ಜಿಎಸ್ಐ ಹರಾಜಿಗಾಗಿ ಗುರುತಿಸಿದ 100ಜಿ4 ಖನಿಜ ಬ್ಲಾಕ್ಗಳ ಹಸ್ತಾಂತರ; ಇಂದು ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮ
ಭಾರತದ ಭೂವೈಜ್ಞಾನಿಕ ಸಮೀಕ್ಷೆ, ಭೌಗೋಳಿಕವಾಗಿ ಸಾಮರ್ಥ್ಯ ಹೊಂದಿರುವ 100 ಖನಿಜ ಬ್ಲಾಕ್ (ಮಿನರಲ್ ಬ್ಲಾಕ್)ಗಳನ್ನು ಹರಾಜಿಗೆ ಇಡಬಹುದು ಎಂದು ವರದಿ ನೀಡಿದೆ.

ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಿಂದ, ಹರಾಜಿಗೆ ಗುರುತಿಸಲ್ಪಟ್ಟ 100 ಜಿ4 ಸಾಮರ್ಥ್ಯ ಖನಿಜ ಬ್ಲಾಕ್ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ (ಸೆಪ್ಟೆಂಬರ್ 8) ಇಂದು ಮಧ್ಯಾಹ್ನ 3ಗಂಟೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಲ್ಲಿ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವ ರೌಸಾಹೇಬ್ ಪಾಟೀಲ್ ದನ್ವೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟ (FICCI India) ಇಂದು ಲಿಂಕ್ ಶೇರ್ ಮಾಡಿದೆ.
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯನ್ನು 2015ರಲ್ಲಿ ತಿದ್ದುಪಡಿ ಮಾಡಿದಾಗ, ಗಣಿಗಾರಿಕೆಗೆ ಪರವಾನಗಿ ನೀಡುವುದು, ಗುತ್ತಿಗೆ ಕೊಡುವುದು ಇತ್ಯಾದಿ ವಿಚಾರಗಳಲ್ಲಿ ಇನ್ನಷ್ಟು ಪಾರದರ್ಶಕತೆ ತರಲಾಯಿತು. ಹಾಗೇ, ಇದೇ ಕಾಯ್ದೆಯನ್ನು 2021ರ ಮಾರ್ಚ್ನಲ್ಲಿ ಇನ್ನಷ್ಟು ಉದಾರೀಕರಣಗೊಳಿಸಲಾಯಿತು. ಈ ಖನಿಜ ಕ್ಷೇತ್ರ, ಗಣಿಗಾರಿಕೆಯಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ಗಣಿಗಾರಿಕಾ ವಲಯದಿಂದ ರಾಜ್ಯಗಳಿಗೆ ಆದಾಯದ ಪ್ರಮಾಣ ಹೆಚ್ಚಿಸಬೇಕು, ಉತ್ಪಾದನೆ ಅಧಿಕಗೊಳಿಸಬೇಕು, ಖನಿಜ ಸಂಪತ್ತಿನ ಗಣಿಗಳಲ್ಲಿ ಕಾಲಮಿತಿಯ ಕಾರ್ಯಾಚರಣೆ, ಗುತ್ತಿಗೆ ಬದಲಾವಣೆಯ ನಂತರವೂ ಗಣಿಕಾರ್ಯಾಚರಣೆ ಮುಂದುವರಿಕೆ, ಖನಿಜ ಸಂಪನ್ಮೂಲಗಳ ಪರಿಶೋಧನೆ ಮತ್ತು ಹರಾಜಿನ ವೇಗ ಹೆಚ್ಚಳ..ಇತ್ಯಾದಿ ಅಂಶಗಳನ್ನು ಈ ವರ್ಷದ ಎಂಎಂಡಿಆರ್ ಕಾಯ್ದೆ ತಿದ್ದುಪಡಿ ಮಾಡುವಾಗ ಸೇರಿಸಲಾಗಿದೆ.
ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇನ್ನಷ್ಟು ಪುಷ್ಟಿ ಕೊಡುವ ನಿಟ್ಟಿನಲ್ಲಿ ಮಾಡಲಾದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ ತಿದ್ದುಪಡಿ ಅನ್ವಯ, ಭಾರತದ ಭೂವೈಜ್ಞಾನಿಕ ಸಮೀಕ್ಷೆ, ಭೌಗೋಳಿಕವಾಗಿ ಸಾಮರ್ಥ್ಯ ಹೊಂದಿರುವ 100 ಖನಿಜ ಬ್ಲಾಕ್ (ಮಿನರಲ್ ಬ್ಲಾಕ್)ಗಳನ್ನು ಹರಾಜಿಗೆ ಇಡಬಹುದು ಎಂದು ವರದಿ ನೀಡಿದೆ. ಈ 100 ಮಿನರಲ್ ಬ್ಲಾಕ್ಸ್ಗಳಿಗೆ ಸಂಬಂಧಿತ ವರದಿಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರ ಮಾಡುವುದರಿಂದ, ದೇಶದಲ್ಲಿ ಖನಿಜ ಸಂಪನ್ಮೂಲಗಳ ನಿರಂತರ ಪೂರೈಕೆ ಆಗಲಿದೆ. ಅಷ್ಟೇ ಅಲ್ಲ, ಹೆಚ್ಚೆಚ್ಚು ಖನಿಜ ಬ್ಲಾಕ್ಗಳನ್ನು ಹರಾಜಿಗೆ ತರುವುದರಿಂದ ರಾಜ್ಯ ಸರ್ಕಾರಗಳ ಆದಾಯವೂ ಹೆಚ್ಚಲಿದೆ ಎಂಬುದು ಸರ್ಕಾರದ ಮುಂದಾಲೋಚನೆಯಾಗಿದೆ. ಇಂದು ರಾಜ್ಯಗಳಿಗೆ ಹಸ್ತಾಂತರ ಮಾಡಲಾಗುತ್ತಿರುವ 100 ಜಿ4 ಖನಿಜ ಬ್ಲಾಕ್ಗಳಿಂದ ವಿವಿಧ ಕೈಗಾರಿಕೆಗಳಿಗೆ ಸಹಾಯಕವಾಗಲಿದೆ. ಅವುಗಳ ಹರಾಜು ಪ್ರಕ್ರಿಯೆಯಿಂದ ಉದ್ಯೋಗಾವಕಾಶ ಹೆಚ್ಚುತ್ತದೆ. ಆದಾಯವೂ ಅಧಿಕವಾಗುತ್ತದೆ ಎಂದು ಕೇಂದ್ರ ಹೇಳಿದೆ. ಕಾರ್ಯಕ್ರಮ ವೀಕ್ಷಿಸುವ ಲಿಂಕ್ ಇಲ್ಲಿದೆ.. https://youtu.be/gouk4PsLtQM
ಮನೆಯೊಂದರ ಮಹಡಿ ಮೇಲೆ ವಿವಿಧ ಪಕ್ಷಿಗಳ ಕಲರವ; ಬಣ್ಣದಂಗಡಿ ವ್ಯಾಪಾರಿಯ ಪಕ್ಷಿ ಪ್ರೇಮಕ್ಕೆ ಪತ್ನಿ ಸಾಥ್