ಲಕ್ನೋದಲ್ಲಿ ಸುರಿದ ಧಾರಾಕಾರ ಮಳೆಗೆ ನಿರ್ಮಾಣ ಹಂತದ ಗೋಡೆ ಕುಸಿತ, 9 ಮಂದಿ ಸಾವು
ಲಕ್ನೋದಲ್ಲಿ ಸುರಿದ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆ ಕುಸಿತಗೊಂಡು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಶುಕ್ರವಾರವೂ ಮುಂದುವರೆದಿದೆ. ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆ ಕುಸಿದು ಮೂವರು ಅಪ್ರಾಪ್ತರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತುರ್ತು ನಿಧಿಯಿಂದ ಪರಿಹಾರ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ಘಟನೆ ನಡೆದ ಸ್ಥಳಕ್ಕೆ ಆಗಮಿಸುವಂತೆ ಹಾಗೂ ಘಟನೆಯಲ್ಲಿ ಗಾಯಗೊಂಡ ಇಬ್ಬರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಲಕ್ನೋದ ವಿಭಾಗೀಯ ಆಯುಕ್ತ ಡಾ.ರೋಷನ್ ಜಾಕೋಬ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಲಖನೌ ನಗರದಲ್ಲಿ ಭಾರೀ ಮಳೆಯಿಂದ ಯಾವುದೇ ದುರ್ಘಟನೆ ಅಥವಾ ಯಾವುದೇ ಘಟನೆ ಸಂಭವಿಸಿದಲ್ಲಿ ಟೋಲ್ ಫ್ರೀ ಸಂಖ್ಯೆ 1533 ಮತ್ತು 9151055671/9151055672/9151055672/9151055673 ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಮಳೆಗೆ ಲಕ್ನೋ ತತ್ತರಿಸಿದ್ದು, ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರದವರೆಗೆ ಮಳೆಯಾಗುವ ಸಾಧ್ಯತೆ ಇದೆ. ಶ್ರಾವಸ್ತಿ, ಬಹ್ರೈಚ್, ಲಖಿಂಪುರ ಖೇರಿ, ಸೀತಾಪುರ್ ರಸ್ತೆ, ಕಾನ್ಪುರ್ ದೇಹತ್, ಕಾನ್ಪುರ್ ನಗರ, ಉನ್ನಾವೋ, ಲಕ್ನೋ, ಬಾರಾಬಂಕಿ, ಆಗ್ರಾ, ಫಿರೋಜಾಬಾದ್, ಇಟಾವಾ, ಔರೈಯಾ, ಬರೇಲಿ, ಪಿಲಿಭಿತ್, ಬದೌನ್ ಜಲಾನ್ ಮತ್ತು ಹಾಸ್‌ನಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಗೋರಖ್‌ಪುರದಲ್ಲಿ 144 ಮಿಮೀ, ಬಹ್ರೈಚ್‌ನಲ್ಲಿ 50 ಮಿಮೀ, ಲಕ್ನೋದಲ್ಲಿ 48 ಮಿಮೀ, ಕಾನ್ಪುರದಲ್ಲಿ 43 ಮಿಮೀ, ಓರೈನಲ್ಲಿ 67 ಮಿಮೀ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಪಶ್ಚಿಮ ಮತ್ತು ಮಧ್ಯ ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 17 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೇ ರಾಜ್ಯದಲ್ಲಿ ಗುಡುಗು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ