4 ಟ್ರಕ್ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನು ಒಡೆದು ದಾಂಧಲೆ; ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ
ಈ ಟ್ರಕ್ಗಳು ಕರೀಂಗಂಜ್ನಿಂದ ಮಿಜೋರಾಂಗೆ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಕಚಾರ್ನ ಭಾಗಾ ಬಜಾರ್ ಪ್ರದೇಶಕ್ಕೆ ಹೋಗುತ್ತಿದ್ದಂತೆ ಅಲ್ಲಿ ಕೆಲವರು ಟ್ರಕ್ಗಳನ್ನು ತಡೆದಿದ್ದಾರೆ.
ಅಸ್ಸಾಂ-ಮಿಜೋರಾಂ ಗಡಿ(Assam-Mizoram Border )ಯಲ್ಲಿ ತುಸು ಕಡಿಮೆಯಾಗಿದ್ದ ಉಗದ್ವಿಗ್ನತೆ ಶುಕ್ರವಾರ ರಾತ್ರಿಯಿಂದ ಮತ್ತೆ ಹೆಚ್ಚಾಗಿದೆ. ಮಿಜೋರಾಂನ ನಾಲ್ಕು ಟ್ರಕ್ಗಳನ್ನು ಅಸ್ಸಾಂನ ಕಚಾರ್(Cachar District) ಜಿಲ್ಲೆಯಲ್ಲಿ ಧ್ವಂಸಗೊಳಿಸಲಾಗಿದ್ದು, ಅದರ ಬೆನ್ನಲ್ಲೇ ಮತ್ತೆ ಗಡಿಯಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಅಸ್ಸಾಂ ಸರ್ಕಾರ ವಿಧಿಸಿದ್ದ ಪ್ರಯಾಣ ಸಲಹಾ ನೋಟಿಸ್ನ್ನು ಹಿಂಪಡೆದು, ಮಿಜೋರಾಂನಿಂದ ಬರುವ ಸರಕು ವಾಹನಗಳಿಗೆ ಯಾವುದೇ ಅಡಚಣೆ ಉಂಟು ಮಾಡದಂತೆ ಸ್ಥಳೀಯರಿಗೆ ಸೂಚನೆ ನೀಡಿದ್ದಾಗ್ಯೂ, ಕಚಾರ್ ಜಿಲ್ಲೆಯಲ್ಲಿ ಮಿಜೋರಾಂಗೆ ಸೇರಿದ್ದ ನಾಲ್ಕು ಟ್ರಕ್ಗಳನ್ನು ಧ್ವಂಸ ಮಾಡಲಾಗಿದೆ.
ಈ ಟ್ರಕ್ಗಳು ಕರೀಂಗಂಜ್ನಿಂದ ಮಿಜೋರಾಂಗೆ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದವು. ಕಚಾರ್ನ ಭಾಗಾ ಬಜಾರ್ ಪ್ರದೇಶಕ್ಕೆ ಹೋಗುತ್ತಿದ್ದಂತೆ ಅಲ್ಲಿ ಕೆಲವರು ಟ್ರಕ್ಗಳನ್ನು ತಡೆದಿದ್ದಾರೆ. ನೀವು ಎಲ್ಲಿಂದ ಬಂದಿದ್ದೀರಿ ಎಂದು ಟ್ರಕ್ ಚಾಲಕರನ್ನು ಪ್ರಶ್ನಿಸಿದ್ದಾರೆ. ಮಿಜೋರಾಂನಿಂದ ಎಂದು ಹೇಳುತ್ತಿದ್ದಂತೆ, ಟ್ರಕ್ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನೆಲ್ಲ ರಸ್ತೆಯ ಮೇಲೆ ಬಿಸಾಕಿ, ದಾಂಧಲೆ ಎಬ್ಬಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಜು.26ರಂದು ಮೊದಲು ಎರಡೂ ರಾಜ್ಯಗಳ ನಡುವೆ ಹಿಂಸಾಚಾರ ಶುರುವಾಯಿತು. ಈ ಸಂಘರ್ಷದಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು, ಓರ್ವ ನಾಗರಿಕ ಸೇರಿ 7 ಜನರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಗಸ್ಟ್ 5ರಂದು ಅಸ್ಸಾಂ ಸಚಿವರಾದ ಅತುಲ್ ಬೋರಾ ಮತ್ತು ಅಶೋಕ್ ಸಿಂಘಲ್ ಐಜ್ವಾಲಕ್ಕೆ ಭೇಟಿ ನೀಡಿ, ಮಿಜೋರಾಂ ಸಚಿವರ ಬಳಿ ಪ್ರಸಕ್ತ ವಿಚಾರದ ಕುರಿತು ಚರ್ಚಿಸಿದ್ದರು. ಅಲ್ಲಿಂದ ಸ್ವಲ್ಪ ಉದ್ವಿಗ್ನತೆಯೂ ನಿಯಂತ್ರಣದಲ್ಲಿತ್ತು.
ಇದನ್ನೂ ಓದಿ: ಗಡಿ ವಿವಾದ ಚರ್ಚೆಗೆಂದು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿ ಸಭೆ: ಸಮಿತಿ ವರದಿ ಸಲ್ಲಿಕೆ ಶೀಘ್ರ
Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?
4 truck carrying Egg to mizoram vandalised in Assam
Published On - 4:24 pm, Sat, 7 August 21