ಮಧ್ಯಪ್ರದೇಶ: ಬುಡಕಟ್ಟು ಜನರ ಹಬ್ಬದ ವೇಳೆ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಪುರುಷರ ಗುಂಪು; ವಿಡಿಯೊ ವೈರಲ್
ಅಲಿರಾಜ್‌ಪುರ ಪೊಲೀಸರ ಪ್ರಕಾರ ಈ ಘಟನೆಯು ಮಾರ್ಚ್ 11 ರಂದು ಸೋಂದ್ವಾ ತಹಸಿಲ್‌ನ ವಾಲ್ಪುರ್ ಗ್ರಾಮದಲ್ಲಿ ಸಂಭವಿಸಿದೆ

ಅಲಿರಾಜ್‌ಪುರ: ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರ (Alirajpur )ಜಿಲ್ಲೆಯಲ್ಲಿ ಹೋಳಿಗೂ ಮುನ್ನ ಈ ಪ್ರದೇಶದಲ್ಲಿ ಆಚರಿಸಲಾಗುವ ಒಂದು ವಾರದ ಬುಡಕಟ್ಟು ಹಬ್ಬವಾದ ಭಾಗೋರಿಯಾದ (Bhagoria) ಸಂದರ್ಭದಲ್ಲಿ ಪುರುಷರ ಗುಂಪೊಂದು ಹಾಡಹಗಲೇ ಮಹಿಳೆಯೊಬ್ಬರ ಜತೆ ಅನುಚಿತವಾಗಿ ವರ್ತಿಸಿ ಹಿಂಸಿಸುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಅಲಿರಾಜ್‌ಪುರ ಪೊಲೀಸರ ಪ್ರಕಾರ ಈ ಘಟನೆಯು ಮಾರ್ಚ್ 11 ರಂದು ಸೋಂದ್ವಾ ತಹಸಿಲ್‌ನ ವಾಲ್ಪುರ್ ಗ್ರಾಮದಲ್ಲಿ ಸಂಭವಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಎಸ್‌ಪಿ ಮನೋಜ್ ಕುಮಾರ್ ಸಿಂಗ್, ವಿಡಿಯೊ ವೈರಲ್ ಆದ ನಂತರ ಶನಿವಾರ ಮಧ್ಯಾಹ್ನ ಘಟನೆಯ ಬಗ್ಗೆ ನಮಗೆ ತಿಳಿಯಿತು. ಇಲ್ಲಿಯವರೆಗೆ ಯಾರೂ ದೂರು ನೀಡಲು ಮುಂದೆ ಬಂದಿಲ್ಲ, ಆದರೆ ಘಟನೆಯ ಅರಿವನ್ನು ತೆಗೆದುಕೊಂಡು, ನಾವು ವೊಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಗುರುತಿಸಿದ್ದೇವೆ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪುರುಷರನ್ನು ಬಂಧಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದಿದ್ದಾರೆ.
ಬರ್ವಾನಿಯ ಖಾಸಗಿ ಕಾಲೇಜು ಶಿಕ್ಷಕರೊಬ್ಬರು ಈ ವಿಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ಆರೋಪಿಗಳು ಧಾರ್ ಮತ್ತು ಬರ್ವಾನಿಯವರಾಗಿದ್ದಾರೆ ಎಂದು ಎಸ್‌ಪಿ ಹೇಳಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಗೆ ನಮ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭಗೋರಿಯಾವನ್ನು ಅಲಿರಾಜ್‌ಪುರ, ಝಬುವಾ, ಧಾರ್, ಬರ್ವಾನಿ ಮತ್ತು ಪಶ್ಚಿಮ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಬುಡಕಟ್ಟು ಜನರು ತಾಳೆ ಮರದಿಂದ ತಯಾರಿಸಿದ ಕಳ್ಳು ಸೇವಿಸುವುದು ವಾಡಿಕೆ ಎಂದು ಪೊಲೀಸರು ತಿಳಿಸಿದ್ದಾರೆ. .‘ಇಂತಹ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೆವು. ಆದರೆ ಘಟನೆ ಬೆಳಕಿಗೆ ಬಂದ ನಂತರ, ನಾವು ವಿಡಿಯೊ ಮಾಡಿದ ವ್ಯಕ್ತಿಯನ್ನು ಹಿಡಿದಿದ್ದೇವೆ. ಮಹಿಳೆಯರ ಜತೆ ಹೀನಾಯವಾಗಿ ನಡೆಸಿಕೊಂಡವರನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ವಿಡಿಯೊ ವೈರಲ್ ಮಧ್ಯಪ್ರದೇಶದ ಜನಪ್ರಿಯ ಬುಡಕಟ್ಟು ಉತ್ಸವದ ಸಂದರ್ಭದಲ್ಲಿ ಪುರುಷರ ಗುಂಪೊಂದು ಇಬ್ಬರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿರುವುದು ವಿಡಿಯೊದಲ್ಲಿದೆ. ಆ ಸ್ಥಳದ ಮೂಲಕ ಹಾದುಹೋಗುವ ವ್ಯಕ್ತಿಯೊಬ್ಬರು ಆಕೆಯ ಮೇಲೆ ಹಲ್ಲೆ ನಡೆಸಿದಾಗ ವಾಹನದ ಹಿಂದೆ ಮಹಿಳೆ ಅಡಗಿಕೊಳ್ಳುತ್ತಿರುವುದು ಕಾಣಿಸುತ್ತದೆ. ವ್ಯಕ್ತಿಯೊಬ್ಬ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡಾಗ ಮತ್ತೊಬ್ಬ ವ್ಯಕ್ತಿ ಆತನನ್ನು ಹಿಡಿದು ಸರಿಸುತ್ತಿರುವುದು ವಿಡಿಯೊದಲ್ಲಿದೆ. ಕೆಲವು ಕ್ಷಣಗಳ ನಂತರ, ಇನ್ನೊಬ್ಬ ವ್ಯಕ್ತಿ ಆಕೆಯನ್ನು ಬಲವಂತವಾಗಿ ತಬ್ಬಿ ದೌರ್ಜನ್ಯವೆಸಗಿ ಆಕೆಯನ್ನು ಪುರುಷರ ಗುಂಪಿನ ಕಡೆಗೆ ಎಳೆದುಕೊಂಡು ಹೋಗುತ್ತಾನೆ. ಅಲ್ಲಿರುವ ಹಲವರು ಯುವಕರು ಆಕೆಯ ಮೇಲೆ ಮುಗಿಬೀಳುತ್ತಿರುವುದು ವಿಡಿಯೊದಲ್ಲಿದೆ. ಆಕೆಯನ್ನು ಗಂಡಸರು ಮುತ್ತಿಗೆ ಹಾಕಿ ಎಳೆದೊಯ್ಯುತ್ತಿದ್ದಂತೆ ಯುವಕರ ಗುಂಪು ಹಿಂದಿನಿಂದ ಮೊಬೈಲ್ ಚಿತ್ರೀಕರಣ ಮಾಡುತ್ತಿರುವುದು ಈ ವಿಡಿಯೊದಲ್ಲಿದೆ.
ಇದನ್ನೂ ಓದಿ:ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲಿ ರಷ್ಯಾ ದಾಳಿ ನಂತರ ಭಾರತ ರಾಯಭಾರ ಕಚೇರಿ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರ




