Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು – ಐಸಿಎಂಆರ್

| Updated By: Skanda

Updated on: Jul 17, 2021 | 11:56 AM

Delta Variant of Covid 19: ಈ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಲಸಿಕೆ ಪಡೆದ ನಂತರ ಸೋಂಕಿಗೆ ತುತ್ತಾದ ಶೇ.86.09 ಮಂದಿಗೆ ಡೆಲ್ಟಾ (B.1.617.2) ತಳಿಯಿಂದ ಸೋಂಕು ಹಬ್ಬಿದೆ ಜತೆಗೆ ಕಪ್ಪಾ ಕೂಡಾ ಗಮನಾರ್ಹ ಪರಿಣಾಮ ಬೀರಿದೆ ಎಂಬ ಅಂಶ ಕಂಡುಬಂದಿದೆ.

Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು - ಐಸಿಎಂಆರ್
ಸಾಂಕೇತಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರತೆ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದರೂ ಡೆಲ್ಟಾ ರೂಪಾಂತರಿ ಭೀತಿ ಮರೆಯಾಗಿಲ್ಲ. ಇದೀಗ ಡೆಲ್ಟಾ ರೂಪಾಂತರಿಗೆ (Delta Variant) ಸಂಬಂಧಿಸಿದ ಅಧ್ಯಯನದ (Study) ವರದಿಯೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್ – ICMR) ಬಿಡುಗಡೆ ಮಾಡಿದ್ದು, ಪ್ರಸ್ತುತ ಲಭ್ಯವಿರುವ ಕೊರೊನಾ ಲಸಿಕೆಗಳು (Corona Virus) ಡೆಲ್ಟಾ ತಳಿ ವಿರುದ್ಧ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಐಸಿಎಂಆರ್​ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಲಸಿಕೆ (Corona Vaccine) ತೆಗೆದುಕೊಂಡ ಹೆಚ್ಚಿನವರಿಗೆ ತಗುಲಿರುವ ಕೊರೊನಾ ಸೋಂಕು ಡೆಲ್ಟಾ ತಳಿಯಿಂದಲೇ ಹಬ್ಬಿದೆ ಎನ್ನಲಾಗಿದೆ.

ಕೊರೊನಾ ಲಸಿಕೆ ಪಡೆದ ನಂತರ ಸೋಂಕಿಗೆ ಒಳಗಾದವರಿಗೆ ಯಾವ ತಳಿಯಿಂದ ಹೆಚ್ಚು ಸಮಸ್ಯೆ ಉಂಟಾಗಿದೆ ಎಂದರಿಯಲು ಕನಿಷ್ಠ ಒಂದು ಡೋಸ್​ ಲಸಿಕೆ ತೆಗೆದುಕೊಂಡವರನ್ನೂ ಒಳಗೊಂಡಂತೆ 677 ಜನರನ್ನು ಪರೀಕ್ಷಿಸಲಾಗಿದ್ದು, ಆ ವೇಳೆ ಮೇಲ್ಕಂಡ ಅಂಶ ಬಯಲಾಗಿದೆ. 677 ಜನರ ಪೈಕಿ 604 ಮಂದಿ ಕೊವಿಶೀಲ್ಡ್​ ಲಸಿಕೆಯನ್ನು, 71 ಮಂದಿ ಕೊವ್ಯಾಕ್ಸಿನ್ ಲಸಿಕೆಯನ್ನು ಹಾಗೂ ಇಬ್ಬರು ಚೀನಾ ಮೂಲದ ಸಿನೋಫಾರ್ಮ್ ಲಸಿಕೆಯನ್ನೂ ಪಡೆದವರಾಗಿದ್ದಾರೆ.

ಈ ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಲಸಿಕೆ ಪಡೆದ ನಂತರ ಸೋಂಕಿಗೆ ತುತ್ತಾದ ಶೇ.86.09 ಮಂದಿಗೆ ಡೆಲ್ಟಾ (B.1.617.2) ತಳಿಯಿಂದ ಸೋಂಕು ಹಬ್ಬಿದೆ ಜತೆಗೆ ಕಪ್ಪಾ ಕೂಡಾ ಗಮನಾರ್ಹ ಪರಿಣಾಮ ಬೀರಿದೆ ಎಂಬ ಅಂಶ ಕಂಡುಬಂದಿದೆ. ಅದರಲ್ಲಿ ಶೇ.9.8 ಮಂದಿಯನ್ನು ಆಸ್ಪತ್ರೆಗೆ ಸೇರಿಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದ್ದು, ಶೇ 0.4 ಪ್ರಮಾಣದ ಸಾವು ಸಂಭವಿಸಿದೆ ಎಂದು ಅಧ್ಯಯನ ಹೇಳಿದೆ.

ಒಟ್ಟಾರೆಯಾಗಿ ಗಮನಿಸಿದಾಗ ಲಸಿಕೆಯು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನು ನಿಯಂತ್ರಿಸುವ ಜತೆಗೆ ಮರಣ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ತಡೆಗಟ್ಟಿದೆ ಎನ್ನುವ ಆಶಾದಾಯಕ ಬೆಳವಣಿಗೆ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಅಧ್ಯಯನವು ಭಾರತದ ಎಲ್ಲಾ ಭಾಗದ ಜನರನ್ನೂ ಒಳಗೊಳ್ಳುವ ಪ್ರಯತ್ನ ಮಾಡಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್, ಉತ್ತರಾಖಂಡ, ಮಣಿಪುರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಚಂಡೀಗಡ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಪುದುಚೆರಿ, ನವದೆಹಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಆರ್​ಟಿಪಿಸಿಆರ್​ನಲ್ಲಿ ಪಾಸಿಟಿವ್ ಕಾಣಿಸಿಕೊಂಡವರ ಮಾದರಿಗಳನ್ನು ಆಧರಿಸಿ ಪರೀಕ್ಷೆ ನಡೆಸಲಾಗಿದೆ ಎನ್ನುವುದು ತಿಳಿದುಬಂದಿದೆ.

ಅಧ್ಯಯನಕ್ಕೆ ಒಳಪಡಿಸಿದ 677 ಮಂದಿಯಲ್ಲಿ ಶೇ.71 ರಷ್ಟು ಜನರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ಶೇ.29ರಷ್ಟು ಜನರು ಯಾವುದೇ ಲಕ್ಷಣಗಳನ್ನು ತೋರ್ಪಡಿಸಿಲ್ಲ. ಲಕ್ಷಣಗಳಿದ್ದವರ ಪೈಕಿ ಜ್ವರ (ಶೇ.69), ಮೈಕೈ ನೋವು, ತಲೆ ನೋವು, ವಾಕರಿಕೆ (ಶೇ.56) ಕಫ (ಶೇ.45), ಗಂಟಲೂತ (ಶೇ.37), ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು (ಶೇ.22), ಅತಿಸಾರ (ಶೇ.6) ಮತ್ತು ಕಣ್ಣಿನಲ್ಲಿ ಕಿರಿಕಿರಿ, ಕೆಂಪಾಗುವುದು (ಶೇ.1) ಕಾಣಿಸಿಕೊಂಡಿದೆ.

ಇದನ್ನೂ ಓದಿ:
Delta Variant: ಡೆಲ್ಟಾ ತಳಿ ಅತ್ಯಂತ ಅಪಾಯಕಾರಿ; ಮೈಮರೆತರೆ ಅನಾಹುತ ನಿಶ್ಚಿತ: ವಿಶ್ವ ಆರೋಗ್ಯ ಸಂಸ್ಥೆ 

Delta, Kappa, Lambda Variant: ಡೆಲ್ಟಾ, ಕಪ್ಪಾ, ಲ್ಯಾಂಬ್ಡಾ ತಳಿಗಳ ನಡುವೆ ಇರುವ ವ್ಯತ್ಯಾಸವೇನು? ಒಂದಕ್ಕಿಂತ ಒಂದು ಭಿನ್ನ ಹೇಗೆ?