Viral Video: ಭಿಕ್ಷುಕನಂತೆ ಮನೆಗೆ ಬಂದು ಟಿಡಿಪಿ ನಾಯಕನ ಮೇಲೆ ಮಚ್ಚು ಬೀಸಿ ಪರಾರಿ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Nov 17, 2022 | 3:52 PM

ಭಿಕ್ಷೆ ನೀಡಲು ಹೊರಗೆ ಬಂದ ಶೇಷಗಿರಿ ರಾವ್​ ಮೇಲೆ ತನ್ನ ಬ್ಯಾಗ್​ನಲ್ಲಿದ್ದ ಮಚ್ಚಿನಿಂದ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Viral Video: ಭಿಕ್ಷುಕನಂತೆ ಮನೆಗೆ ಬಂದು ಟಿಡಿಪಿ ನಾಯಕನ ಮೇಲೆ ಮಚ್ಚು ಬೀಸಿ ಪರಾರಿ; ವಿಡಿಯೋ ವೈರಲ್
ಟಿಡಿಪಿ ನಾಯಕನ ಮೇಲೆ ಕೊಲೆ ಯತ್ನ
Follow us on

ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡದಲ್ಲಿ ತೆಲುಗು ದೇಶಂ ಪಕ್ಷದ (TDP) ನಾಯಕ ಪೊಲ್ನಾಟಿ ಶೇಷಗಿರಿ ರಾವ್ ಅವರ ಮನೆಗೆ ಭಿಕ್ಷೆ ಬೇಡುವವನ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಟಿಡಿಪಿ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಿಕ್ಷುಕನ ವೇಷದಲ್ಲಿ ಇಂದು ಬೆಳಗ್ಗೆ ಶೇಷಗಿರಿ ರಾವ್ ಅವರ ಮನೆಗೆ ಬಂದ ವ್ಯಕ್ತಿಗೆ ಹಣ ನೀಡಲು ಶೇಷಗಿರಿ ರಾವ್ ಹೊರಗೆ ಬರುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.

ಭಿಕ್ಷೆ ನೀಡಲು ಹೊರಗೆ ಬಂದ ಶೇಷಗಿರಿ ರಾವ್​ ಮೇಲೆ ತನ್ನ ಬ್ಯಾಗ್​ನಲ್ಲಿದ್ದ ಮಚ್ಚಿನಿಂದ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದಾಗ ಟಿಡಿಪಿ ನಾಯಕ ತನ್ನ ಮನೆಯ ಬಾಗಿಲಿನಲ್ಲಿ ನಿಂತುಕೊಂಡು ಹಣ ಮತ್ತು ಧಾನ್ಯಗಳನ್ನು ಭಿಕ್ಷೆಯಾಗಿ ನೀಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಬಹುದು. ಆಗ ತಕ್ಷಣ ಆರೋಪಿಯು ಟಿಡಿಪಿ ನಾಯಕರನ್ನು ಗಾಯಗೊಳಿಸಿ ಓಡಿಹೋಗುತ್ತಿರುವುದನ್ನು ಕಾಣಬಹುದು. ಆಗ ಒಬ್ಬರು ಮಹಿಳೆ ಮನೆಯಿಂದ ಹೊರಬಂದು ಜೋರಾಗಿ ಕೂಗುತ್ತಾ ಅವನ ಹಿಂದೆ ಓಡುತ್ತಾರೆ.

ಇದನ್ನೂ ಓದಿ: Crime News: ಕೌಟುಂಬಿಕ ಕಲಹ, ಮೈ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಕೊಂದ ಸೊಸೆ

ಈ ದಾಳಿಯಲ್ಲಿ ಶೇಷಗಿರಿ ರಾವ್ ಅವರ ತಲೆ ಮತ್ತು ಕೈಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಹಲ್ಲೆ ಮಾಡಿದ ಬಳಿಕ ಬೈಕ್‌ನಲ್ಲಿ ಮನೆಯ ಹೊರಗೆ ತನಗಾಗಿ ಕಾಯುತ್ತಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ 4 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಕಾಕಿನಾಡ ಪೊಲೀಸ್ ವರಿಷ್ಠಾಧಿಕಾರಿ ಎಂ. ರವೀಂದ್ರನಾಥ ಬಾಬು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ