ವಯನಾಡು: ಕೇರಳದಲ್ಲಿರುವ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಜುಲೈ 23ರಂದು ಮುನ್ನೆಚ್ಚರಿಕೆ ನೀಡಿದ್ದರೂ ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ. ಭೂಕುಸಿತ ಪೀಡಿತ ವಯನಾಡಿಗೆ ಕೇಂದ್ರ ಸರ್ಕಾರ ಒಮ್ಮೆಯೂ IMD, GSI ಅಥವಾ CWC ರೆಡ್ ಅಲರ್ಟ್ ನೀಡಿಲ್ಲ ಎಂದಿದ್ದಾರೆ.
ಭಾರೀ ಮಳೆಯಿಂದಾಗಿ ವಿನಾಶಕಾರಿ ಭೂಕುಸಿತಗಳು ಸಂಭವಿಸಿ ಹಲವಾರು ಜನರನ್ನು ಬಲಿತೆಗೆದುಕೊಳ್ಳುವ ಮುನ್ನವೇ ರಾಜ್ಯ ಸರ್ಕಾರಕ್ಕೆ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡಲಾಗಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: Wayanad Landslide: ಜುಲೈ 23ರಂದೇ ಕೇರಳಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು; ವಯನಾಡು ಭೂಕುಸಿತದ ಬಗ್ಗೆ ಅಮಿತ್ ಶಾ ಮಾಹಿತಿ
ಭೂಕುಸಿತ ಸಂಭವಿಸುವ ಕನಿಷ್ಠ ಒಂದು ವಾರದ ಮೊದಲು ಕೇರಳದಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿತ್ತು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆಯ 8 ತಂಡಗಳನ್ನು ಕಳುಹಿಸಲಾಗಿತ್ತು ಎಂದು ಅಮಿತ್ ಶಾ ಹೇಳಿದ್ದರು. “ಜುಲೈ 18ರಂದು ಕೇರಳದ ಪಶ್ಚಿಮ ಕರಾವಳಿಯು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಅನುಭವಿಸುತ್ತದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಜುಲೈ 25ರಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಜುಲೈ 23ರಂದು ಎನ್‌ಡಿಆರ್‌ಎಫ್‌ನ 8 ತಂಡಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿತ್ತು” ಎಂದು ಅಮಿತ್ ಶಾ ಹೇಳಿದ್ದರು.
In times of tragedy, holding hands is the purest form of solidarity, a promise that no one faces adversity alone. Every contribution, no matter the size, makes a difference.#StandWithWayanad pic.twitter.com/ABYwZfhUen
— Pinarayi Vijayan (@pinarayivijayan) July 31, 2024
ಇದಕ್ಕೆ ಸ್ಪಷ್ಟನೆ ನೀಡಿರುವ ಪಿಣರಾಯಿ ವಿಜಯನ್, ಹವಾಮಾನ ಇಲಾಖೆಯ ಎಚ್ಚರಿಕೆಗಳ ಹೊರತಾಗಿಯೂ ಭೂಕುಸಿತಕ್ಕೂ ಮುನ್ನ ವಯನಾಡಿಗೆ ಯಾವುದೇ ರೆಡ್ ಅಲರ್ಟ್‌ಗಳನ್ನು ನೀಡಿರಲಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಗಮನ ಸೆಳೆದಿದ್ದಾರೆ. ವಯನಾಡು ಜಿಲ್ಲೆಯಲ್ಲಿ 500 ಮಿಲಿಮೀಟರ್‌ಗೂ ಹೆಚ್ಚು ಮಳೆಯಾಗಿದ್ದು, ಭವಿಷ್ಯ ನುಡಿದಿದ್ದಕ್ಕಿಂತ ಹೆಚ್ಚು ತೀವ್ರ ಹವಾಮಾನವನ್ನು ಅನುಭವಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ ದುರಂತಕ್ಕೆ ಮುನ್ನ ಬದಲಾಗಿತ್ತು ನದಿ ನೀರಿನ ಬಣ್ಣ; ಇದಾಗಿತ್ತೇ ಅಪಾಯದ ಸೂಚನೆ?
ಪಿಣರಾಯಿ ವಿಜಯನ್ ಪ್ರಕಾರ, IMD ಕೇವಲ 6 ಸೆಂ.ಮೀ ಮತ್ತು 20 ಸೆಂ.ಮೀ ನಡುವಿನ ಮಳೆಯನ್ನು ಸೂಚಿಸುವ ಆರೆಂಜ್ ಅಲರ್ಟ್ ಮಾತ್ರ ನೀಡಲಾಗಿತ್ತು. ಆದರೆ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚು ಭಾರೀ ಮಳೆಯನ್ನು ಸೂಚಿಸುವ ರೆಡ್ ಅಲರ್ಟ್ ನೀಡಿರಲಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ ನಂತರವೇ ವಯನಾಡು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದು ಆರೋಪ ಮಾಡುವ ಸಮಯವಲ್ಲ ಎಂದಿರುವ ಪಿಣರಾಯಿ ವಿಜಯನ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದ್ದಾರೆ. ಇದುವರೆಗೆ 1,592 ಜನರನ್ನು ರಕ್ಷಿಸಲಾಗಿದೆ ಮತ್ತು ವಯನಾಡ್ ಜಿಲ್ಲೆಯಲ್ಲಿ 82 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ, 2,017 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ