ಬರುವ ವರ್ಷ ಉತ್ತರಪ್ರದೇಶ (Uttar Pradesh)ದ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ (BSP) ಭರ್ಜರಿ ತಯಾರಿಯನ್ನೇ ನಡೆಸುತ್ತಿದೆ. ಈ ಬಾರಿ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಮುಂದಾಗಿರುವ ಪಕ್ಷ, ಅಯೋಧ್ಯೆ(Ayodhya)ಯಿಂದಲೇ ಚುನಾವಣಾ ಪ್ರಚಾರವನ್ನೂ ನಡೆಸಲು ನಿರ್ಧರಿಸಿದೆ. ಈ ಹಿಂದೆ ಮಾತನಾಡಿದ ಮಾಯಾವತಿ, ಮುಂದಿನ ವರ್ಷ ಚುನಾವಣೆಯಲ್ಲಿ ಬ್ರಾಹ್ಮಣರು ಯಾರೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ನಂಬಿಕೆ ನಮಗೆ ಇದೆ ಎಂದೂ ಹೇಳಿದ್ದಾರೆ. ಈಗ ಇನ್ನೊಂದು ಮಹತ್ವದ ಭರವಸೆಯವನ್ನು ಮಾಯಾವತಿ(Mayawati) ನೀಡಿದ್ದಾರೆ. ಇದೀಗ ಬಿಎಸ್ಪಿ ಇನ್ನೊಂದು ಮಹತ್ವದ ಭರವಸೆ ನೀಡಿದೆ. ಒಂದೊಮ್ಮೆ ನಮ್ಮ ಪಕ್ಷ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ರಾಮಮಂದಿರ (Ram Temple) ನಿರ್ಮಾಣ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು ಎಂದೂ ಹೇಳಿದೆ.
ಬಿಎಸ್ಪಿ ಹಿಂದುಳಿದ, ದಲಿತರ ಪಕ್ಷ ಎಂದೇ ಗುರುತಿಸಿಕೊಂಡಿದೆ. ಹಿಂದೊಮ್ಮೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಲೂ ಆ ಪಕ್ಷಕ್ಕೆ ಹಿಂದುಳಿದವರ ಮತವೇ ಜಾಸ್ತಿ ಬಿದ್ದಿತ್ತು. ಆದರೆ ಈಗ ಏಕಾಏಕಿ ಬ್ರಾಹ್ಮಣ ಸಮುದಾಯದ ಓಲೈಕೆ ಮಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಬ್ರಾಹ್ಮಣರಿಗೆ ನೀಡಿರುವ ಭರವಸೆಯನ್ನು ಉಳಿಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆ ಸಮುದಾಯದ ಹಿತ ಕಾಯುತ್ತೇವೆ ಎಂಬಿತ್ಯಾದಿ ಭರವಸೆಗಳನ್ನೂ ಬಿಎಸ್ಪಿ ನೀಡುತ್ತಿದೆ. ಬ್ರಾಹ್ಮಣರನ್ನು ಹೆಚ್ಚೆಚ್ಚು ತಲುಪುವ ದೃಷ್ಟಿಯಿಂದ, ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ (ಇವರು ಬ್ರಾಹ್ಮಣ ಸಮುದಾಯದವರು) ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಹೊಸ ಕಾರ್ಯಕ್ರಮಗಳನ್ನೂ ಶುರು ಮಾಡಿದ್ದಾರೆ.
2020ರ ಆಗಸ್ಟ್ 5ರಂದು ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಭೂಮಿಪೂಜೆ ನೆರವೇರಿಸಿದ್ದಾರೆ. ಒಂದು ವರ್ಷವಾಗುತ್ತ ಬಂದರೂ ಇನ್ನೂ ಮಂದಿರಕ್ಕೆ ಅಡಿಪಾಯ ಹಾಕುವ ಕೆಲಸವೇ ಪೂರ್ತಿಯಾಗಿ ಮುಗಿದಿಲ್ಲ. ದೇಗುಲ ನಿರ್ಮಾಣ ಯಾವಾಗ ಮುಗಿಯುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನೂ ಎಷ್ಟು ವರ್ಷ ಬೇಕು ಎಂದು, ಸತೀಶ್ ಚಂದ್ರ ಮಿಶ್ರಾ, ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮುದಾಯವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಗೆಲುವಿನ ಫಾರ್ಮುಲಾ ರಚಿಸುತ್ತಿರುವ ಬಿಎಸ್ಪಿ 2007ರಂತೆ ಮತ್ತೆ ಅಧಿಕಾರ ಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮನವೊಲಿಸುವ ಪ್ರಯತ್ನಗಳೂ ನಡೆಯುತ್ತಿವೆ. ಬ್ರಾಹ್ಮಣರೆಲ್ಲ ಒಗ್ಗಟ್ಟಾಗಿ ಬಿಎಸ್ಪಿಗೆ ಮತಹಾಕಬೇಕು. ದಲಿತರು ಮತ್ತು ಬ್ರಾಹ್ಮಣರ ಮಧ್ಯೆ ಸಹೋದರತ್ವ ಸಂಬಂಧವಿದೆ. ಇವೆರಡೂ ಸೇರಿದರೆ ಖಂಡಿತ ಪಕ್ಷಕ್ಕೆ ಬಲ ಬಂದೇಬರುತ್ತದೆ ಎಂದೂ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: Wild Boar menace: ಕಾಡು ಹಂದಿ ಬೇಟೆಗೆ ಹೈಕೋರ್ಟ್ ಅನುಮತಿ; ಆದರೆ ವನ್ಯಜೀವಿ ಪ್ರಿಯರು ಎತ್ತಿದ್ದಾರೆ ಆಕ್ಷೇಪ!
Published On - 3:50 pm, Sat, 24 July 21