ವಾಕಿಂಗ್ ಮಾಡುತ್ತಿದ್ದ ಮುಖ್ಯಮಂತ್ರಿಯ ಹತ್ಯೆ ಪ್ರಯತ್ನ; ಒಂದೇ ಒಂದು ಜಿಗಿತದಿಂದ ಪಾರಾದ ಬಿಪ್ಲಬ್ ಕುಮಾರ್ ದೇಬ್
ಗುರುವಾರ ರಾತ್ರಿಯೇ ಆ ಮೂವರನ್ನೂ ಕೆರ್ಚೌಮುಹಾನಿ ಪ್ರದೇಶದಲ್ಲಿ ಬಂಧಿಸಲಾಗಿದೆ. ವಾಹನವನ್ನು ಜಪ್ತಿ ಮಾಡಲಾಗಿದೆ. ಮೂವರ ವಿರುದ್ಧ ಹತ್ಯೆ ಪ್ರಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಗಾರ್ತಲಾ: ಸ್ವಲ್ಪ ಮೈಮರೆತಿದ್ದರೂ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಪ್ರಾಣ ಹೋಗುತ್ತಿತ್ತು..ಅಂದರೆ ಸಿಎಂ ಪ್ರಾಣವೇ ಹೋಗುತ್ತಿತ್ತು. ಪೊಲೀಸರು ಹೇಳಿದ ಈ ಘಟನೆಯನ್ನು ಕೇಳಿದ ಮೇಲೆ, ಇತ್ತೀಚೆಗೆ ಜಾರ್ಖಂಡದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆಯಾದ ಮಾದರಿಯಲ್ಲೇ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹತ್ಯೆಗೆ ಕೂಡ ಸಂಚು ನಡೆದಿತ್ತಾ ಎಂಬುದೊಂದು ಅನುಮಾನ ಶುರುವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದು ಗುರುವಾರ ಸಂಜೆ ಹೊತ್ತಿಗೆ ನಡೆದ ಘಟನೆ. ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸಂಜೆ ಹೊತ್ತು ತಮ್ಮ ಶ್ಯಾಮಪ್ರಸಾದ ಮುಖರ್ಜಿ ಮಾರ್ಗದಲ್ಲಿರುವ ಸರ್ಕಾರಿ ನಿವಾಸದ ಸಮೀಪವೇ ವಾಕಿಂಗ್ ಮಾಡುತ್ತಿದ್ದರು. ಆಗ ಈ ಮೂವರೂ ಕಾರನ್ನು ಅವರ ಭದ್ರತಾ ವಲಯವನ್ನೂ ಮೀರಿ ಮುಖ್ಯಮಂತ್ರಿಯೆಡೆಗೇ ಭರದಿಂದ ಚಲಾಯಿಸಿಕೊಂಡು ಹೋಗಿದ್ದಾರೆ. ದೇಬ್ ಅಲ್ಲಿಂದ ಸ್ವಲ್ಪ ಹಿಂದಕ್ಕೆ ಜಿಗಿದು ಆ್ಯಕ್ಸಿಡೆಂಟ್ ಆಗುವುದನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸಣ್ಣಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಆ ಕಾರಿನ ವೇಗ ಎಷ್ಟಿತ್ತೆಂದರೆ, ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿ ತಡೆಯಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ.
ಗುರುವಾರ ರಾತ್ರಿಯೇ ಆ ಮೂವರನ್ನೂ ಕೆರ್ಚೌಮುಹಾನಿ ಪ್ರದೇಶದಲ್ಲಿ ಬಂಧಿಸಲಾಗಿದೆ. ವಾಹನವನ್ನು ಜಪ್ತಿ ಮಾಡಲಾಗಿದೆ. ಮೂವರ ವಿರುದ್ಧ ಹತ್ಯೆ ಪ್ರಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂವರು ಆರೋಪಿಗಳೂ 20ವರ್ಷ ಆಸುಪಾಸಿನವರೇ ಎನ್ನಲಾಗಿದೆ.
ಇದನ್ನೂ ಓದಿ: ನನಗೆ ಬೇಕಾದ ಖಾತೆ ಸಿಕ್ಕಿಲ್ಲ, 2-3 ದಿನಗಳಲ್ಲಿ ಮುಂದಿನ ನಿರ್ಧಾರ ತಿಳಿಸುವೆ: ನೂತನ ಸಚಿವ ಎಂಟಿಬಿ ನಾಗರಾಜ್
ಕೇಳಿದ ಖಾತೆ ಕೊಡದಿದ್ದರೆ ರಾಜೀನಾಮೆ ನೀಡುವ ಪರೋಕ್ಷ ಸುಳಿವು ಕೊಟ್ಟ ನೂತನ ಸಚಿವ ಆನಂದ್ ಸಿಂಗ್
Published On - 4:00 pm, Sat, 7 August 21