Viral Video: ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿದ ಶಾಸಕನ ವಿಡಿಯೋ ವೈರಲ್; ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ್ ಮಂಡಲ್

JDU MLA Gopal Mandal: ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಚಡ್ಡಿ, ಬನಿಯನ್ ಧರಿಸಿ ರೈಲಿನೊಳಗೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿದ ಶಾಸಕನ ವಿಡಿಯೋ ವೈರಲ್; ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ್ ಮಂಡಲ್
ರೈಲಿನಲ್ಲಿ ಒಳ ಉಡುಪಿನಲ್ಲಿ ಓಡಾಡಿದ ಜೆಡಿಯು ಶಾಸಕ ಗೋಪಾಲ್ ಮಂಡಲ್
Updated By: ಸುಷ್ಮಾ ಚಕ್ರೆ

Updated on: Sep 03, 2021 | 6:41 PM

ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ಪರದಾಡುತ್ತಾರೆ. ಆದರೆ, ಜೆಡಿಯು ಶಾಸಕರೊಬ್ಬರು ರೈಲಿನೊಳಗೆ ಚಡ್ಡಿ, ಬನಿಯನ್ ಧರಿಸಿ ಓಡಾಡಿದ್ದಾರೆ. ಅಕ್ಕಪಕ್ಕದ ಪ್ರಯಾಣಿಕರು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಆ ಶಾಸಕರ ಅಸಭ್ಯ ವರ್ತನೆಗೆ ಜಗಳವನ್ನೂ ಆಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಶಾಸಕ ಸ್ಪಷ್ಟನೆಯನ್ನೂ ನೀಡಿದ್ದಾರೆ. ಹಾಗಿದ್ದರೆ ಆ ಶಾಸಕ ಯಾರು?

ಬಿಹಾರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ದೆಹಲಿಯ ತೇಜಸ್ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನ ಎಸಿ ಫಸ್ಟ್​ ಕ್ಲಾಸ್​​ ಕಂಪಾರ್ಟ್​ಮೆಂಟ್​ನಲ್ಲಿ ಶಾಸಕ ಗೋಪಾಲ್ ಮಂಡಲ್ ಜೊತೆಗೆ ಸಹ ಪ್ರಯಾಣಿಕರು ಜಗಳವಾಡಿದ್ದಾರೆ. ಗೋಪಾಲ್ ಮಂಡಲ್ ಪಾಟ್ನಾದಿಂದ ನವದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಶಾಸಕರು ಬಿಳಿ ಬಣ್ಣದ ಬನಿಯನ್ ಹಾಗೂ ಅಂಡರ್ ವೇರ್ ಧರಿಸಿ ಓಡಾಡಿದ್ದಾರೆ.

ಇದನ್ನು ಗಮನಿಸಿದ ಬೇರೆ ಪ್ರಯಾಣಿಕರು ಶಾಸಕರ ಜೊತೆ ಜಗಳವಾಡಿದ್ದಾರೆ. ಬಳಿಕ ರೈಲಿನ ಟಿಕೆಟ್ ಕಲೆಕ್ಟರ್​ಗೆ ದೂರನ್ನೂ ನೀಡಿದ್ದಾರೆ. ಬಳಿಕ ಶಾಸಕರು ಹಾಗೂ ಸಹಪ್ರಯಾಣಿಕರನ್ನು ಸಾಂತ್ವನಗೊಳಿಸಿ ರೈಲ್ವೆ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವು ಒಳ ಉಡುಪಿನಲ್ಲಿ ರೈಲಿನೊಳಗೆ ಓಡಾಡಿರುವುದಕ್ಕೆ ಕಾರಣ ತಿಳಿಸಿರುವ ಜೆಡಿಯು ಶಾಸಕ ಗೋಪಾಲ್ ಮಂಡಲ್, ಪ್ರಯಾಣದ ವೇಳೆ ನನ್ನ ಹೊಟ್ಟೆ ಸರಿಯಿರಲಿಲ್ಲ. ಅರ್ಜೆಂಟಾಗಿ ಟಾಯ್ಲೆಟ್​ಗೆ ಹೋಗಬೇಕಾಗಿತ್ತು. ಹೀಗಾಗಿ, ಪ್ಯಾಂಟ್, ಶರ್ಟ್​ ಅನ್ನು ಕಂಪಾರ್ಟ್​ಮೆಂಟ್​ನಲ್ಲಿ ಬಿಚ್ಚಿಟ್ಟು, ಟಾಯ್ಲೆಟ್​ ಕಡೆ ಹೋಗುವಾಗ ಟವೆಲ್ ಸುತ್ತಿಕೊಳ್ಳಲು ಮರೆತು ಹೆಗಲ ಮೇಲೆ ಹಾಕಿಕೊಂಡಿದ್ದೆ. ಅದನ್ನು ಸೊಂಟಕ್ಕೆ ಸುತ್ತಿಕೊಳ್ಳಲು ನಾನು ಮರೆತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವೇಳೆ ಟಾಯ್ಲೆಟ್​ನಿಂದ ಬರುತ್ತಿದ್ದ ಪ್ರಯಾಣಿಕರೊಬ್ಬರು ಅರೆ ನಗ್ನವಾಗಿ ಓಡಾಡುತ್ತಿರುವುದಕ್ಕೆ ಆಕ್ಷೇಪ ಎತ್ತಿದ್ದರು. ಇಲ್ಲಿ ಮಹಿಳೆಯರು ಕೂಡ ಓಡಾಡುತ್ತಾರೆ. ನೀವು ಹೀಗೆಲ್ಲ ಬಟ್ಟೆ ಬಿಚ್ಚಿ ಓಡಾಡಬಾರದು ಎಂದು ಜಗಳವಾಡಿದ್ದರು. ಅದರಿಂದ ಕೋಪಗೊಂಡ ಗೋಪಾಲ್ ಮಂಡಲ್, ಅದನ್ನೆಲ್ಲ ಕೇಳೋಕೆ ನೀನು ಯಾರು? ನಾನು ಓರ್ವ ಶಾಸಕ. ನನ್ನನ್ನು ಹೀಗೆಲ್ಲ ಪ್ರಶ್ನೆ ಮಾಡೋಕೆ ನೀನು ಯಾರು? ನನಗೆ ಟಾಯ್ಲೆಟ್​ಗೆ ಹೋಗೋಕೆ ಅರ್ಜೆಂಟ್ ಆಗಿದೆ ದಾರಿ ಬಿಡಿ ಎಂದು ಹೇಳಿದೆ. ಅದಕ್ಕೆ ಆತ ನೀವು ಶಾಸಕರಾದರೆ ನಾನು ಈ ದೇಶದ ಪ್ರಜೆ ಎಂದು ಹೇಳಿದರು ಎಂದು ಶಾಸಕ ಗೋಪಾಲ್ ತಿಳಿಸಿದ್ದಾರೆ.

ನಾನು ಟಾಯ್ಲೆಟ್​ಗೆ ಹೋಗಿ ಬರುವಷ್ಟರಲ್ಲಿ ಅಲ್ಲಿಗೆ ಪೊಲೀಸರು ಬಂದರು. ಇಬ್ಬರನ್ನೂ ಸಮಾಧಾನಗೊಳಿಸಿದ ಅವರು ಈ ವಿಷಯವನ್ನು ದೊಡ್ಡದು ಮಾಡದಂತೆ ಕೋರಿದರು. ಆಮೇಲೆ ನಾನು ಆ ಪ್ರಯಾಣಿಕರ ಬಳಿ ಕ್ಷಮೆ ಕೇಳಿದೆ ಎಂದು ಮಾಧ್ಯಮಗಳಿಗೆ ಗೋಪಾಲ್ ಮಂಡಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Viral News: ಪ್ರೇಯಸಿಗಾಗಿ ಹುಡುಗಿಯಂತೆ ಡ್ರೆಸ್ ಧರಿಸಿ, ಮೇಕಪ್ ಮಾಡಿಕೊಂಡು ಪರೀಕ್ಷೆ ಬರೆದ ಪ್ರೇಮಿ!

(Viral Video: JDU MLA Gopal Mandal Seen Walking inside Train in Underwear Says His Stomach was upset)

Published On - 6:40 pm, Fri, 3 September 21