ಡೆಹ್ರಾಡೂನ್: ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ ನಾಲ್ಕು ತಿಂಗಳಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕಾಗಿ ನಿನ್ನೆ (ಜುಲೈ 2) ತಡರಾತ್ರಿ ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರನ್ನು ಡೆಹ್ರಾಡೂನ್ನಲ್ಲಿರುವ ರಾಜಭವನದಲ್ಲಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದು, ತೀರಥ್ ಸಿಂಗ್ ರಾವತ್ ಅವರ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಒಂದು ವಾರದ ಹಿಂದೆಯೇ ಉತ್ತರಾಖಂಡ ರಾಜ್ಯದಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಗಳು ಘಟಿಸಲಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಕೆಲ ಉನ್ನತ ಮೂಲಗಳು ತಿಳಿಸಿರುವಂತೆ ಪ್ರಸ್ತುತ ಪೌರಿ ಗರ್ವಾಲ್ ಲೋಕಸಭಾ ಕ್ಷೇತ್ರದ ಸಂಸದ ಆಗಿರುವ ತೀರಥ್ ಸಿಂಗ್ ರಾವತ್, ಸೆಪ್ಟೆಂಬರ್ 10ರ ಒಳಗೆ ವಿಧಾನಸಭಾ ಸ್ಥಾನವೊಂದನ್ನು ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗವು ಉಪಚುನಾವಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಅನಿವಾರ್ಯವಾಗಿ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಈ ನಿರ್ಧಾರ ಏಕಾಏಕಿ ಅಲ್ಲವಾದರೂ ರಾಜಕೀಯ ವಲಯದಲ್ಲಿ ಅಚ್ಚರಿಯನ್ನಂತೂ ಮೂಡಿಸಿದೆ. ಕಳೆದೊಂದು ವಾರದಿಂದ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಾಲುಸಾಲು ಸಭೆ ನಡೆಸಿದ್ದ ತೀರಥ್ ಸಿಂಗ್ ರಾವತ್ ನಿನ್ನೆ ತಮ್ಮ ಅಂತಿಮ ನಿರ್ಧಾರವನ್ನು ಕೈಗೊಂಡಿದ್ದಾರೆ. ದೆಹಲಿಯಿಂದ ಗುರುವಾರವೇ ತೀರಥ್ ಸಿಂಗ್ ಮರಳಿ ಬರಬೇಕಿತ್ತಾದರೂ ಜೆ.ಪಿ.ನಡ್ಡಾ ಸೂಚನೆಯ ಮೇರೆಗೆ ಅಲ್ಲೇ ತಂಗಿದ್ದರು.
ಶುಕ್ರವಾರ ಬೆಳಗ್ಗೆ ಜೆ.ಪಿ.ನಡ್ಡಾ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ರಾವತ್, ಮಾಧ್ಯಮದವರಿಗೆ ಪ್ರತಿಕ್ರಿಯಿಸುವಾಗ 2022ರ ಚುನಾವಣೆ ಬಗ್ಗೆ ಹಾಗೂ ಕೆಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಉತ್ತರಿಸಿದ್ದರು. ಉಪಚುನಾವಣೆ ಬಗ್ಗೆ ಕೇಳಿದಾಗ, ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು, ಅವರು ನೀಡುವ ಸೂಚನೆಯ ಅನ್ವಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದರು.
ದೆಹಲಿಯಿಂದ ಮರಳಿ ಬಂದವರು ಡೆಹ್ರಾಡೂನ್ನಲ್ಲಿ ಸುದ್ದಿಗೋಷ್ಠಿ ನಡೆಸಿದಾಗಲೇ ರಾಜೀನಾಮೆ ಘೋಷಿಸುತ್ತಾರೆಂದು ಭಾವಿಸಲಾಗಿತ್ತಾದರೂ ಆ ಸುದ್ದಿಗೋಷ್ಠಿಯಲ್ಲಿ ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ವಿವರಿಸಿದ ಅವರು ಮುಂದಿನ ಆರು ತಿಂಗಳಲ್ಲಿ ಸರ್ಕಾರದ ವಿವಿಧ 21 ಇಲಾಖೆಗಳಿಗೆ ಸಂಬಂಧಿಸಿದಂತೆ 22 ಸಾವಿರ ನೇಮಕಾತಿಗಳ ಬಗ್ಗೆ ಮಾತನಾಡಿ ಮತ್ತೆ ಅಚ್ಚರಿ ಮೂಡಿಸಿದ್ದರು.
ಇದೀಗ ಅಂತಿಮವಾಗಿ ರಾಜೀನಾಮೆ ಸಲ್ಲಿಸಲಾಗಿದ್ದು, ಅದರ ಹಿನ್ನೆಲೆ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಮದನ್ ಕೌಶಿಕ್ ನೇತೃತ್ವದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂದು ಘೋಷಿಸುವ ಸಾಧ್ಯತೆ ಇದೆ. ಇಂದು ನರೇಂದ್ರ ಸಿಂಗ್ ತೋಮರ್ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅವರನ್ನು ವೀಕ್ಷಕರನ್ನಾಗಿ ಬಿಜೆಪಿ ನೇಮಿಸಿದೆ.
ಇದನ್ನೂ ಓದಿ:
ಉತ್ತರಪ್ರದೇಶ, ಉತ್ತರಾಖಂಡ ಚುನಾವಣೆಗಳಲ್ಲಿ ಮೈತ್ರಿ ಇಲ್ಲದೆ ಕಣಕ್ಕಿಳಿಯಲಿದೆ ಬಿಎಸ್ಪಿ: ಮಾಯಾವತಿ