Tamil Nadu Assembly Elections 2021: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ; ಇದು ಎಐಎಡಿಎಂಕೆ ಸಂಚು ಎಂದ ಎಎಂಎಂಕೆ

|

Updated on: Apr 05, 2021 | 6:17 PM

VK Sasikala: ಶಶಿಕಲಾ ಮತ್ತು ಆಕೆಯ ಸಂಬಂಧಿ ಇಳವರಸಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಆದರೆ ಇಳವರಸಿ ಅವರ ಮಗ ವಿವೇಕ್ ಜಯರಾಂ ಹೆಸರು ಮತದಾರರ ಪಟ್ಟಿಯಲ್ಲಿದೆ.

Tamil Nadu Assembly Elections 2021: ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆ; ಇದು ಎಐಎಡಿಎಂಕೆ ಸಂಚು ಎಂದ ಎಎಂಎಂಕೆ
ಶಶಿಕಲಾ
Follow us on

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿದೆ. ನಾಳೆ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರು ನಾಪತ್ತೆಯಾಗಿರುವುದು ಎಐಎಡಿಎಂಕೆ (AIADMK) ಪಕ್ಷದ ಸಂಚು ಎಂದು ಎಎಂಎಂಕೆ (AMMK) ನಾಯಕ ಟಿಟಿವಿ ದಿನಕರನ್ ಆರೋಪಿಸಿದ್ದಾರೆ. ಇದು ಕ್ರೌರ್ಯ. ಮತದಾರ ಪಟ್ಟಿಯಿಂದ ಆಕೆಯ ಹೆಸರು ಹೇಗೆ ಡಿಲೀಟ್ ಆಗಿದ್ದು? ಯಾವುದಾದರೂ ಅಧಿಕಾರಿಗಳು ಅವರಿಗೆ ಈ ವಿಷಯ ತಿಳಿಸಿದ್ದಾರೆಯೇ? ಎಂದು ಥೌಸಂಡ ಲೈಟ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಎಎಂಎಂಕೆ ಅಭ್ಯರ್ಥಿ ಎನ್.ವೈದ್ಯನಾಥನ್ ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ಜಿದ್ದಾಜಿದ್ದಿ ಪೈಪೋಟಿ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲೊಂದಾಗಿದೆ ಥೌಸಂಡ್ ಸೈಟ್ಸ್. ಶಶಿಕಲಾ ಮತ್ತು ಆಕೆಯ ಸಂಬಂಧಿ ಇಳವರಸಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಆದರೆ ಇಳವರಸಿ ಅವರ ಮಗ ವಿವೇಕ್ ಜಯರಾಂ ಹೆಸರು ಮತದಾರರ ಪಟ್ಟಿಯಲ್ಲಿದೆ.

ಪೊಯೆಸ್ ಗಾರ್ಡನ್ ಅನ್ನು ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರ ತೆಗೆದುಕೊಂಡ ನಂತರ ಶಶಿಕಲಾ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

2019ರಲ್ಲಿ ಶಶಿಕಲಾ ಜೈಲಿನಲ್ಲಿದ್ದ ಕಾರಣ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಯಾರೂ ಗಮನಿಸಿರಲಿಲ್ಲ. ಜೈಲಿನಿಂದ ಬಿಡುಗಡೆಯಾದ ನಂತರ ತಮಿಳುನಾಡಿನಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ ಇದು. ಜೈಲಿನಿಂದ ಬಿಡುಗಡೆಯಾದ ನಂತರ ಚುನಾವಣಾ ಆಯೋಗವನ್ನು ಸಮೀಪಿಸಿದ್ದರೂ ಅಷ್ಟೊತ್ತಿಗೆ ಮತದಾರರ ಪಟ್ಟಿ ಬಿಡುಗಡೆಯಾಗಿತ್ತು.

ವೇದ ನಿಲಯಂ ಅನ್ನು (ಜಯಲಲಿತಾ ಅವರ ನಿವಾಸ) ರಾಜ್ಯ ಸರ್ಕಾರ ಸುಪರ್ದಿಗೆ ತೆಗೆದುಕೊಂಡಾಗ ಶಶಿಕಲಾ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿರುವ ನಿರ್ಧಾರವನ್ನು ಶಶಿಕಲಾ ಅವರಿಗೆ ಜೈಲಿನಲ್ಲಿರುವಾಗಲೇ ನೀಡಲಾಗಿತ್ತು ಎಂದು ಶಶಿಕಲಾ ಅವರ ಅನುಯಾಯಿ ರಾಜಾ ಸೆಂಥೂರ್ ಪಾಂಡ್ಯನ್ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಎಡಪ್ಪಾಡಿ.ಕೆ.ಪಳನಿಸ್ವಾಮಿ ಅವರ ವಿಶೇಷ ಆದೇಶದ ಮೇರೆಗೆ ಶಶಿಕಲಾ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ವೈದ್ಯನಾಥನ್ ವಾದಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೇರುವಂತೆ ಮಾಡಿದವರಲ್ಲಿ ಈ ರೀತಿ ವಂಚನೆ ಮಾಡಬಾರದಿತ್ತು ಎಂದು ವೈದ್ಯನಾಥನ್ ಹೇಳಿದ್ದಾರೆ.

ಜಯಲಲಿತಾರ ನೆಚ್ಚಿನ ಗೆಳತಿಯಾಗಿದ್ದ ಶಶಿಕಲಾ
ಚೆನ್ನೈನಲ್ಲಿ ಸಿನಿಮಾ ವಿಡಿಯೊ ಕ್ಯಾಸೆಟ್ ಬಾಡಿಗೆಗೆ ಕೊಡುವ ಅಂಗಡಿಯೊಂದನ್ನು ನಡೆಸುತ್ತಿದ್ದವರು ಶಶಿಕಲಾ. 80ರ ದಶಕದಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೆ.ಜಯಲಲಿತಾರ ಪರಿಚಯ ಮತ್ತು ಗೆಳೆತನದಿಂದ ಅವರ ದೆಸೆ ಬದಲಾಗಿತ್ತು. ಜಯಲಲಿತಾ ಬದುಕಿರುವವರೆಗೂ ಅವರ ಜೊತೆಗೆ ಗಟ್ಟಿಯಾಗಿ ನಿಂತು ವರ್ಚಸ್ಸು ಹೆಚ್ಚಿಸಿಕೊಂಡರು. ಗೆಳತಿಯರ ಮಧ್ಯೆ ತುಸು ಮನಸ್ತಾಪ ಬಂದಿದ್ದರೂ ಕ್ರಮೇಣ ಮನಸ್ಸುಗಳು ತಿಳಿಗೊಂಡಿದ್ದವು.

ಜಯಲಲಿತಾ 2016ರಲ್ಲಿ ನಿಧನರಾದಾಗ, ಎಂ​ಜಿಆರ್ ಅಂತ್ಯಸಂಸ್ಕಾರದ ಸಮಯದಲ್ಲಿ ಎಂಜಿಆರ್ ದೇಹದ ಪಕ್ಕದಲ್ಲಿಯೇ ಜಯಾ ಇದ್ದಂತೆ, ಜಯಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ವಿಧಿಗಳು ಮುಗಿಯುವರೆಗೆ ಶಶಿಕಲಾ ಇದ್ದರು. ಜಯಾ ವಿಧವಶರಾದ ನಂತರ ಪಕ್ಷದ ಸದಸ್ಯರು ಶಶಿಕಲಾರನ್ನು ‘ಚಿನ್ನಮ್ಮ’ ಎಂದು ಸಂಬೋಧಿಸಲಾರಂಬಿಸಿದರು. ಮುಖ್ಯಮಂತ್ರಿಯಾಗಿ ಓ.ಪನ್ನೀರ್​ಸೆಲ್ವಂ ಅಧಿಕಾರ ಸ್ವೀಕರಿಸಿದ್ದರೂ, ಆಡಳಿತದ ಚುಕ್ಕಾಣಿ ಶಶಿಕಲಾ ಅವರ ಕೈಲಿತ್ತು.

ಫೆಬ್ರುವರಿ 2017 ರಲ್ಲಿ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಶಶಿಕಲಾ ಪಟ್ಟಾಭಿಷೇಕಕ್ಕೆ ವೇದಿಕೆ ನಿರ್ಮಾಣಗೊಂಡಿತು. ಆದರೆ ರಾಜ್ಯಪಾಲ ಸಿ.ವಿದ್ಯಾಸಾಗರ ಅವರ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಶಶಿಕಲಾ ಅಧಿಕಾರ ಸ್ವೀಕರಿಸುವುದು ವಿಳಂಬವಾಯಿತು. ಇದೇ ಹೊತ್ತಿಗೆ ಸುಪ್ರೀಂಕೋರ್ಟ್​ ಆಕೆಯನ್ನು ಅಕ್ರಮ ಆಸ್ತಿ ಗಳಿಕೆ ಪ್ರಕಾರಣದಲ್ಲಿ ದೋಷಿ ಎಂದು ತೀರ್ಪು ನೀಡಿ 4 ವರ್ಷಗಳ ಶಿಕ್ಷೆ ವಿಧಿಸಿತು. ಕೋರ್ಟು ಆಕೆಯ ವಿರುದ್ಧ ತೀರ್ಪು ಪ್ರಕಟಿಸಿದ ಮರದಿನವೇ ಅಂದರೆ ಫೆಬ್ರುವರಿ 15ರಂದು ಆಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಜೈಲು ಅಧಿಕಾರಿಗಳೆದುರು ಶರಣಾದರು.

ಶಶಿಕಲಾ ಅವರ ನಾಲ್ಕು ವರ್ಷದ ಸೆರೆವಾಸ ಜನವರಿ 27, 2021ಕ್ಕೆ ಕೊನೆಗೊಂಡಿತ್ತು. ಆಕೆಯ ಅಭಿಮಾನಿಗಳು, ಬೆಂಬಲಿಗರು ಆಕೆಯನ್ನು ಅಭೂತಪೂರ್ವವಾಗಿ ತಮಿಳುನಾಡಿಗೆ ಬರಮಾಡಿಕೊಂಡಿದ್ದರು. ಎಐಎಡಿಂಕೆ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆ, ಬಿಜೆಪಿ ಜೊತೆಗೆ ಮೈತ್ರಿ ಮೂಲಕ ಡಿಎಂಕೆಯನ್ನು ಮಣಿಸಿ ಮುಖ್ಯಮಂತ್ರಿ ಗಾದಿಗೆ ಬರಲಿದ್ದಾರೆ ಎಂಬ ವಿಶ್ಲೇಷಣೆಗಳೂ ಚಾಲ್ತಿಗೆ ಬಂದಿದ್ದವು. ಆದರೆ ಈಗ ಅವರು ರಾಜಕೀಯ ನಿವೃತ್ತಿ ಘೋಷಿಸಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: Tamil Nadu Election 2021: ‘ನಾನು ರಾಜಕೀಯಕ್ಕಾಗಿ ಸಿನಿಮಾವನ್ನು ಸಂಪೂರ್ಣವಾಗಿ ಬಿಡಲೂ ಸಿದ್ಧನಿದ್ದೇನೆ..‘- ಕಮಲ್​ ಹಾಸನ್​