ಅತ್ಯಾಚಾರ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಯುಪಿ ಮುಖ್ಯ ಕಾರ್ಯದರ್ಶಿ, ಡಿಜಿಪಿಯಿಂದ ವರದಿ ಕೋರಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
Lalitpur minor rape ಘಟನೆ ನಡೆದಿದೆ ಎನ್ನಲಾದ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಎಲ್ಲ ಪೊಲೀಸರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಡಿಐಜಿ ಮಟ್ಟದ ಅಧಿಕಾರಿ ಪ್ರಕರಣದ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸಲಿದ್ದಾರೆ.
ಉತ್ತರ ಪ್ರದೇಶದ ಲಲಿತ್‌ಪುರ (Lalitpur) ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ಬಗ್ಗೆ ದೂರು ನೀಡಲು ಹೋಗಿದ್ದ ಸಂತ್ರಸ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದೆ. 13 ವರ್ಷದ ಬಾಲಕಿ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ (Gang Rape) ಬಗ್ಗೆ ದೂರು ನೀಡಲು ಹೋದಾಗ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಮಾಧ್ಯಮ ವರದಿಗಳನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಈ ಕುರಿತು ನಾಲ್ಕು ವಾರಗಳಲ್ಲಿ ಉನ್ನತ ಅಧಿಕಾರಿಗಳಿಂದ ಎನ್‌ಎಚ್‌ಆರ್‌ಸಿ ವರದಿ ಕೇಳಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಠಾಣಾಧಿಕಾರಿ ತಿಲಕಧಾರಿ ಸರೋಜ್ ನ್ನು ಪ್ರಯಾಗ್‌ರಾಜ್‌ನಿಂದ ಬಂಧಿಸಲಾಗಿದೆ. ಲಹಾಬಾದ್ ಹೈಕೋರ್ಟ್ ಬಳಿ ಸರೋಜ್ನ್ನು ಬಂಧಿಸಲಾಗಿದೆ ಎಂದು ಪ್ರಯಾಗರಾಜ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರೇಮ್ ಪ್ರಕಾಶ್ ಹೇಳಿದ್ದಾರೆ. ಮೂರು ದಿನಗಳ ಕಾಲ ನಾಲ್ವರು ಪುರುಷರಿಂದ ಅತ್ಯಾಚಾರವೆಸಗಿದ್ದ ಹದಿಹರೆಯದ ಬಾಲಕಿಯ ಮೇಲೆ ಎಸ್‌ಎಚ್‌ಒ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 29 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಘಟನೆ ನಡೆದಿದೆ ಎನ್ನಲಾದ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಎಲ್ಲ ಪೊಲೀಸರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಡಿಐಜಿ ಮಟ್ಟದ ಅಧಿಕಾರಿ ಪ್ರಕರಣದ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸಲಿದ್ದಾರೆ.
ಮಂಗಳವಾರ ಬಾಲಕಿಯ ತಂದೆ ದಾಖಲಿಸಿದ ಎಫ್‌ಐಆರ್‌ನಲ್ಲಿ ನಾಲ್ವರು ವ್ಯಕ್ತಿಗಳು ಆಕೆಗೆ ಆಮಿಷವೊಡ್ಡಿ ಏಪ್ರಿಲ್ 22 ರಂದು ಭೋಪಾಲ್‌ಗೆ ಕರೆದೊಯ್ದರು. ಅಲ್ಲಿ ಅವರು ನಾಲ್ಕು ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಹೇಳಲಾಗಿದೆ. ನಂತರ ಆರೋಪಿಯು ಆಕೆಯನ್ನು ತನ್ನ ಗ್ರಾಮಕ್ಕೆ ಮರಳಿ ಕರೆತಂದು ಪರಾರಿಯಾಗುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕರೆತಂದಿದ್ದಾನೆ.
ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ ಬಾಲಕಿಯನ್ನು ಆಕೆಯ ಚಿಕ್ಕಮ್ಮನಿಗೆ ಹಸ್ತಾಂತರಿಸಿದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಲು ಮರುದಿನ ಪೊಲೀಸ್ ಠಾಣೆಗೆ ಕರೆಸಲಾಯಿತು. ಮರುದಿನ ಅಧಿಕಾರಿಯು ಆಕೆಯ ಚಿಕ್ಕಮ್ಮನ ಸಮ್ಮುಖದಲ್ಲಿ ಪೊಲೀಸ್ ಠಾಣೆಯ ಕೊಠಡಿಯೊಳಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಹೇಳಿದೆ. ಎಫ್‌ಐಆರ್‌ನಲ್ಲಿ ಬಾಲಕಿಯ ಚಿಕ್ಕಮ್ಮನನ್ನೂ ಆರೋಪಿ ಎಂದು ಹೆಸರಿಸಲಾಗಿದೆ.
ಅಧಿಕಾರಿಯ ಮೇಲೆ ಅತ್ಯಾಚಾರ ಮತ್ತು ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಆರೋಪ ಹೊರಿಸಿರುವುದಾಗಿ ಲಲಿತ್‌ಪುರ ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ತನ್ನ ನೋವನ್ನು ಎನ್‌ಜಿಒಗೆ ವಿವರಿಸಿದ ನಂತರ ಪ್ರಕರಣದ ವಿವರಗಳು ಬಹಿರಂಗವಾಗಿದೆ. ಎನ್ಜಿಒ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿದ್ದು, ಅದರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪಾದಿತ ಅತ್ಯಾಚಾರ ಘಟನೆಯು “ಬುಲ್ಡೋಜರ್” ಗಳ ದನಿಯಲ್ಲಿ ನಿಜವಾದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗಳನ್ನು ಹೇಗೆ ನಿಗ್ರಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
Published On - 10:24 pm, Wed, 4 May 22