Viral Video: ಮಳೆ ನೀರು ತುಂಬಿದ ಶಾಲೆಯೊಳಗೆ ಬರಲು ಟೀಚರ್ಗೆ ಪ್ಲಾಸ್ಟಿಕ್ ಕುರ್ಚಿ ಜೋಡಿಸಿಟ್ಟ ವಿದ್ಯಾರ್ಥಿಗಳು; ಶಿಕ್ಷಕಿ ಅಮಾನತು
ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ನಡೆಯುತ್ತಾ ಮಳೆ ನೀರನ್ನು ದಾಟಿ ಶಾಲೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮಳೆ ಜೋರಾಗಿದೆ. ಶಾಲೆಯ ಸುತ್ತ ಮಳೆ ನೀರು ತುಂಬಿದ್ದರಿಂದ ಶಾಲೆಯೊಳಗೆ ಹೋಗಬೇಕಾದರೆ ಮೊಣಕಾಲಿನವರೆಗೂ ಒದ್ದೆಯಾಗುತ್ತಿತ್ತು. ಹೀಗಾಗಿ, ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ಮಳೆ (Rain Water) ನೀರು ತುಂಬಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಕುರ್ಚಿಗಳನ್ನು ಜೋಡಿಸಿಡಲು ಹೇಳಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕಿಯ ಅತಿರೇಕದ ವರ್ತನೆಗೆ ಆಕ್ರೋಶವೂ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ನಡೆಯುತ್ತಾ ಮಳೆ ನೀರನ್ನು ದಾಟಿ ಶಾಲೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳನ್ನು ತನ್ನ ಕೆಲಸಕ್ಕೆ ಬಳಕೆ ಮಾಡಿಕೊಂಡ ಅವರನ್ನು ಅಮಾನತು ಮಾಡಲಾಗಿದೆ.
ಪ್ಲಾಸ್ಟಿಕ್ ಕುರ್ಚಿಗಳನ್ನು ಸಾಲಾಗಿ ಜೋಡಿಸಿದ್ದ ಮಕ್ಕಳು ತಮ್ಮ ಶಿಕ್ಷಕಿ ಒಂದೊಂದೇ ಕುರ್ಚಿಗಳ ಮೇಲೆ ಕಾಲಿಡುವಾಗ ಆ ಕುರ್ಚಿ ಅಲುಗಾಡದಂತೆ ಹಿಡಿದುಕೊಂಡಿದ್ದರು. ಮೊಣಕಾಲಿನವರೆಗೆ ನಿಂತಿದ್ದ ಮಳೆ ನೀರಿನಲ್ಲಿ ನಿಂತು ಶಿಕ್ಷಕಿಯನ್ನು ಶಾಲೆಯೊಳಗೆ ದಾಟಿಸಿದ ವಿದ್ಯಾರ್ಥಿಗಳಿಗೆ ಸುತ್ತಲೂ ಇದ್ದ ಶಿಕ್ಷಕರು ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Viral Video: ಶಾಲೆಗೆ ತಡವಾಗಿ ಬಂದಿದ್ದಕ್ಕೆ ವಿದ್ಯಾರ್ಥಿನಿಯರ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!
ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬುಧವಾರ ಎಡೆಬಿಡದೆ ಸುರಿದ ಮಳೆಗೆ ಶಾಲಾ ಆವರಣ ಜಲಾವೃತವಾಗಿತ್ತು. ಆ ವೇಳೆ ಈ ಘಟನೆ ನಡೆದಿದ್ದು, ಬೇರೊಬ್ಬ ಶಿಕ್ಷಕರು ಅದನ್ನು ವಿಡಿಯೋ ಮಾಡಿಕೊಂಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ವಿಡಿಯೋವೇ ಆ ಶಿಕ್ಷಕಿಗೆ ತಿರುಗುಬಾಣವಾಗಿದೆ.
Published On - 1:27 pm, Thu, 28 July 22




