Rain Updates: ಕರ್ನಾಟಕ (Karnataka Rains), ಕೇರಳ (Kerala Rains) ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈಗೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾಗುತ್ತಿದೆ. ಭಾರತದ ಹವಾಮಾನ ಇಲಾಖೆ (IMD) ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಮೇ 22ರವರೆಗೆ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ. ಮುಂದಿನ 7 ದಿನಗಳ ಕಾಲ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ, ಲಕ್ಷದ್ವೀಪ ಮತ್ತು ದಕ್ಷಿಣ ಕರ್ನಾಟಕದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಆಂಧ್ರಪ್ರದೇಶ, ಯಾನಂ, ತೆಲಂಗಾಣ ಮತ್ತು ರಾಯಲಸೀಮಾದಲ್ಲಿ ಕೂಡ ಈ ಅವಧಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ಇಂದಿನಿಂದ ಮೇ 20ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮೇ 20ರಂದು ತಮಿಳುನಾಡಿನಲ್ಲಿ ಮತ್ತು ಕೇರಳದಲ್ಲಿ ಭಾರಿ ಮಳೆಯಾಗಬಹುದು. ಇಂದು ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಒಡಿಶಾ ಮತ್ತು ಗುಜರಾತ್‌ನಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಲಘು ಮಳೆಯ ಮುನ್ಸೂಚನೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇನ್ನು 7 ದಿನ ಚದುರಿದಂತೆ ಸಾಕಷ್ಟು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮತ್ತೇ ಧಾರಾಕಾರ ಮಳೆ, ವಾರದಲ್ಲಿ ನಾಲ್ಕನೇ ಬಾರಿ ಸುರಿದ ಮಳೆರಾಯ!
ಮುಂದಿನ ವಾರದಲ್ಲಿ ಒಡಿಶಾದಲ್ಲಿ ಮತ್ತು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮೇ 19ರಿಂದ ಮೇ 22ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಮುಂದಿನ 7 ದಿನಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಬಹುದು.
ಇದನ್ನೂ ಓದಿ: Kerala Rains: ಕೇರಳದಲ್ಲಿ ಮಳೆಯ ಆರ್ಭಟ; 9 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ
ಉಷ್ಣ ಅಲೆಯ ಭೀತಿ:
ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದರೆ, ದೇಶದ ಇತರ ಭಾಗಗಳು ಸುಡುವ ಶಾಖವನ್ನು ಅನುಭವಿಸುತ್ತವೆ. ಮೇ 17ರಿಂದ 20 ರವರೆಗೆ ಪಶ್ಚಿಮ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ತೀವ್ರವಾದ ಉಷ್ಣ ಅಲೆಗಳ ಬಗ್ಗೆ IMD ಎಚ್ಚರಿಸಿದೆ. ಪೂರ್ವ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ಮೇ 20ರವರೆಗೆ ಶಾಖದ ಅಲೆ ಇರುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ