
ನವದೆಹಲಿ, ಅಕ್ಟೋಬರ್ 20: ಉತ್ತಮ ಆಡಳಿತಕ್ಕೆ ‘ರಾಮರಾಜ್ಯ’ದ ಆದರ್ಶಗಳೇ ಸದಾ ಕಾಲಕ್ಕೂ ಮಾನದಂಡವಾಗಿ ಮುಂದುವರಿಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ನ್ಯಾಯ, ಸಮಾನ ಅವಕಾಶಗಳು ದೊರಕುವ ಹಾಗೂ ಸಾರ್ವಜನಿಕ ಕಲ್ಯಾಣವೇ ಆಡಳಿತದ ಮೂಲ ಗುರಿಯಾಗಿರುವ ವ್ಯವಸ್ಥೆಯೇ ರಾಮರಾಜ್ಯ. ಪ್ರಜೆಗಳನ್ನು ಗೌರವಯುತವಾಗಿ ಕಾಣಬೇಕು ಮತ್ತು ಬಡವರು ಹಾಗೂ ನಿರ್ಗತಿಕರ ಸೇವೆ ಮಾಡುವುದೇ ಆಡಳಿತದ ಮೊದಲ ಆದ್ಯತೆಯಾಗಿರಬೇಕು ಎಂದು ಹೇಳಿದ್ದಾರೆ.
“ಈ ಶುಭ ವಿಜಯದಶಮಿಯ ಸಂದರ್ಭದಲ್ಲಿ ನಾನು ಭಗವಾನ್ ಶ್ರೀರಾಮ, ಸೀತಾ ಮಾತೆ ಮತ್ತು ಬಜರಂಗಬಲಿಯ ಚರಣಗಳಿಗೆ ಶಿರಬಾಗಿ ನಮಸ್ಕರಿಸುತ್ತೇನೆ. ಈ ಪವಿತ್ರ ವಾತಾವರಣದಲ್ಲಿ, ದೇಶದ ಎಲ್ಲಾ ಜನತೆಗೆ ನನ್ನ ಹೃದಯಪೂರ್ವಕ ವಿಜಯದಶಮಿ ಶುಭಾಶಯಗಳನ್ನು ಕೋರುತ್ತೇನೆ. ಭಗವಾನ್ ಶ್ರೀರಾಮನ ಆದರ್ಶಗಳು ಮತ್ತು ರಾಮ್‌ಲೀಲಾ ಪರಂಪರೆಯು ಭಾರತದ ಮೂಲೆ ಮೂಲೆಯಲ್ಲೂ, ಗ್ರಾಮ ಹಾಗೂ ನಗರಗಳಲ್ಲಿ ಜೀವಂತವಾಗಿದ್ದು ದೇಶವನ್ನು ಒಗ್ಗೂಡಿಸುತ್ತಿದೆ. ಇದು ಕೇವಲ ಹಬ್ಬವಲ್ಲ, ಭಾರತದ ಪ್ರಾಣಶಕ್ತಿಯಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಯೊಬ್ಬರ ಜೀವನದಲ್ಲೂ ಸುಖ, ಶಾಂತಿ ನೆಲೆಸಲಿ, ವಿಜಯದಶಮಿಗೆ ಪ್ರಧಾನಿ ಮೋದಿ ಶುಭಾಶಯ
ವಿಜಯದಶಮಿ ಕೇವಲ ಆಚರಣೆಯಲ್ಲ, ಅದು ದೌರ್ಜನ್ಯ, ಅಧರ್ಮ ಮತ್ತು ಭಯೋತ್ಪಾದನೆಯ ಅಂತ್ಯವನ್ನು ಸಾರುವ ಸಂಕೇತವಾಗಿದೆ ಎಂದು ಅವರು ವರ್ಣಿಸಿದರು. ಸತ್ಯ ಮತ್ತು ಧರ್ಮದ ಪರವಾಗಿ ನಿಂತಾಗ ಎಷ್ಟೇ ಪ್ರಬಲ ಶತ್ರುವನ್ನಾದರೂ ಜಯಿಸಬಹುದು ಎಂಬುದನ್ನು ಭಗವಾನ್ ಶ್ರೀರಾಮನ ಜೀವನ ನಮಗೆ ಕಲಿಸುತ್ತದೆ ಎಂದರು.
ಆತ್ಮನಿರ್ಭರ ಭಾರತಕ್ಕೆ ಪ್ರಧಾನಿ ಕರೆ:
ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯನ್ನಾಗಿ ಮಾಡುವುದರ ಮಹತ್ವವನ್ನು ತಿಳಿಸಿದ ಮೋದಿ, “ದೇಶವು ತನ್ನದೇ ಆದ ಸಂಪನ್ಮೂಲಗಳ ಮೂಲಕ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಾಗ ಮಾತ್ರ ಮುನ್ನಡೆಯಲು ಸಾಧ್ಯ. ಶ್ರೀರಾಮನ ಜೀವನ ಮೌಲ್ಯಗಳು ತಮ್ಮದೇ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ನಮಗೆ ಕಲಿಸಿವೆ” ಎಂದಿದ್ದಾರೆ.
ಇದನ್ನೂ ಓದಿ: ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದೃಢಸಂಕಲ್ಪದಿಂದ ಜಯ:
ಭಗವಾನ್ ಶ್ರೀರಾಮನು ಲಂಕಾ ತಲುಪಲು ನಡೆಸಿದ ಪಯಣವನ್ನು ಸ್ಮರಿಸಿದ ಪ್ರಧಾನಿ ಮೋದಿ, ದೃಢಸಂಕಲ್ಪ, ಸಾಮೂಹಿಕ ಶಕ್ತಿ ಮತ್ತು ಸಾರ್ವಜನಿಕರ ಸಹಭಾಗಿತ್ವವಿದ್ದರೆ ಎಂತಹ ದೊಡ್ಡ ಸವಾಲನ್ನಾದರೂ ಮೆಟ್ಟಿ ನಿಲ್ಲಬಹುದು ಎಂದು ಸ್ಪೂರ್ತಿದಾಯಕ ಸಂದೇಶ ನೀಡಿದರು.
ಶತ್ರುಗಳ ವಿರುದ್ಧ ಒಗ್ಗಟ್ಟಿನ ಹೋರಾಟ:
ರಾಷ್ಟ್ರಹಿತದ ವಿಷಯಕ್ಕೆ ಬಂದಾಗ ದೇಶದ ಎಲ್ಲಾ ರಾಜಕೀಯ ಪಕ್ಷಗಳು, ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಪ್ರಜೆಗಳು ಒಂದಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು. “ದೇಶವನ್ನು ವಿಭಜಿಸಲು ಹಾಗೂ ಭಾರತದ ಗೌರವಕ್ಕೆ ಧಕ್ಕೆ ತರಲು ಯತ್ನಿಸುವವರು ದೇಶದ ನಿಜವಾದ ಶತ್ರುಗಳು. ಅಂತಹ ಶತ್ರುಗಳನ್ನು ನಾವು ಗುರುತಿಸಬೇಕು ಮತ್ತು ಒಗ್ಗಟ್ಟಿನಿಂದ ಸೋಲಿಸಬೇಕು” ಎಂದು ಅವರು ಕರೆ ನೀಡಿದರು.
“ಶತಮಾನಗಳಿಂದ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಲೂಟಿ ಮಾಡಿ ವಿದೇಶಗಳಿಗೆ ಕೊಂಡೊಯ್ಯಲಾಗಿತ್ತು, ಆದರೆ ಇಂದು ನಾವು ಆ ಅಪಾರ ಸಂಪತ್ತನ್ನು ಮರಳಿ ತರುತ್ತಿದ್ದೇವೆ. ಕಳೆದ 12 ವರ್ಷಗಳಲ್ಲಿ 600ಕ್ಕೂ ಹೆಚ್ಚು ಪ್ರಾಚೀನ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ತನ್ನ ಸಾಂಸ್ಕೃತಿಕ ಕೇಂದ್ರಗಳಿಗೆ ಹೊಸ ಗುರುತನ್ನು ನೀಡುತ್ತಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 pm, Tue, 20 October 26