ಅಫ್ಘಾನಿಸ್ತಾನವೀಗ ತಾಲೀಬಾನ್ ವಶವಾಗಿದೆ. ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆದುಕೊಂಡು ಬರುವುದು ದೊಡ್ಡ ಸವಾಲಿನ ಕೆಲಸವಾಗಿದ್ದರೂ, ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಅಫ್ಘಾನ್ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿಯನ್ನೂ ಪ್ರಾರಂಭಿಸಿದೆ. ಅಫ್ಘಾನಿಸ್ತಾನದಲ್ಲಿ ಇಷ್ಟೆಲ್ಲ ದೊಡ್ಡ ಬೆಳವಣಿಗೆಗಳಾಗುತ್ತಿದ್ದರೂ, ಈಗಾಗಲೇ ಹಲವು ದೇಶಗಳ ನಾಯಕರು ಪ್ರತಿಕ್ರಿಯಿಸಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆದರೆ ನಿನ್ನೆ ಅಫ್ಘಾನ್ ಬೆಳವಣಿಗೆ ಸಂಬಂಧ ಭದ್ರತಾ ಸಂಪುಟ ಸಮಿತಿ (CCS)ಯ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಅಫ್ಘಾನಿಸ್ತಾನದಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಮತ್ತು ನಿರಾಶ್ರಿತರಾಗಿ, ಭಾರತದ ನೆರವು ಬಯಸುತ್ತಿರುವ ಅಫ್ಘಾನ್ ಸಹೋದರ, ಸೋದರಿಯರ ಸಹಾಯಕ್ಕೆ ನಿಲ್ಲಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಯೊಂದೇ ನಮ್ಮ ಉದ್ದೇಶವಾಗಿರಬಾರದು. ಇದೀಗ ನಿರಾಶ್ರಿತರಾಗಿ, ಭಾರತಕ್ಕೆ ಬರಲು ಇಚ್ಛಿಸುತ್ತಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದು ಮತ್ತು ಸಿಖ್ ಸಮುದಾಯವನ್ನೂ ನಾವು ಸುರಕ್ಷಿತ ಮಾಡಬೇಕು. ಅದರೊಂದಿಗೆ ಅಫ್ಘಾನ್ ಜನರಿಗೂ ನಮ್ಮ ಕೈಲಾದ ನೆರವು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಭೆಯಲ್ಲಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಕಾಬೂಲ್ನಲ್ಲಿದ್ದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಸೇರಿ, ಧೂತಾವಾಸ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 140 ಸಿಬ್ಬಂದಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ನಾಲ್ವರು ಭಾರತೀಯ ಮಾಧ್ಯಮ ಸಿಬ್ಬಂದಿ ನಿನ್ನೆ ಸಂಜೆ ಹೊತ್ತಿಗೆ ಕಾಬೂಲ್ನಿಂದ ದೆಹಲಿಗೆ ಬಂದಿದ್ದಾರೆ. ರಾಯಭಾರಿ ರುದ್ರೇಂದ್ರ ಟಂಡನ್ ಅವರು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಭದ್ರತಾ ಸಂಪುಟ ಸಮಿತಿ ಸಭೆಯಲ್ಲೂ ಪಾಲ್ಗೊಂಡು, ಅಫ್ಘಾನ್ ಪರಿಸ್ಥಿತಿಯ ಬಗ್ಗೆ ಮೋದಿಯವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿ ಇನ್ನೂ ಹಲವು ಪ್ರಮುಖರು ಇದ್ದರು. ಸಭೆಯಲ್ಲಿ ಅಪ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಭದ್ರತಾ ಸಂಪುಟ ಸಮಿತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಲ್ಲ ರೀತಿಯ ಮಾಹಿತಿಯನ್ನೂ ನೀಡಿದೆ.
ಇದನ್ನೂ ಓದಿ: ಶನಿ ಗ್ರಹದಂತೆ ಕಂಡ ಚಂದ್ರ! ಅಚ್ಚರಿಯ ವಿದ್ಯಮಾನದ ಈ ಚಿತ್ರವನ್ನು ನೋಡಿ
Alia Bhatt: ಚಿತ್ರೀಕರಣದ ಸೆಟ್ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು
Published On - 10:28 am, Wed, 18 August 21