ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ದಿಗ್ವಿಜಯ ಸಿಂಗ್ ಸ್ಪರ್ಧೆ, ನಾಳೆ ನಾಮಪತ್ರ ಸಲ್ಲಿಕೆ
Digvijaya Singh ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ರಾಜಸ್ಥಾನದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ
ಕಾಂಗ್ರೆಸ್ ಪಕ್ಷದ (Congress) ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijaya Singh) ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ರಾಜಸ್ಥಾನದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಸಿಂಗ್ ಹೇಳಿದ್ದಾರೆ. ಇಂದು (ಗುರುವಾರ) ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್, ನಾನು ನಾಮಪತ್ರ ಪಡೆದುಕೊಳ್ಳಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸುವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ನನ್ನದೇ. ಈ ಬಗ್ಗೆ ಗಾಂಧಿ ಕುಟುಂಬ ಜತೆ ಮಾತನಾಡಿಲ್ಲ ಎಂದು ದಿಗ್ವಿಜಯ ಸಿಂಗ್ ಹೇಳಿದ್ದಾರೆ.ಆದಾಗ್ಯೂ ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆ ಆಗಲಿದೆಯೇ ಎಂದು ಕೇಳಿದಾಗ ಅಕ್ಟೋಬರ್ 8ರವರೆಗೆ ನಾಮಪತ್ರ ಹಿಂಪಡೆಯಬಹುದು.ಅಲ್ಲಿಯವರೆಗೆ ಕಾದು ನೋಡಿ ಎಂದಿದ್ದಾರೆ. ನಾನು ನಾಮಪತ್ರ ಪಡೆದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ. ಅಕ್ಟೋಬರ್17ರಂದು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಶಶಿತರೂರ್ ಕೂಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದು, ನಾಳೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿನ್ನೆ ಮಾತನಾಡಿದ್ದ ಸಿಂಗ್,ನಾನು ಯಾರ ಜತೆಗೂ ಚರ್ಚಿಸಿಲ್ಲ . ನಾನು ಹೈಕಮಾಂಡ್ ನಿಂದ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, 75ರ ಹರೆಯದ ಸಿಂಗ್ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ತೀವ್ರಗೊಂಡಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದೆ. ಆದರೆ ಕಣದಲ್ಲಿ ಯಾರಿರುತ್ತಾರೆ ಎಂಬ ಬಗ್ಗೆ ನಿರ್ಧಾರ ಅಂತಿಮಗೊಂಡಿಲ್ಲ. ಈವರೆಗೆ ಕಾಂಗ್ರೆಸ್ ಹೈಕಮಾಂಡ್ನ ನೆಚ್ಚಿನ ಆಯ್ಕೆಯಾಗಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತವರು ರಾಜ್ಯದಲ್ಲಿ ಬುದ್ಧಿವಂತಿಕೆಯ ಆಟ ಆಡಲು ಹೋಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು (ಸೆ 29) ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು, ಸ್ಪರ್ಧೆಯ ಬಗ್ಗೆ ಅಂತಿಮ ತೀರ್ಮಾನ ಪ್ರಕಟವಾಗಬಹುದು.
ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ (ಸೆ 28) ಪಕ್ಷದ ಹಿರಿಯ ನಾಯಕ ಎ.ಕೆ.ಆಂಟನಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಗಾಂಧಿ ಕುಟುಂಬದ ನಿಷ್ಠರಾಗಿರುವ ಆಂಟನಿ ರಾಜಸ್ಥಾನದ ಬೆಳವಣಿಗೆ ಕುರಿತು ಈವರೆಗೂ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಿಲ್ಲ. ಆದರೆ ಹೈಕಮಾಂಡ್ನಲ್ಲಿ ಗಾಂಧಿ ಕುಟುಂಬದ ಪ್ರಭಾವ ಕಡಿಮೆಯಾಗಬಾರದು ಎಂಬ ತಮ್ಮ ನಿಲುವನ್ನು ಆಂಟನಿ ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ನಾಯಕನ ಮಾತಿಗೆ ಸೋನಿಯಾ ಗಾಂಧಿ ಮನ್ನಣೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಆಂಟನಿ ಮತ್ತು ಸೋನಿಯಾ ಗಾಂಧಿ ಪರಸ್ಪರ ಸುದೀರ್ಘವಾಗಿ ಚರ್ಚಿಸಿದ ನಂತರ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅ 17ರಂದು ಚುನಾವಣೆಗಳು ನಡೆಯಲಿವೆ. ಈ ಸ್ಥಾನಕ್ಕೆ ಇಬ್ಬರಿಗಿಂತಲೂ ಹೆಚ್ಚು ಅಭ್ಯರ್ಥಿಗಳ ಸ್ಪರ್ಧಿಸಬಹುದಾದ ಸಾಧ್ಯತೆಯನ್ನು ನಾಯಕರು ತಳ್ಳಿಹಾಕುತ್ತಿಲ್ಲ. ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಗುರುವಾರ (ಸೆ 29) ದೆಹಲಿಯಲ್ಲಿ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳಿಗೆ ಗುರುವಾರ ನಾಮಪತ್ರಗಳನ್ನು ಸಲ್ಲಿಸಲು ಸಾಧ್ಯವಾಗದಿರಬಹುದು.
ಈ ಮಧ್ಯೆ ಗೆಹ್ಲೋಟ್ ಬುಧವಾರ ರಾತ್ರಿಯೇ ಜೈಪುರದಿಂದ ದೆಹಲಿಗೆ ತೆರಳಿದ್ದು, ಗುರುವಾರ ಸೋನಿಯಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಈ ಸಭೆಯ ನಂತರ ಅಭ್ಯರ್ಥಿಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ. ಆದರೂ ಸಭೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಹಿರಿಯ ನಾಯಕರಾದ ಅಂಬಿಕಾ ಸೋನಿ, ಭೂಪಿಂದರ್ ಹೂಡಾ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಜೈಪುರ ಬಂಡಾಯಕ್ಕೂ ಮೊದಲು ಸೋನಿಯಾ ಅವರ ನೆಚ್ಚಿನ ಆಯ್ಕೆಯಾಗಿದ್ದ ಅಶೋಕ್ ಗೆಹ್ಲೋಟ್ ಅವರೊಂದಿಗೆ ಇತ್ತೀಚೆಗೆ ಮಾತನಾಡಿದ್ದರು. ಹಿರಿಯ ಸಂಸದ ರಾಜೀವ್ ಶುಕ್ಲಾ ಅವರ ನಿವಾಸದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಚಿನ್ ಪೈಟಲ್ ಭೇಟಿ ಮಾಡಿದ್ದರು ಎಂದೂ ಹೇಳಲಾಗಿತ್ತು.
ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಗೊಂದಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಂಟನಿ ಅವರು ತಾವು ಸಹ ಅಧ್ಯಕ್ಷ ಗಾದಿಯ ಆಕಾಂಕ್ಷಿ ಎನ್ನುವ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದರು. ‘ನಾನು ಮೂರ್ಖನಲ್ಲ, ನನ್ನ ಆರೋಗ್ಯ ಪರಿಸ್ಥಿತಿ ನನಗೆ ಗೊತ್ತಿದೆ. ನಾನು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
Published On - 1:04 pm, Thu, 29 September 22