ಉದ್ಘಾಟನೆಯಾದ ಒಂದೇ ವಾರದಲ್ಲಿ ಕುಸಿದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ: ಮೋದಿ, ಯೋಗಿ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು
ಬಿಜೆಪಿ ಜನರನ್ನು ದಿಕ್ಕುತಪ್ಪಿಸುತ್ತಿದೆ ಎಂದು ಸಮಾಜವಾದಿ ಪಕ್ಷ, ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಗೆ ಈ ಹೆದ್ದಾರಿ ಕನ್ನಡಿ ಹಿಡಿದಿದೆ ಎಂದು ಆಪ್ ವ್ಯಂಗ್ಯವಾಡಿವೆ.
ಲಖನೌ: ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ (Bundelkhand Expressway) ಹೆದ್ದಾರಿಯ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರತಿಪಕ್ಷಗಳು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಹರಿಹಾಯ್ದಿವೆ. ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದ ಈ ಹೆದ್ದಾರಿಯು ಜಾಲೌನ್ ತೆಹ್ಸೀಲ್ಗೆ ಸೇರಿದ ಚಿರಿಯಾ ಸಾಲೆಮ್ಪುರ್ ಎಂಬಲ್ಲಿ ಕುಸಿದಿದೆ. ಈ ಸಂಬಂಧ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ವಿಡಿಯೊ ಟ್ವೀಟ್ ಮಾಡಿ, ಹಾಳಾಗಿರುವ ರಸ್ತೆಯ ಭಾಗವನ್ನು ಜೆಸಿಬಿ ಬಳಸಿ ರಿಪೇರಿ ಕೆಲಸ ನಡೆಸುತ್ತಿರುವುದನ್ನು ತೋರಿಸಿವೆ. ‘ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ಗುಣಮಟ್ಟ ಎಂಥದ್ದು ಎನ್ನುವುದನ್ನು ಮಳೆ ಬಹಿರಂಗಪಡಿಸಿವೆ. ಬಿಜೆಪಿ ಜನರನ್ನು ದಿಕ್ಕುತಪ್ಪಿಸುತ್ತಿದೆ’ ಎಂದು ಸಮಾಜವಾದಿ ಪಕ್ಷವು (Samajwadi Party – SP) ಟ್ವೀಟ್ ಮಾಡಿದೆ.
ರಸ್ತೆ ಕುಸಿದಿರುವ ಬಗ್ಗೆ ವ್ಯಂಗ್ಯವಾಡಿರುವ ಆಮ್ ಆದ್ಮಿ ಪಕ್ಷವು (Aam Aadmi Party – AAM) ‘ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಗೆ ಈ ಹೆದ್ದಾರಿ ಕನ್ನಡಿ ಹಿಡಿದಿದೆ. ಒಂದು ವಾರವೂ ಈ ರಸ್ತೆ ಸುಸ್ಥಿತಿಯಲ್ಲಿ ಇರಲಿಲ್ಲ’ ಎಂದು ಹೇಳಿದೆ. ಹಾಳಾಗಿರುವ ರಸ್ತೆಯಲ್ಲಿ ಕಾರ್ ಒಂದು ಸಿಲುಕಿ, ಜಖಂಗೊಂಡ ಬಗ್ಗೆ ‘ನವಭಾರತ್ ಟೈಮ್ಸ್’ ದಿನಪತ್ರಿಕೆ ವರದಿ ಮಾಡಿದೆ. ಹೆದ್ದಾರಿ ಕುಸಿತದ ಕುರಿತು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಈ ನಡುವೆ ಬುಂದೇಲ್ಖಂಡ್ ಹೆದ್ದಾರಿ ಕುಸಿದಿರುವ ದೃಶ್ಯಗಳವಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
बारिश ने खोल दी अधूरे बुंदेलखंड एक्स्प्रेसवे की पोल।
प्रधानमंत्री एवं मुख्यमंत्री द्वारा लोकार्पित बुंदेलखंड एक्सप्रेसवे का बारिश में निकला दम।
अधूरे एक्सप्रेसवे को बुंदेलखंडियो के लिए सौगात बताने वाली भाजपा सरकार कर रही जनता को गुमराह।
शर्म करो प्रचारजीवी सरकार। pic.twitter.com/9SymyjdXye
— Samajwadi Party (@samajwadiparty) July 21, 2022
ಜುಲೈ 16ರಂದು ಪ್ರಧಾನಿ ನರೇಂದ್ರ ಮೋದಿ ‘ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ’ಗೆ ಚಾಲನೆ ನೀಡಿದ್ದರು. ಫೆಬ್ರುವರಿ 29, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೇವಲ 28 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. 296 ಕಿಮೀ ಉದ್ದದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ಉತ್ತರ ಪ್ರದೇಶದ 7 ಜಿಲ್ಲೆಗಳನ್ನು ಹಾದು ಹೋಗುತ್ತದೆ. ಚಿತ್ರಕೂಟ, ಬಂಡಾ, ಮಹೋಬಾ, ಹಮೀರ್ಪುರ್, ಜಲೌನ್, ಔರಿಯಾ ಮತ್ತು ಇಟಾ ಜಿಲ್ಲೆಗಳಿಗೆ ಈ ಹೆದ್ದಾರಿಯು ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯನ್ನು ₹ 14,850 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
जिस एक्सप्रेस वे के नाम पर BJP के नेताओं ने बड़े बड़े बयान दिए ये वहीं बुंदेलखंड एक्सप्रेस वे है जिसका उद्घाटन मात्र एक हफ्ते पहले ही हमारे प्रधानमंत्री मोदी जी ने किया था।
भ्रष्टाचार के समुंदर में गोते लगाने वाली भाजपा की डबल इंजन सरकार का विकास एक हफ्ते भी नहीं टिक सका। pic.twitter.com/moe3QGS6rS
— Aam Aadmi Party- Uttar Pradesh (@AAPUttarPradesh) July 21, 2022
ಚಿತ್ರಕೂಟ ಜಿಲ್ಲೆಯ ಭರತ್ಕೂಪ್ ಸಮೀಪದ ಗೋಂಡಾ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 35ರಿಂದ ಆರಂಭವಾಗುವ ಎಕ್ಸ್ಪ್ರೆಸ್ವೇ ಇಟಾವ ಜಿಲ್ಲೆಯ ಕುದ್ರೈಲ್ ಗ್ರಾಮದ ಸಮೀಪ ಅಂತ್ಯಗೊಳ್ಳುತ್ತದೆ. ಅಲ್ಲಿ ಇದು ಆಗ್ರಾ-ಲಖನೌ ಹೆದ್ದಾರಿಗೆ ಸೇರುತ್ತದೆ. ನಾಲ್ಕು ಲೇನ್ಗಳಿರುವ ಚತುಷ್ಪಥ ಎಕ್ಸ್ಪ್ರೆಸ್ವೇ ಅನ್ನು ಮುಂದಿನ ದಿನಗಳಲ್ಲಿ ಆರು ಲೇನ್ಗೆ (ಷಟ್ಪಥ) ವಿಸ್ತರಿಸಲು ಅನುವಾಗುವಂತೆ ನಿರ್ಮಿಸಲಾಗಿದೆ.
Published On - 7:16 am, Fri, 22 July 22