ಭಾರತದಲ್ಲಿ ಐದನೇ ಕೊರೊನಾ ಲಸಿಕೆಗೆ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯಿಂದ ಭಾರತದಲ್ಲಿ ಹೆಚ್ಚಿನ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಹೈದರಾಬಾದ್‌ನ ಬಯೋಲಾಜಿಕಲ್ಸ್ ಇ ಕಂಪನಿಯ ಜೊತೆಗೂಡಿ ಭಾರತದಲ್ಲಿ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತೆ.
ಭಾರತದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ತುರ್ತು ಬಳಕೆಗೆ ಒಪ್ಪಿಗೆ ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮತ್ತೊಂದು ಲಸಿಕೆಯ ಸೇರ್ಪಡೆಯಾಗಿದೆ. ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ (Johnson and Johnson) ಕಂಪನಿಯ ಸಿಂಗಲ್ ಡೋಸ್ (single-dose Covid-19 vaccine) ಲಸಿಕೆಯಾದ ಜಾನಸಿನ್ ಲಸಿಕೆಯ (janssen vaccine) ತುರ್ತು ಬಳಕೆಗೆ ಭಾರತದ ಡಿಸಿಜಿಐ ಇಂದು ಒಪ್ಪಿಗೆ ನೀಡಿದೆ. ಆಗಸ್ಟ್ 5 ರಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಸಲ್ಲಿಸಿದ್ದ ಎರಡೇ ದಿನದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ.
ಈಗಾಗಲೇ ಆಮೆರಿಕಾದ ಎಫ್.ಡಿ.ಎ, ಇಂಗ್ಲೆಂಡ್‌ನ ಎಂ.ಎಚ್.ಆರ್.ಎ, ಯೂರೋಪ್ ಮೆಡಿಕಲ್ ಏಜೆನ್ಸಿ, ಜಪಾನ್ ಡ್ರಗ್ಸ್ ರೆಗ್ಯುಲೇಟರ್ ಗಳಿಂದ ಒಪ್ಪಿಗೆ ಪಡೆದ ಲಸಿಕೆಗಳಿಗೆ ಭಾರತದಲ್ಲಿ ಬ್ರಿಡ್ಜ್ ಪ್ರಯೋಗ ನಡೆಸದೇ, ಒಪ್ಪಿಗೆ ನೀಡಲಾಗುವುದು ಎಂದು ಡಿಸಿಜಿಐ ಏಪ್ರಿಲ್ ನಲ್ಲಿ ಆದೇಶ ಹೊರಡಿಸಿತ್ತು. ಅದರಂತೆ ಈಗ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯು ಆಮೆರಿಕಾದ ಎಫ್‌ಡಿಐ ಒಪ್ಪಿಗೆ ಪಡೆದಿರುವುದರಿಂದ ಭಾರತದ ಡಿಸಿಜಿಐ ಕೂಡ ಬ್ರಿಡ್ಜ್ ಪ್ರಯೋಗ ಇಲ್ಲದೆಯೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಗೆ ಒಪ್ಪಿಗೆ ನೀಡಿದೆ.
‘‘ಭಾರತದ ಕೊರೊನಾ ಲಸಿಕೆಯ ಬುಟ್ಟಿ ವಿಸ್ತರಣೆಗೊಂಡಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಈಗ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆಗೊಂಡ ಐದು ಲಸಿಕೆಗಳಿವೆ. ಇದರಿಂದ ಕೊರೊನಾ ವೈರಸ್ ವಿರುದ್ಧದ ನಮ್ಮ ಹೋರಾಟಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ” ಎಂದು ಕೇಂದ್ರದ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಟ್ವೀಟ್ ಮಾಡಿ ಜಾನಸಿನ್ ಲಸಿಕೆಗೆ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿರುವುದನ್ನು ಘೋಷಿಸಿದ್ದಾರೆ.
ಆಮೆರಿಕಾದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ಭಾರತದ ಹೈದರಾಬಾದ್‌ನ ಬಯೋಲಾಜಿಕಲ್ ಇ ಕಂಪನಿಯೊಂದಿಗೆ ತನ್ನ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಬಯೋಲಾಜಿಕಲ್ ಇ ಕಂಪನಿಯು ಭಾರತದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜಾನಸಿನ್ ಲಸಿಕೆಯನ್ನು ಉತ್ಪಾದಿಸಲಿದೆ. ಬಯೋಲಾಜಿಕಲ್ ಇ ಕಂಪನಿಯ ಎಂ.ಡಿ. ಮಹೀಮಾ ಡಾಟ್ಲಾ ಹೇಳಿದ್ದ ಪ್ರಕಾರ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ನಮ್ಮ ಘಟಕದಲ್ಲಿ 50 ರಿಂದ 60 ಕೋಟಿ ಡೋಸ್ ಲಸಿಕೆ (corona vaccine) ಉತ್ಪಾದನೆಗೆ ಪ್ಲ್ಯಾನ್ ಮಾಡಿದೆ ಎಂದಿದ್ದರು.
ಕ್ವಾಡ್ ಲಸಿಕೆಯ ಒಪ್ಪಂದದಡಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತೆ. ಆದರೆ, ಬಯೋಲಾಜಿಕಲ್ ಇ ಕಂಪನಿಯು ಈಗಾಗಲೇ ಜಾನಸಿನ್ ಲಸಿಕೆಯ ರಿಸ್ಕ್ ಉತ್ಪಾದನೆ ಮಾಡಿದೆಯೇ, ಜಾನಸಿನ್ ಲಸಿಕೆಯ ದಾಸ್ತಾನು ಇಟ್ಟಿದೆಯೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 3 ತಿಂಗಳವರೆಗೆ ಸಂಗ್ರಹಿಸಿಡಬಹುದು.
ಜಾನಸಿನ್ ಸಿಂಗಲ್ ಡೋಸ್ ಕೊರೊನಾ ಲಸಿಕೆಗೆ ಈ ವರ್ಷದ ಫೆಬ್ರವರಿ ತಿಂಗಳಲ್ಲೇ ಆಮೆರಿಕಾದ ಎಫ್.ಡಿ.ಎ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಆಮೆರಿಕಾದ ಎಫ್.ಡಿ.ಎ. ಪ್ರಕಾರ ಜಾನಸಿನ್ ಲಸಿಕೆಯನ್ನು ಪಡೆದ 14 ದಿನದ ಬಳಿಕ ಗಂಭೀರ ಸ್ವರೂಪದ ಕೊರೊನಾ ತಡೆಗೆ ಶೇ.77 ರಷ್ಟು ಪರಿಣಾಮಕಾರಿ. ಕೊರೊನಾ ಲಸಿಕೆ ಪಡೆದ 28 ದಿನದ ಬಳಿಕ ಗಂಭೀರ ಸ್ವರೂಪದ ಕೊರೊನಾ ತಡೆಗೆ ಶೇ.85 ರಷ್ಟು ಪರಿಣಾಮಕಾರಿ.
ಯೂರೋಪಿಯನ್ ಮೆಡಿಕಲ್ ಏಜೆನ್ಸಿಯು ಮಾರ್ಚ್ ತಿಂಗಳಲ್ಲೇ ಜಾನಸಿನ್ ಸಿಂಗಲ್ ಡೋಸ್ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಿದೆ. ಆಮೆರಿಕಾದ ಸಿಡಿಸಿ ಕೂಡ ಜಾನಸಿನ್ ಲಸಿಕೆಯು ಕೊರೊನಾದಿಂದ ಸಾವು, ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಹೆಚ್ಚಿನ ಪರಿಣಾಮಕಾರಿ ಎಂದು ಹೇಳಿದೆ. ಸಿಡಿಸಿ ಪ್ರಕಾರ, ಜಾನಸಿನ್ ಲಸಿಕೆಯನ್ನು ಪಡೆದ 2 ವಾರದ ಬಳಿಕ ಕೊರೊನಾ ವೈರಸ್ ವಿರುದ್ಧ ಶೇ.66.3 ರಷ್ಟು ಪರಿಣಾಮಕಾರಿ ಎಂದು ಹೇಳಿದೆ.
ಜಾನಸಿನ್ ಲಸಿಕೆಯು ಲಕ್ಷಣ ರಹಿತ ಕೊರೊನಾ ರೋಗಿಗಳಿಗೂ ರಕ್ಷಣೆ ನೀಡುತ್ತೆ ಎಂದು ಸಿಡಿಸಿ ಹೇಳಿದೆ. ಭಾರತದಲ್ಲಿ ಈಗಾಗಲೇ ಕೊವಿಶೀಲ್ಡ್, ಕೊವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್, ಆಮೆರಿಕಾದ ಮಾಡೆರ್ನಾ ಕಂಪನಿಯ ಲಸಿಕೆಗಳಿಗೆ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಈಗ ಐದನೇ ಲಸಿಕೆಯಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಜಾನಸಿನ್ ಲಸಿಕೆಗೆ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ.
ಆದರೆ, ಭಾರತದಲ್ಲಿ ಯಾವಾಗನಿಂದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆ ಲಭ್ಯವಾಗುತ್ತೆ, ಈಗಾಗಲೇ ಉತ್ಪಾದನೆ ಮಾಡಲಾಗಿದೆಯೇ? ಜಾನಸಿನ್ ಲಸಿಕೆಯ ಬೆಲೆ ಎಷ್ಟು? ತಿಂಗಳಿಗೆ ಎಷ್ಟು ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸಿ ಪೂರೈಸಲಾಗುತ್ತೆ? ಭಾರತದ ಕೊರೊನಾ ಲಸಿಕಾ ಅಭಿಯಾನಕ್ಕೆ ಯಾವಾಗ ಜಾನಸಿನ್ ಲಸಿಕೆ ಸೇರ್ಪಡೆ ಆಗುತ್ತೆ ಎನ್ನುವುದನ್ನು ಕೇಂದ್ರ ಆರೋಗ್ಯ ಇಲಾಖೆ ಇಲ್ಲವೇ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯೇ ಸ್ಪಷ್ಟಪಡಿಸಬೇಕು.
(US pharma giant Johnson and Johnson single dose covid vaccine Janssen gets approval in india )