ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಿಂದ ಶುಭ ಹಾರೈಕೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 24, 2022 | 2:28 PM

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಮತ್ತು ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ ಎಂದು ಮೋದಿ ಟ್ವೀಟ್.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವರಿಂದ ಶುಭ ಹಾರೈಕೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸೋಮವಾರ (ಜನವರಿ 24) ಆಚರಿಸಲಾಗುತ್ತಿರುವ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು (National Girl Child Day) ಹಲವಾರು ಕೇಂದ್ರ ಸಚಿವರು ಮತ್ತು ನಾಯಕರು ಶುಭ ಹಾರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಹರ್ದೀಪ್ ಪುರಿ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಮತ್ತು ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಸಂದರ್ಭವಾಗಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಗುವಿನ ಅನುಕರಣೀಯ ಸಾಧನೆಗಳನ್ನು ಆಚರಿಸುವ ದಿನವಾಗಿದೆ. ನಮ್ಮ ಸರ್ಕಾರವು ಕೈಗೊಂಡ ಪ್ರತಿಯೊಂದು ಅಭಿವೃದ್ಧಿ ಉಪಕ್ರಮದಲ್ಲಿ, ನಾವು ಹೆಣ್ಣು ಮಗುವನ್ನು ಸಬಲೀಕರಣಗೊಳಿಸಲು ಮತ್ತು ನಮ್ಮ ನಾರಿ ಶಕ್ತಿಯನ್ನು ಬಲಪಡಿಸಲು ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ನಮ್ಮ ಗಮನವು ಹೆಣ್ಣು ಮಗುವಿಗೆ ಘನತೆ ಮತ್ತು ಅವಕಾಶಗಳನ್ನು ಖಾತರಿಪಡಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಹಿಳಾ ಅಭಿವೃದ್ಧಿಯ ಚಿಂತನೆಯನ್ನು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಸಂಕಲ್ಪವಾಗಿ ಬದಲಾಯಿಸಿದರು ಮತ್ತು ಅವಕಾಶಗಳ ಬಾಗಿಲುಗಳನ್ನು ತೆರೆದರು. ಇಂದು ದೇಶದ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಹೆಸರನ್ನು ಬೆಳಗುತ್ತಿದ್ದಾರೆ. ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ದಂದು, ದೇಶದ ಹೆಮ್ಮೆ, ಭಾರತದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.


‘ಬೇಟಿ ಬಚಾವೋ, ಬೇಟಿ ಪಢಾವೋ (BBBP) ಯೋಜನೆಗಳಂತಹ ಯೋಜನೆಗಳನ್ನು ಉಲ್ಲೇಖಿಸಿದ ಅಮಿತ್ ಶಾ ಇದು ಜನರ ಆಂದೋಲನವಾಗಿ ಮಾರ್ಪಟ್ಟಿದೆ ಎಂದು  ಹೇಳಿದರು.


ಭಾರತದಲ್ಲಿ ಸ್ತ್ರೀ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರವು ಜನವರಿ 22, 2015 ರಂದು ಬಿಬಿಪಿಪಿ ಯೋಜನೆಯನ್ನು ಪ್ರಾರಂಭಿಸಿತು.

“ಸ್ಥೈರ್ಯ, ಕೌಶಲ್ಯ ಮತ್ತು ಮಹತ್ವಾಕಾಂಕ್ಷೆಯಿಂದ ದೇಶದ ಹೆಣ್ಣು ಮಕ್ಕಳು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ನಮ್ಮ ಸರ್ಕಾರವು ‘ಮಹಿಳಾ ನೇತೃತ್ವದ ಅಭಿವೃದ್ಧಿ’ಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಗಡ್ಕರಿ ಅವರು ಕೂನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತ ಸರ್ಕಾರವು 2008 ರಲ್ಲಿ ಹೆಣ್ಣು ಮಗುವಿನ ಬಗ್ಗೆ ಸಮಾಜದ ಪ್ರಜ್ಞೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ಘೋಷಿಸಿತು.
ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳು, ತಾರತಮ್ಯ, ಶೋಷಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ.

“ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ, ನಾವು ಭಾರತದ ಹೆಣ್ಣುಮಕ್ಕಳನ್ನು ಆಚರಿಸುತ್ತೇವೆ, ಅವರು ಬಲವಾದ ಸಂಕಲ್ಪ ಮತ್ತು ನಿರ್ಭೀತ ಆದರ್ಶವಾದದೊಂದಿಗೆ, ಪ್ರತಿಯೊಂದು ಕ್ಷೇತ್ರದಲ್ಲೂ ಗುರುತನ್ನು ಸೃಷ್ಟಿಸುತ್ತಿದ್ದಾರೆ. ಈ ದಿನ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಘನತೆಯ ಜೀವನ ನಡೆಸಲು ಅಡ್ಡಿಯಾಗುವ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

ಹೆಣ್ಣು ಮಗುವಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಜಾಗೃತಿ ಅಭಿಯಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ನಾಲ್ಕು ರಾಜ್ಯಗಳ ಚುನಾವಣೆಗೆ ಮುನ್ನ ಏಕ್ ಮೌಕಾ ಆಪ್ ಕೋ ಅಭಿಯಾನ ಪ್ರಾರಂಭಿಸಿದ ಅರವಿಂದ ಕೇಜ್ರಿವಾಲ್