ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಿಂದ ಬಚಾವ್ ಆದ ಶಶಿ ತರೂರ್; ಆರೋಪ ಮುಕ್ತ ಎಂದು ತೀರ್ಪು ನೀಡಿದ ದೆಹಲಿ ಕೋರ್ಟ್
Sunanda Pushkar Case: ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರ ಜನವರಿ 17ರಂದು ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದು ಆತ್ಮಹತ್ಯೆ ಎಂದು ಹೇಳಲಾಗಿತ್ತಾದರೂ, ಅದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ತರೂರ್ ವಿರುದ್ಧ ಕೇಸ್ ದಾಖಲಾಗಿತ್ತು.
2014ರ ಜನವರಿಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಸುನಂದಾ ಪುಷ್ಕರ್ (Sunanda Pushkar ) ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor)ಇದೀಗ ಆರೋಪ ಮುಕ್ತರಾಗಿದ್ದಾರೆ. ಅವರನ್ನು ಆರೋಪ ಮುಕ್ತಗೊಳಿಸಿ ದೆಹಲಿ ಕೋರ್ಟ್ ತೀರ್ಪು ನೀಡಿದೆ. ಪತ್ನಿ ಸುನಂದಾ ಪುಷ್ಕರ್ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ದೆಹಲಿ ಪೊಲೀಸರು ಅವರ ವಿರುದ್ಧ, ಸೆಕ್ಷನ್ 498 ಎ (ಮಹಿಳೆಯು ತನ್ನ ಪತಿ ಅಥವಾ ಪತಿಯ ಸಂಬಂಧಿಗಳಿಂದ ಕ್ರೌರ್ಯಕ್ಕೆ ಒಳಗಾಗುವುದು), ಸೆಕ್ಷನ್ 306 ( ಆತ್ಮಹತ್ಯೆಗೆ ಕುಮ್ಮಕ್ಕು) ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಮಾಜಿ ಕೇಂದ್ರ ಸಚಿವರೂ ಆಗಿರುವ ಶಶಿ ತರೂರ್ ಜಾಮೀನು ಆಧಾರದ ಮೇಲೆ ಜೈಲಿನಿಂದ ಹೊರಗಿದ್ದರು. ಈ ಸಂಬಂಧ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ತರೂರ್ ದೋಷಮುಕ್ತರೆಂದು ಕೋರ್ಟ್ ತೀರ್ಪು ನೀಡಿದೆ. ಬರೋಬ್ಬರಿ ಏಳೂವರೆ ವರ್ಷದ ಹಿಂಸೆ ಕೊನೆಗೊಂಡಿದೆ ಎಂದು ಹೇಳಿರುವ ಶಶಿ ತರೂರ್, ಕೋರ್ಟ್ಗೆ ಧನ್ಯವಾದ ಸಲ್ಲಿಸಿದ್ದಾರೆ.
ಸುನಂದಾ ಪುಷ್ಕರ್ ಶವ 2014ರ ಜನವರಿಯಲ್ಲಿ ಪಂಚತಾರಾ ಹೋಟೆಲ್ ಕೋಣೆಯಲ್ಲಿ ಪತ್ತೆಯಾದಾಗ ಮೊದಲು ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಯೊಬ್ಬರ ವಿರುದ್ಧ, 2015ರ ಆಗಸ್ಟ್ 1ರಂದು ಎಫ್ಐಆರ್ ದಾಖಲಿಸಿದ್ದರು. ಅದಾದ ನಂತರ ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಾಯಿತು. ಇದು ಕೊಲೆ ಎಂದೇ ದೆಹಲಿ ಪೋಲೀಸರು ತನಿಖೆ ಶುರು ಮಾಡಿದ್ದರು. ಸುನಂದಾ ಪುಷ್ಕರ್ ಪೋಸ್ಟ್ ಮಾರ್ಟಮ್ನಲ್ಲಿ ಸಾವಿಗೆ ವಿಷ ಕಾರಣವೆಂದು ಹೇಳಲಾಗಿದೆ. ಹಾಗೇ, ಅವರ ಮೈಮೇಲೆ ಗಾಯಗಳಿರುವುದು ಪೂರ್ವ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಅದರಲ್ಲೂ 12 ಗಾಯಗಳು ನಾಲ್ಕು ದಿನಗಳ ಹಳೆಯದು ಎಂದು ಕೋರ್ಟ್ಗೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಕುಮಾರ್ ಶ್ರೀವಾಸ್ತವ್ ವರದಿ ಸಲ್ಲಿಸಿದ್ದರು.
ಆದರೆ ಶಶಿ ತರೂರ್ ಪರ ಹಿರಿಯ ವಕೀಲ ವಿಕಾಸ್ ಪಾಹ್ವಾ ಇದನ್ನು ಅಲ್ಲಗಳೆದಿದ್ದರು. ಸುನಂದಾ ಪುಷ್ಕರ್ ಹತ್ಯೆಯಾಗಿದ್ದಾರೋ..ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ಯಾವುದೇ ಸ್ಪಷ್ಟತೆಯೇ ಸಿಗುತ್ತಿಲ್ಲ ಎಂದೇ ವಾದಿಸಿದ್ದರು.
ಸುನಂದಾ ಪುಷ್ಕರ್ ಸಾವಿನ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ಕೂಡ, ಅವರ ಸಾವು ಸಹಜವಲ್ಲ.. ರಷ್ಯಾದ ವಿಷ ನೀಡಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದರು. ದೆಹಲಿ ಪೊಲೀಸರ ವಾದವೂ ಅದೇ ಆಗಿತ್ತು. ಅದಕ್ಕೆ ಪೂರಕವೆಂಬತೆ ಸುನಂದಾ ಪುಷ್ಕರ್ ಮೈಮೇಲೆ ಇದ್ದ 12 ಗಾಯಗಳು ಇಂಜೆಕ್ಷನ್ನಿಂದ ಆಗಿದ್ದು ಎನ್ನಲಾಗಿತ್ತು. ಸತ್ತಾಗ ದೇಹದಿಂದ ದುರ್ಗಂಧ ಬರುತ್ತಿತ್ತು. ಈ ಎಲ್ಲ ವರದಿಗಳನ್ನೂ ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದರು. ಕೋರ್ಟ್ ತೀರ್ಪು ಏನು? ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್, ಶಶಿ ತರೂರ್ ಅವರನ್ನು ಆರೋಪ ಮುಕ್ತಗೊಳಿಸಿ ಇಂದು ಆದೇಶ ಹೊರಡಿಸಿದರು. ಕೋರ್ಟ್ ಕೇಳಿರುವ ಬಾಂಡ್ಗಳನ್ನು ಒದಗಿಸುವಂತೆ ಕೇಳಿದ್ದಾರೆ. ತೀರ್ಪು ಬರುತ್ತಿದ್ದಂತೆ ಶಶಿ ತರೂರ್ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಈ ಏಳೂವರೆ ವರ್ಷದ ಹಿಂಸೆ ಅಂತ್ಯಗೊಂಡಿದೆ. ನಾನು ಕೋರ್ಟ್ ತೀರ್ಪನ್ನು ನಿಜಕ್ಕೂ ಶ್ಲಾಘಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತೇವೆ; ಪೊಲೀಸ್ ಆಯುಕ್ತ ಕಮಲ್ ಪಂತ್
ಪಾಕ್ ಸ್ವಾತಂತ್ರ್ಯ ದಿನದಂದು ನೂರಾರು ಮಂದಿ ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದರು: ಮಹಿಳಾ ಟಿಕ್ ಟಾಕರ್ ದೂರು
Published On - 11:22 am, Wed, 18 August 21