Viral Video: ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ವೈದ್ಯನ ವಿಡಿಯೋ ವೈರಲ್

ರಾಜಸ್ಥಾನದ ಜೋಧ್​ಪುರದಲ್ಲಿ ವೈದ್ಯರೊಬ್ಬರು ನಾಯಿಯ ಬಾಯಿಗೆ ಬಟ್ಟೆ ಕಟ್ಟಿ, ಆ ನಾಯಿಯನ್ನು ಹಗ್ಗದಿಂದ ಕಾರಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ವೈದ್ಯನ ವಿಡಿಯೋ ವೈರಲ್
ಬೀದಿ ನಾಯಿಯನ್ನು ಕಾರಿನಲ್ಲಿ ಎಳೆದುಕೊಂಡು ಹೋದ ವೈದ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 19, 2022 | 8:40 AM

ಜೋಧ್​ಪುರ: ಕೆಲವರು ನಾಯಿ (Dog), ಬೆಕ್ಕುಗಳನ್ನು (Cat) ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಪ್ರಾಣಿಗಳ ಮುಖ ಕಂಡರೂ ಆಗುವುದಿಲ್ಲ. ನಾಯಿಗಳಿಗೆ ಥಳಿಸಿ ಹಿಂಸೆ ನೀಡಿ, ಕೊಂದಿರುವ ಘಟನೆಗಳು ಸಹ ಸಾಕಷ್ಟಿವೆ. ರಾಜಸ್ಥಾನದ ಜೋಧ್​ಪುರದಲ್ಲಿ (Jodhpur) ವೈದ್ಯರೊಬ್ಬರು ನಾಯಿಯ ಬಾಯಿಗೆ ಬಟ್ಟೆ ಕಟ್ಟಿ, ಆ ನಾಯಿಯನ್ನು ಹಗ್ಗದಿಂದ ಕಾರಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆ ವೈದ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಉದ್ದವಾದ ಹಗ್ಗದಲ್ಲಿ ನಾಯಿಯನ್ನು ಕಟ್ಟಿದ್ದರಿಂದ ಆ ನಾಯಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಿತ್ತು. ಸಾಕಷ್ಟು ವಾಹನಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಕಾರಿನಲ್ಲಿ ನಾಯಿಯನ್ನು ಎಳೆದುಕೊಂಡು ಹೋಗುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಕಾರಿಗೆ ಹಗ್ಗದಿಂದ ನಾಯಿಯನ್ನು ಕಟ್ಟಿಕೊಂಡು, ಕಾರನ್ನು ಚಲಾಯಿಸುತ್ತಿರುವ ವೈದ್ಯನಿಗೆ ಆ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನ ಸವಾರರು ಬುದ್ಧಿ ಹೇಳಿದರೂ ಕಾರನ್ನು ನಿಲ್ಲಿಸಲಿಲ್ಲ. ಕೊನೆಗೆ ಸ್ಥಳೀಯರು ಸೇರಿ ಆ ಕಾರನ್ನು ನಿಲ್ಲಿಸಿ ನಾಯಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ್ದಾರೆ.

ಇದನ್ನೂ ಓದಿ: Viral Video: ಮೈಮೇಲೆ ಜಿರಳೆ ಬಿದ್ದಾಗ ಚೀರಾಡುವವರನ್ನು ನೆನಪಿಸುವಂತಿದೆ ಈ ವೈರಲ್ ವಿಡಿಯೋ

ನಂತರ ಎನ್​ಜಿಓಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ನಾಯಿಯ ವಿಡಿಯೋ ನೋಡಿದ ಎನ್​ಜಿಓ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಆ ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಎನ್​ಜಿಓ ಡಾಗ್ ಹೋಮ್ ಫೌಂಡೇಶನ್ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ವೈದ್ಯರ ಹೆಸರು ರಜನೀಶ್ ಗಾಲ್ವಾ. ತಮ್ಮ ಮನೆಯ ಹತ್ತಿರವಿದ್ದ ಬೀದಿ ನಾಯಿ ಅಲ್ಲೇ ಓಡಾಡುತ್ತಿದ್ದುದರಿಂದ ಅವರಿಗೆ ಕಿರಿಕಿರಿ ಆಗುತ್ತಿತ್ತು. ಇದರಿಂದ ಆ ಬೀದಿ ನಾಯಿಯನ್ನು ಬೇರೆಡೆ ಬಿಟ್ಟು ಬರಲು ಅವರು ಕಾರಿಗೆ ನಾಯಿಯನ್ನು ಕಟ್ಟಿಕೊಂಡು ಹೋಗಿದ್ದರು ಎನ್ನಲಾಗಿದೆ. ಡಾ. ರಜನೀಶ್ ಗ್ವಾಲಾ ಅವರ ಈ ಕೃತ್ಯದಿಂದ ಆ ನಾಯಿಯ ಕಾಲುಗಳಿಗೆ ಮೂಳೆ ಮುರಿತವಾಗಿದೆ. ಈ ಘಟನೆಯು ಶಾಸ್ತ್ರಿನಗರ ಜೋಧ್‌ಪುರದಲ್ಲಿ ನಡೆದ ಘಟನೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರ ಪರವಾನಗಿಯನ್ನು ರದ್ದುಗೊಳಿಸಬೇಕು” ಎಂದು ಎನ್​ಜಿಓ ಸಿಬ್ಬಂದಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:40 am, Mon, 19 September 22