ಭಾರತಕ್ಕೆ ಎಂಟ್ರಿ ಕೊಟ್ಟ ‘ಬ್ಯಾಂಡೆಡ್ ಕ್ರೇಟ್’: ಸ್ವಲ್ಪ ಎಚ್ಚರ ತಪ್ಪಿದ್ರೂ ಪ್ರಾಣ ಹೋಗುವುದು ಗ್ಯಾರಂಟಿ

ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ಅರಣ್ಯದಲ್ಲಿ ಅತಿ ವಿಷಕಾರಿ 'ಬ್ಯಾಂಡೆಡ್ ಕ್ರೇಟ್' (ಕಟ್ಟು ವಿರಿಯನ್) ಹಾವು ಪತ್ತೆಯಾಗಿದೆ. ಕಪ್ಪು-ಹಳದಿ ಪಟ್ಟೆಗಳಿರುವ ಈ ಅಪರೂಪದ ಹಾವು ಕಂಡು ಜನರಲ್ಲಿ ಆತಂಕ ಮನೆ ಮಾಡಿದೆ. ಚೀನಾ ಮುಂತಾದ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವು ಲಾರಿಗಳ ಮೂಲಕ ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಇಂತಹ ಹಾವು ಕಂಡರೆ ಕೊಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಭಾರತಕ್ಕೆ ಎಂಟ್ರಿ ಕೊಟ್ಟ ಬ್ಯಾಂಡೆಡ್ ಕ್ರೇಟ್: ಸ್ವಲ್ಪ ಎಚ್ಚರ ತಪ್ಪಿದ್ರೂ ಪ್ರಾಣ ಹೋಗುವುದು ಗ್ಯಾರಂಟಿ
ಬ್ಯಾಂಡೆಡ್ ಕ್ರೇಟ್ ಹಾವು
Image Credit source: Tv9 kannada

Updated on: Sep 11, 2026 | 12:53 PM

ವರಂಗಲ್, ಸೆ.11: ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಅತಿಯಾದ ವಿಷಪೂರಿತ ಹಾಗೂ ಅತ್ಯಂತ ಅಪರೂಪದ ‘ಬ್ಯಾಂಡೆಡ್ ಕ್ರೇಟ್’ (Banded Krait – ಕಟ್ಟು ವಿರಿಯನ್) ಜಾತಿಗೆ ಸೇರಿದ ಹಾವೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಹಾಗೂ ಹಾದಿಹೋಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಪ್ಪು ಮತ್ತು ಹಳದಿ ಬಣ್ಣದ ಚುಕ್ಕೆ-ಚಾಪೆಯಂತಹ ಪಟ್ಟೆಗಳನ್ನು ಹೊಂದಿರುವ ಈ ಹಾವು ರಸ್ತೆ ದಾಟುತ್ತಿದ್ದಾಗ ರಾತ್ರಿ ವೇಳೆ ಸಂಚರಿಸುತ್ತಿದ್ದ ಪ್ರಯಾಣಿಕರು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತೆಲಂಗಾಣದ ದಟ್ಟ ಅರಣ್ಯ ಭಾಗದಲ್ಲಿ ಇಂತಹ ವಿಶಿಷ್ಟ ಶೈಲಿಯ ಹಾವು ಕಂಡುಬಂದಿರುವುದು ಇದೇ ಮೊದಲ ಬಾರಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯಕೀಯ ತಜ್ಞರ ಪ್ರಕಾರ, ಈ ‘ಬ್ಯಾಂಡೆಡ್ ಕ್ರೇಟ್’ ಹಾವು ತೀವ್ರ ವಿಷಕಾರಿ ಗುಣವನ್ನು ಹೊಂದಿದೆ.ಈ ಹಾವು ಕಡಿದರೆ ವ್ಯಕ್ತಿ ಬದುಕುವುದು ತೀರಾ ಕಡಿಮೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವರಂಗಲ್ ಜಿಲ್ಲೆಯ ಖಾನಾಪುರ ಮಂಡಲದ ಅಶೋಕ್ ನಗರ ಗ್ರಾಮದ ಬಳಿ ಸುಮಾರು 5 ಅಡಿ ಉದ್ದದ ಇದೇ ಜಾತಿಗೆ ಸೇರಿದ ಹಾವು ಪ್ರತ್ಯಕ್ಷವಾಗಿತ್ತು. ಅದನ್ನು ಕಂಡ ಸ್ಥಳೀಯರು ಮೊದಲಿಗೆ ಆಟಿಕೆ ಹಾವು ಇರಬೇಕೆಂದು ಭಾವಿಸಿದ್ದರು, ಆದರೆ ಅದರ ಚಲನವಲನ ಕಂಡು ತಕ್ಷಣವೇ ಅರಣ್ಯ ಇಲಾಖೆಗೆ ಹಾಗೂ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಅದನ್ನು ಚಾಣಾಕ್ಷತನದಿಂದ ಹಿಡಿದು ದಟ್ಟ ಅರಣ್ಯಕ್ಕೆ ಬಿಡಲಾಗಿತ್ತು.

ಇದನ್ನೂ ಓದಿ: ಅಸ್ಸಾಂ: ಕತ್ತಿನಲ್ಲಿ ದೊಡ್ಡ ಟೈಯರ್ ಸಿಲುಕಿ ಪರದಾಡಿದ ಕಾಡಾನೆ; ಯಶಸ್ವಿ ರಕ್ಷಣಾ ಕಾರ್ಯಾಚರಣೆ

ಚೀನಾ, ಥೈಲ್ಯಾಂಡ್‌ನ ಹಾವು ಭಾರತದ ಈ ಭಾಗಕ್ಕೆ ಬಂದಿದ್ದು ಹೇಗೆ?

ಅರಣ್ಯಾಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಈ ಬ್ಯಾಂಡೆಡ್ ಕ್ರೇಟ್ ಜಾತಿಯ ಹಾವುಗಳು ಹೆಚ್ಚಾಗಿ ಚೀನಾ, ನೇಪಾಳ, ಥೈಲ್ಯಾಂಡ್, ಕಾಂಬೋಡಿಯಾ ಹಾಗೂ ವಿಯೆಟ್ನಾಂ ದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತೀರಾ ಅಪರೂಪವಾಗಿ ಗೋಚರಿಸುತ್ತವೆ. ಲಾರಿ ಅಥವಾ ಸರಕು ಸಾಗಣೆ ವಾಹನಗಳಲ್ಲಿ ಬಿದ್ದು ಅಥವಾ ದಾರಿ ತಪ್ಪಿ ತೆಲಂಗಾಣದ ಪಾಕಾಲ ಹಾಗೂ ಏಟೂರುನಾಗಾರಂ ಅರಣ್ಯ ಪ್ರದೇಶಕ್ಕೆ ಇವು ಬಂದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

“ಇಂತಹ ಅಪರೂಪದ ಹಾಗೂ ಅಪಾಯಕಾರಿ ಹಾವುಗಳು ಕಂಡುಬಂದರೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅವುಗಳನ್ನು ಕೊಲ್ಲಬಾರದು. ತಕ್ಷಣವೇ ಹತ್ತಿರದ ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು.” ಎಂದು ಅರಣ್ಯ ಇಲಾಖೆ ಮನವಿ ಮಾಡಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us