ಸೋನಿಯಾ ಗಾಂಧಿಗಾಗಿ ಸದನದಲ್ಲಿ ಕಾಂಗ್ರೆಸ್ ಗದ್ದಲ: ಸೋನಿಯಾಗಿಂತ ದೊಡ್ಡದು ಭಾರತದ Law – ಪ್ರಲ್ಹಾದ್ ಜೋಶಿ
Sonia Gandhi: ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾಂಗ್ರೆಸ್ ಅಧ್ಯಕ್ಷರೇನು ಸೂಪರ್ ಹ್ಯೂಮನ್ ಬೀಯಿಂಗಾ..? ಅವರು ಕಾನೂನಿಗಿಂತ ಮೇಲಿದ್ದಾರಾ? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ: ಸೋನಿಯಾ ಗಾಂಧಿ (Sonia Gandhi) ಸೂಪರ್ ಹ್ಯೂಮನ್ ಬೀಯಿಂಗಾ..? ಕಾನೂನಿಗಿಂತ ದೊಡ್ಡವರಾ..? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ವಾ..? ಹೀಗೆ ಲೋಕಸಭೆಯಲ್ಲಿಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು.
ಕಾಂಗ್ರೆಸ್ ಸದಸ್ಯರು ಹೀಗೆ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನ ವಿರೋಧಿಸಿ ಮಾತಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಸಲಿಗೇ ಇವರಿಗೆ ಏನು ಬೇಕು? ಈಗ ಸೋನಿಯಾ ಗಾಂಧಿ ಪರ ಪ್ರತಿಭಟಿಸುತ್ತಿರುವವರು ನಿನ್ನೆ ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿದ್ರು. ಎರಡೂ ಸದನದಗಳ ಸಭಾಧ್ಯಕ್ಷರು ಸ್ವತಃ ಚರ್ಚೆಗೆ ಅವಕಾಶ ನೀಡೋದಾಗಿ ಹಲವು ಬಾರಿ ಭರವಸೆ ನೀಡಿದರು. ಆದರೂ ಸಹ ಪ್ರತಿಪಕ್ಷಗಳು ಸುಗಮವಾಗಿ ಸದನ ನಡೆಸಲು ಸಹಕರಿಸುತ್ತಿಲ್ಲ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ, ಅವರು ಚರ್ಚೆಯಲ್ಲಿ ಭಾಗವಹಿಸಬೇಕು.
ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾಂಗ್ರೆಸ್ ಅಧ್ಯಕ್ಷರೇನು ಸೂಪರ್ ಹ್ಯೂಮನ್ ಬೀಯಿಂಗಾ..? ಅವರು ಕಾನೂನಿಗಿಂತ ಮೇಲಿದ್ದಾರಾ? ಕಾನೂನಿಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.