ಚಂಡೀಗಢ ವಿಶ್ವವಿದ್ಯಾಲಯದ ವಿಡಿಯೊ ಸೋರಿಕೆ ಪ್ರಕರಣ : ಶಿಮ್ಲಾದಲ್ಲಿ ಯುವಕನ ಬಂಧನ, ಮೊಹಾಲಿಯಲ್ಲಿ ವಿದ್ಯಾರ್ಥಿನಿ ವಶಕ್ಕೆ

Chandigarh University ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಹಲವಾರು ಮಹಿಳಾ ವಿದ್ಯಾರ್ಥಿಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗಿದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಲಾಗಿದೆ. ಹೀಗೆ ಸೋರಿಕೆಯಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳುವ "ಸುಳ್ಳು ಮತ್ತು ಆಧಾರರಹಿತ...

ಚಂಡೀಗಢ ವಿಶ್ವವಿದ್ಯಾಲಯದ ವಿಡಿಯೊ ಸೋರಿಕೆ ಪ್ರಕರಣ : ಶಿಮ್ಲಾದಲ್ಲಿ ಯುವಕನ ಬಂಧನ, ಮೊಹಾಲಿಯಲ್ಲಿ ವಿದ್ಯಾರ್ಥಿನಿ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 18, 2022 | 10:37 PM

ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ (Chandigarh University) ನಡೆದ ವಿಡಿಯೊ ಸೋರಿಕೆ ಪ್ರಕಕರಣದಲ್ಲಿ ಶಿಮ್ಲಾ ಜಿಲ್ಲಾ ಪೊಲೀಸರು 23ರ ಹರೆಯದ ಯುವಕನ್ನು ಭಾನುವಾರ ಬಂಧಿಸಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದ  ವಿಡಿಯೋ ಸೋರಿಕೆ ಪ್ರಕರಣದಲ್ಲಿ ಎರಡನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿಮಾಚಲ ಪ್ರದೇಶ (Himachal Pradesh) ಪೊಲೀಸರು ಭಾನುವಾರ ಸಂಜೆ ತಿಳಿಸಿದ್ದಾರೆ. ವಿವಾದದ ಕೇಂದ್ರಬಿಂದುವಾಗಿರುವ ವಿದ್ಯಾರ್ಥಿನಿಯ ಗೆಳೆಯನನ್ನು ಶಿಮ್ಲಾದ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯು ವಿಶ್ವವಿದ್ಯಾನಿಲಯದ ಹಲವಾರು ಹುಡುಗಿಯರ “ಆಕ್ಷೇಪಾರ್ಹ ವೀಡಿಯೊಗಳನ್ನು” ಹಂಚಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಪೊಲೀಸರು ವಿದ್ಯಾರ್ಥಿನಿ ಹಲವು ವಿದ್ಯಾರ್ಥಿನಿಯರ ವಿಡಿಯೊ ಹಂಚಿಕೊಂಡಿದ್ದಾಳೆ ಎಂಬ ಆರೋಪ ತಳ್ಳಿ ಹಾಕಿದ್ದು, ಆಕೆ ಅವಳ ವಿಡಿಯೊವನ್ನು ಮಾತ್ರ ಬಾಯ್ ಫ್ರೆಂಡ್ ಸನ್ನಿ ಮೆಹ್ತಾ ಜತೆಗೆ ಹಂಚಿಕೊಂಡಿದ್ದಾಳೆ ಎಂದಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸುಮಾರು 60 ವಿದ್ಯಾರ್ಥಿಗಳ ಆಕ್ಷೇಪಾರ್ಹ ವಿಡಿಯೊಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರೀ ಪ್ರತಿಭಟನೆಗಳು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 22 ವರ್ಷದ ಯುವತಿಯನ್ನು ಮೊಹಾಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಮ್ಲಾದ ಢಲ್ಲಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ 31 ವರ್ಷದ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಹಿಮಾಚಲ ಪ್ರದೇಶ ಪೊಲೀಸರು ಪಂಜಾಬ್ ಪೊಲೀಸರ ಮನವಿಗೆ ಸೂಕ್ಷ್ಮತೆ ಮತ್ತು ವೃತ್ತಿಪರತೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದೇವೆ. ಉತ್ತಮ ವೃತ್ತಿಪರ ಕೆಲಸಕ್ಕಾಗಿ ಶಿಮ್ಲಾ ಎಸ್ಪಿ  ಡಾ ಮೋನಿಕಾ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಎಂದು ಡಿಜಿಪಿ ಸಂಜಯ್ ಕುಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಪಂಜಾಬ್‌ನ ಮೊಹಾಲಿಯ ಖಾಸಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಹಲವಾರು ಮಹಿಳಾ ವಿದ್ಯಾರ್ಥಿಗಳ ಆಕ್ಷೇಪಾರ್ಹ ವಿಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ ಎಂಬ ವದಂತಿಗಳ  ಹಬ್ಬಿದ ಬೆನ್ನಲ್ಲೇ  ಹಾಸ್ಟೆಲ್ ನಲ್ಲಿ ಪ್ರತಿಭಟನೆ ನಡೆದಿತ್ತು.

ವಿವಿ ಆವರಣದಲ್ಲಿ ಭಾನುವಾರ ಸಂಜೆ ಹೊಸ ಪ್ರತಿಭಟನೆ

ಪ್ರಾಥಮಿಕ ತನಿಖೆಯ ನಂತರ, ಪೋಲಿಸರು ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ. ಅವರು ತಮ್ಮ ಗೆಳೆಯನೊಂದಿಗೆ ತಮ್ಮದೇ ವಿಡಿಯೊ ಹಂಚಿಕೊಂಡಿದ್ದಾರೆ. ಆದರೆ ಹಾಸ್ಟೆಲ್‌ನಲ್ಲಿರುವ ಇತರ ಹುಡುಗಿಯರ ವಿಡಿಯೊಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶನಿವಾರ ರಾತ್ರಿ ಪ್ರತಿಭಟನೆಯ ನಂತರ ಪರಿಸ್ಥಿತಿಯನ್ನು ಅವಲೋಕಿಸಲು ಇತರ ಹಿರಿಯ ಅಧಿಕಾರಿಗಳೊಂದಿಗೆ ಚಂಡೀಗಢ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗೆ ಆಗಮಿಸಿದ ಪಂಜಾಬ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗುರ್‌ಪ್ರೀತ್ ಡಿಯೋ, ಮಹಿಳಾ ವಿದ್ಯಾರ್ಥಿನಿಯು ಯುವನೊಂದಿಗೆ ತನ್ನ ವಿಡಿಯೊ ಮಾತ್ರ  ಹಂಚಿಕೊಂಡಂತೆ ತೋರುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಇತರರ ಯಾವುದೇ ಆಕ್ಷೇಪಾರ್ಹ ವಿಡಿಯೊ ಕಂಡುಬಂದಿಲ್ಲ ಎಂದಿದ್ದಾರೆ ಅವರು.

ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಹಲವಾರು ಮಹಿಳಾ ವಿದ್ಯಾರ್ಥಿಗಳ ವಿಡಿಯೊಗಳನ್ನು ಚಿತ್ರೀಕರಿಸಲಾಗಿದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡಲಾಗಿದೆ. ಹೀಗೆ ಸೋರಿಕೆಯಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳುವ “ಸುಳ್ಳು ಮತ್ತು ಆಧಾರರಹಿತ” ವರದಿಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಆದಾಗ್ಯೂ, ವಿಶ್ವವಿದ್ಯಾಲಯದ ಅಧಿಕಾರಿಗಳು ಘಟನೆಯನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಆರೋಪಿಸಿ ಕೆಲವರು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾನುವಾರ ಸಂಜೆ ವಿಶ್ವವಿದ್ಯಾಲಯದ ಆವರಣದಲ್ಲಿ ಮತ್ತೆ  ಪ್ರತಿಭಟನೆಯನ್ನು ನಡೆಸಿದರು. ಬಹುತೇಕ ಪ್ರತಿಭಟನಾಕಾರರು ಕಪ್ಪು ಬಟ್ಟೆ ಧರಿಸಿ ಪೊಲೀಸರ ಮುಂದೆ ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗಿದರು.

ಮೊಹಾಲಿ ಹಿರಿಯ ಪೊಲೀಸ್ ಅಧೀಕ್ಷಕ ವಿವೇಕ್ ಶೀಲ್ ಸೋನಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಶನಿವಾರ ಮಧ್ಯರಾತ್ರಿ ವಿಶ್ವವಿದ್ಯಾನಿಲಯದಲ್ಲಿ ಹಲವಾರು ಮಹಿಳಾ ವಿದ್ಯಾರ್ಥಿಗಳ ವಿಡಿಯೊಗಳನ್ನು ಚಿತ್ರೀಕರಿಸಿ ಸೋರಿಕೆ ಮಾಡಲಾಗಿದೆ ಎಂಬ ವದಂತಿಗಳ ನಂತರ ಪ್ರತಿಭಟನೆಗಳು ಶುರುವಾಗಿದೆ ಎಂದಿದ್ದಾರೆ. ಬಂಧಿತ ವಿದ್ಯಾರ್ಥಿಯ ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ವಿಶ್ಲೇಷಣೆಗಾಗಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಅಥವಾ ಸಾವು ಸಂಭವಿಸಿಲ್ಲ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 354-ಸಿ ಮತ್ತು ಐಟಿ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಮಾನ್ ಘಟನೆಯ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.