Weather: ಕರ್ನಾಟಕ, ಒಡಿಶಾ, ಗುಜರಾತ್, ಛತ್ತೀಸಗಡದಲ್ಲಿ ಭಾರೀ ಮಳೆ ನಿರೀಕ್ಷಿತ
ಮಹಾರಾಷ್ಟ್ರದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಗೋದಾವರಿ ನದಿಗಳು ಸೊಕ್ಕಿ ಹರಿಯುತ್ತಿವೆ.
ಬೆಂಗಳೂರು: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾನುವಾರ ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ (Weather Department) ಹೇಳಿದೆ. ಛತ್ತೀಸಗಡದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಡಿಶಾ, ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ತೀವ್ರ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಭದ್ರೆ ಉಕ್ಕಿ ಹರಿಯುತ್ತಿದೆ. ಹೊಸಪೇಟೆಯ ತುಂಗಭದ್ರಾ ಜಲಾಶಯವು ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ. ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಗೋದಾವರಿ ನದಿಗಳು ಸೊಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಲವು ಜಲಾಶಯಗಳು ಭರ್ತಿಯಾಗಿದ್ದು, ನದಿಗೆ ನೀರು ಹರಿಬಿಡಲಾಗುತ್ತಿದೆ.
ಗೋದಾವರಿ ನದಿಯು ಪ್ರವಾಹದ ಅಪಾಯಮಟ್ಟದ 3ನೇ ಹಂತವನ್ನು ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಹಲವೆಡೆ ದಾಟಿದೆ. ತೆಲಂಗಾಣದಲ್ಲಿ ಮಳೆಯಿಂದಾಗಿ ಈವರೆಗೆ 15ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು, ಸಾಕಷ್ಟು ಕೃಷಿಭೂಮಿ ಕೊಚ್ಚಿಹೋಗಿದೆ. ಹಲವು ಗ್ರಾಮ ಮತ್ತು ಪಟ್ಟಣಗಳಿಗೆ ನದಿಯ ನೀರು ನುಗ್ಗಿದೆ. ಗೋದಾವರಿ ಪ್ರವಾಹ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರ ಭದ್ರಾಚಲಂ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಈ ಸೇತುವೆಯು ಆಂಧ್ರಪ್ರದೇಶ, ಛತ್ತೀಸಗಡ ಮತ್ತು ಒಡಿಶಾಗೆ ಸಂಪರ್ಕ ಕಲ್ಪಿಸುತ್ತದೆ. ಭದ್ರಾಚಲಂನಲ್ಲಿ ಜನರು ಮನೆಗಳಿಂದ ಹೊರಗೆ ಬರದಂತೆ ನಿರ್ಬಂಧ ಹೇರಲಾಗಿದೆ. ತೆಲಂಗಾಣದ ವಿವಿಧೆಡೆ ಈವರೆಗೆ ಸುಮಾರು 25 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪೋಲವರಂ ನೀರಾವರಿ ಯೋಜನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಬಿಡುತ್ತಿರುವುದರಿಂದ ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲಿಯೂ ಪ್ರವಾಹದ ಭೀತಿ ತಲೆದೋರಿದೆ. 1986ರ ನಂತರ ಇದೇ ಮೊದಲ ಬಾರಿಗೆ ಗೋದಾವರಿಯಲ್ಲಿ ಈ ಮಟ್ಟದ ಪ್ರವಾಹ ಕಾಣಿಸಿಕೊಂಡಿದ್ದು, 554 ಹಳ್ಳಿಗಳು ಅಪಾಯದಲ್ಲಿವೆ ಎಂದು ಆಂಧ್ರ ಪ್ರದೇಶದ ಕಂದಾಯ ಇಲಾಖೆ ಹೇಳಿದೆ.
Rainfall Forecast: Widespread moderate to heavy rains with isolated very heavy rains likely over Coastal and scattered to widespread very light to moderate rains with isolated heavy rains likely over Malnad & NIK & isolated to scattered very light to light rains likely over SIK pic.twitter.com/405hb3e8la
— KSNDMC (@KarnatakaSNDMC) July 16, 2022
ಚಿಕ್ಕೋಡಿ: ರೌದ್ರರೂಪ ತಾಳಿದ ಕೃಷ್ಣೆ
ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ. ಕೃಷ್ಣಾ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂದಗಂಗಾ ನದಿ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಕೃಷ್ಣಾ ನದಿಯಲ್ಲಿ 1,27,000 ಕ್ಯೂಸೆಕ್ಗಿಂತಲೂ ಹೆಚ್ಚು ನೀರು ಹರಿಯುತ್ತಿದೆ. ಈ ನಡುವೆ ಹಲ್ಯಾಳ-ದರೂರ ಸೇತುವೆ ಸಮೀಪ ರೌದ್ರರೂಪ ತಾಳಿರುವ ಕೃಷ್ಣಾ ನದಿ ಪಾತ್ರಕ್ಕೀಳಿದು ಜನರು ಪೂಜೆ ಸಲ್ಲಿಸುತ್ತಿದ್ದಾರೆ. ನದಿ ಪಾತ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಸಿದ್ದರೂ ಜನರು ತಮ್ಮ ವರ್ತನೆ ಬದಲಿಸಿಕೊಂಡಿಲ್ಲ. ಹಲವೆಡೆ ನದಿ ಪಾತ್ರದಲ್ಲಿ ಮೀನು ಹಿಡಿಯುವ ದುಸ್ಸಾಹಸವೂ ಮುಂದುವರಿದಿದೆ.
Published On - 8:40 am, Sun, 17 July 22