ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಕ್ರೂರ ತಾಯಿ
ಮಗು ಎಂದ ಮೇಲೆ ಹಠ, ಅಳು ಎಲ್ಲವೂ ಸಾಮಾನ್ಯ, ಎಷ್ಟೋ ತಾಯಂದಿರುವ ಎಷ್ಟೋ ತಿಂಗಳವರೆಗೆ ನಿದ್ದೆಗೆಟ್ಟರೂ ಮಗುವಿನ ಮೇಲೆ ಕಿಂಚಿತ್ತೂ ಬೇಸರ ಮಾಡಿಕೊಳ್ಳುವುದಿಲ್ಲ, ಅದರ ಲಾಲನೆ ಪೋಷಣೆಯಲ್ಲೇ ತಮ್ಮ ಖುಷಿಯನ್ನು ಕಂಡುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ತಾಯಿ ಏನೂ ಅರಿಯದ ಮುಗ್ದ ಮಗುವಿನ ಬಾಯಿಗೆ ಮೆಣಸಿನ ಪುಡಿ ತುರುಕಿ ಕ್ರೂರ ಪ್ರಾಣಿಯಂತೆ ವರ್ತಿಸಿದ್ದಾರೆ.
ತಾಯಿಯೊಬ್ಬಳು ತನ್ನ ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿ ನಿರ್ದಯಿಯಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಶಿಶುವಿನ ಬಾಯಿಗೆ ಮೆಣಸಿನಪುಡಿ ಹಾಕುತ್ತಿರುವ ವಿಡಿಯೋವನ್ನು ಮಹಿಳೆಯ ಪತಿಯೇ ವಿಡಿಯೋ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಆಜ್ತಕ್ ಈ ಕುರಿತು ವರದಿ ಮಾಡಿದೆ, ಈ ಘಟನೆಯು ಮಂಜನ್‌ಪುರ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ನೆಲೆಸಿರುವ ಸತ್ಯೇಂದ್ರ ಕುಮಾರ್ ಎರಡು ವರ್ಷಗಳ ಹಿಂದೆ ಶ್ವೇತಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯದ ನಂತರ ಶ್ವೇತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಸತ್ಯೇಂದ್ರ ಕುಮಾರ್ ಬಹ್ರೈಚ್‌ನಲ್ಲಿ ಸರ್ಕಾರಿ ಶಿಕ್ಷಕರಾಗಿದ್ದಾರೆ.ಕೆಲಸಕ್ಕೆಂದು ಹೋದಾಗ ಪತ್ನಿ ಮಗುವಿಗೆ ಥಳಿಸುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಸತ್ಯೇಂದ್ರ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಕುಟುಂಬ ಸದಸ್ಯರಿಗೆ ಹೇಳಿದಾಗ ಯಾರೂ ನಂಬಲಿಲ್ಲ ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಸತ್ಯೇಂದ್ರ ಅವರು ಪತ್ನಿಯ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದರು.
ಮತ್ತಷ್ಟು ಓದಿ: ಉಡುಪಿಯಲ್ಲಿ ಅಮಾನವೀಯ ಘಟನೆ: 3 ವರ್ಷದ ಮಗುವಿನ ಮೇಲೆ ತೀವ್ರವಾಗಿ ಹಲ್ಲೆ
ಪತ್ನಿಯ ಕ್ರಮವನ್ನು ವಿರೋಧಿಸಿದಾಗ ಜೀವ ಬೆದರಿಕೆ ಹಾಕಲಾಗಿದೆ ಎಂದು ಸತ್ಯೇಂದ್ರ ಆರೋಪಿಸಿದ್ದಾರೆ. ಅವರ ದೂರಿನ ಮೇರೆಗೆ ಮಂಜನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಕೆಲವು ತಿಂಗಳ ಹಿಂದೆ, ಫರಿದಾಬಾದ್‌ನಲ್ಲಿ ಮಹಿಳೆಯೊಬ್ಬರು ತನ್ನ 11 ವರ್ಷದ ಮಗನನ್ನು ಥಳಿಸುವ ವಿಡಿಯೋವೊಂದು ಬೆಳಕಿಗೆ ಬಂದಿತ್ತು . ವಿಡಿಯೋದಲ್ಲಿ ತಾಯಿ ಮಗನಿಗೆ ಒದ್ದಿರುವ ದೃಶ್ಯ ಸೆರೆಯಾಗಿತ್ತು. ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಪತ್ನಿಯ ವರ್ತನೆ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ