Tamil Nadu Rains: ತಮಿಳುನಾಡಿನಲ್ಲಿ ಭಾರೀ ಮಳೆ; ಸಿಡಿಲು ಬಡಿದು ಇಬ್ಬರು ಸಾವು

Rain Today: ತಮಿಳುನಾಡಿನ ಕನ್ಯಾಕುಮಾರಿ, ಊಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇಂದು ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದು, ಈ ಮೂಲಕ ಮಳೆಯಿಂದಾಗಿ ಕಳೆದೊಂದು ತಿಂಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

Tamil Nadu Rains: ತಮಿಳುನಾಡಿನಲ್ಲಿ ಭಾರೀ ಮಳೆ; ಸಿಡಿಲು ಬಡಿದು ಇಬ್ಬರು ಸಾವು
ಸಿಡಿಲು
Follow us
ಸುಷ್ಮಾ ಚಕ್ರೆ
|

Updated on: May 20, 2024 | 10:02 PM

ಚೆನ್ನೈ: ಭಾರೀ ಮಳೆಯ ಕಾರಣದಿಂದ ತಮಿಳುನಾಡಿನ (Tamil Nadu Rain Updates) ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳುನಾಡು ಹಾಗೂ ಕೇರಳದಲ್ಲಿ (Kerala Rains) ಇಂದು ಮಳೆಯ ಅಬ್ಬರ ಮುಂದುವರೆದಿದೆ. ಮಳೆಯಿಂದಾಗಿ ಕೆಲವೆಡೆ ರೆಡ್ ಅಲರ್ಟ್ (Red Alert) ಕೂಡ ಘೋಷಿಸಲಾಗಿತ್ತು. ಇದರ ನಡುವೆ ತಮಿಳುನಾಡಿನ ತೂತುಕುಡಿ ಮತ್ತು ಸೇಲಂ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಮಾನ್ಸೂನ್ ಋತುವಿನಲ್ಲಿ ತಮಿಳುನಾಡು ರಾಜ್ಯದಲ್ಲಿ ಈ ಮೂಲಕ ಮಳೆ ಸಂಬಂಧಿತ ಸಾವಿನ ಸಂಖ್ಯೆ 4ಕ್ಕೆ ತಲುಪಿದೆ.

ಈ ಹಿಂದೆ ತೆಂಕಶಿ ಜಿಲ್ಲೆಯ ಕುಟ್ರಾಲಂ ಜಲಪಾತದಲ್ಲಿ 17 ವರ್ಷದ ಬಾಲಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ. ಮಧುರೈನಲ್ಲಿ ಛಾವಣಿ ಕುಸಿದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದ. ಇದುವರೆಗೆ 7 ಗುಡಿಸಲುಗಳು ಹಾಗೂ 14 ಜಾನುವಾರುಗಳಿಗೆ ಹಾನಿಯಾಗಿದೆ.

ದಕ್ಷಿಣ, ಪಶ್ಚಿಮ ಮತ್ತು ಡೆಲ್ಟಾ ಪ್ರದೇಶಗಳಲ್ಲಿನ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ರಾಮನಾಥಪುರಂ ಜಿಲ್ಲೆಯ ಕಮುದಿಯಲ್ಲಿ 12.44 ಸೆಂ.ಮೀ ಮಳೆಯಾಗಿದ್ದರೆ, ಮಧುರೈನ ತಲ್ಲಕುಲಂನಲ್ಲಿ 10.8 ಸೆಂ.ಮೀ, ತಿರುಚ್ಚಿಯ ಪುಲ್ಲಂಬಾಡಿಯಲ್ಲಿ 9.8 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ: Rain Updates: ತಮಿಳುನಾಡು, ಕೇರಳದಲ್ಲಿ ವಿಪರೀತ ಮಳೆ; ಹಲವೆಡೆ 2 ದಿನ ರೆಡ್ ಅಲರ್ಟ್ ಘೋಷಣೆ

ನಾಳೆ (ಮಂಗಳವಾರ) ಕನ್ಯಾಕುಮಾರಿ, ಥೇಣಿ, ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ವಿರುದುನಗರ, ತಿರುಪ್ಪೂರ್, ಕೊಯಮತ್ತೂರು, ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 3 ದಿನಗಳ ಕಾಲ ತಮಿಳುನಾಡಿನ ದಕ್ಷಿಣ, ಪಶ್ಚಿಮ ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ತಮಿಳುನಾಡು ಸರ್ಕಾರವು ಕನ್ಯಾಕುಮಾರಿ, ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (SDRF) ನಿಯೋಜಿಸಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಉತ್ತಮ‌ ಮಳೆ: ಮತ್ತೆ ಜೀವ ಪಡೆದುಕೊಂಡ ಕಾವೇರಿ ನದಿ, ನೀರಿನ ಬವಣೆ ದೂರ

ಗಂಟೆಗೆ 40 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಇನ್ನೂ 5 ದಿನಗಳ ಕಾಲ ಸಮುದ್ರದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. ಮೇ 22ರಂದು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗಲಿದ್ದು, 24ರಂದು ಅದು ವಾಯುಭಾರ ಕುಸಿತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 23ರೊಳಗೆ ಮರಳಿ ಬರುವಂತೆ ಆಳಸಮುದ್ರದ ಮೀನುಗಾರರಿಗೆ ಹವಾಮಾನ ಇಲಾಖೆ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ