದರು. ಹಾಗೇ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲ, ಶ್ಯಾಮ್ ಸುಂದರ್ ಕುಟುಂಬದವರಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
ಇದೇ ಹೊತ್ತಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಲಖಿಂಪುರ ಸರ್ದಾರ್ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್ ವರ್ಮಾ, ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಒಟ್ಟು 37 ಜನರಿಗೆ ಸಮನ್ಸ್ ನೀಡಲಾಗಿದೆ. ಅವರೆಲ್ಲರ ವಿಚಾರಣೆಯೂ ಶೀಘ್ರವೇ ಶುರುವಾಗಲಿದೆ ಎಂದು ತಮಗೆ ಸ್ಥಳೀಯ ಪೊಲೀಸ್ ಅಧಿಕಾರಿ ಹೇಳಿದ್ದಾಗಿ ತಿಳಿಸಿದ್ದಾರೆ.
ಅದಾದ ಬಳಿಕ ಪ್ರತಿಕ್ರಿಯೆ ನೀಡಿದ ಅಜಯ್ ಮಿಶ್ರಾ, ಅಂದು ಲಖಿಂಪುರ ಖೇರಿಯಲ್ಲಿ ಪೊಲೀಸರು, ಸ್ಥಳೀಯ ಆಡಳಿತ ಅಧಿಕಾರಿಗಳೆಲ್ಲ ಇದ್ದರು. ಹಾಗಿದ್ದಾಗ್ಯೂ ಈ ಘಟನೆ ನಡೆದಿದೆ ಎಂದರೆ ಅದಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ರೈತರು ಪ್ರತಿಭಟನೆ ನಡೆಸುತ್ತಿದ್ದ ರಸ್ತೆಗೆ ಬ್ಯಾರಿಕೇಡ್ ಯಾಕೆ ಹಾಕಿರಲಿಲ್ಲ ಎಂದೂ ಪ್ರಶ್ನಿಸಿದ್ದಾರೆ. ಇನ್ನು ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ಉತ್ತರಪ್ರದೇಶ ರಾಜ್ಯ ಸರ್ಕಾರ ವಿಚಾರಣೆ ನಡೆಸಲಿದೆ. ಯಾರಾದರೂ ತಪ್ಪಿತಸ್ಥರಿದ್ದಾರೆ ಎಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಭರವಸೆಯನ್ನೂ ಬಿಜೆಪಿ ನಾಯಕರು ನೀಡಿದ್ದಾರೆ.
ಇದನ್ನೂ ಓದಿ: ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್ ಡಿಲೀಟ್ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?