ಪ್ರಶಾಂತ್ ಕಿಶೋರ್ಗೆ ಸತ್ಯ ಗೊತ್ತಾಗಿದೆ, ಅದಕ್ಕೇ ಮಮತಾ ಬ್ಯಾನರ್ಜಿಯಿಂದ ದೂರ ಹೋಗಿದ್ದಾರೆ: ಬಿಜೆಪಿ ವ್ಯಂಗ್ಯ
west bengal assembly elections 2021: ಫಲಿತಾಂಶ ಘೋಷಣೆಯಾಗುವ ಮೊದಲೇ ಪ್ರಶಾಂತ್ ಕಿಶೋರ್ ದೀದಿಯಿಂದ ದೂರ ಸರಿದಿದ್ದಾರೆ. ಈ ಬೆಳವಣಿಗೆಯೇ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪ್ರಧಾನ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ನೇಮಕಗೊಂಡಿರುವ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿರುವ ಬಿಜೆಪಿ, ‘ಅವರು ಕಾಂಗ್ರೆಸ್ ನಾಯಕನ ಪರವಾಗಿ ಕೆಲಸ ಮಾಡಲು ತೃಣಮೂಲ ಕಾಂಗ್ರೆಸ್ (Trinamool Congress – TMC) ಅಧ್ಯಕ್ಷೆ ಮಮತಾ ಬ್ಯಾನರ್ಜಿಯಿಂದ ದೂರ ಸರಿದಿದ್ದಾರೆ ಎಂದು ಹೇಳಿದೆ. ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿನ್ನೆಯಷ್ಟೇ (ಮಾರ್ಚ್ 1) ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
‘ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗುವ ಮೊದಲೇ ಪ್ರಶಾಂತ್ ಕಿಶೋರ್ ದೀದಿಯಿಂದ ದೂರ ಸರಿದಿದ್ದಾರೆ. ಮಮತಾ ದೀದಿಯ ಅತಿದೊಡ್ಡ ಸಲಹೆಗಾರರು ಮತ್ತೊಬ್ಬರ ಬಳಿ ಕೆಲಸಕ್ಕೆ ತೆರಳಿದ್ದಾರೆ. ಈ ಬೆಳವಣಿಗೆಯೇ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದರು.
ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ಮುಖ್ಯಕಾರ್ಯತಂತ್ರ ನಿಪುಣರಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಿದ್ದರು. ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳ ಚುನಾವಣೆ ನಡೆಯಲಿದೆ. ಕಳೆದ ಕೆಲ ವರ್ಷಗಳಿಂದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಹಲವು ಬಿಜೆಪಿಯೇತರ ಪಕ್ಷಗಳೊಂದಿಗೆ ಕೆಲಸ ಮಾಡಿದ್ದರು.
290 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈ ಬಾರಿ ಬಿಜೆಪಿಯು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ಈ ಹಿಂದೆ ಹೇಳಿದ್ದರು. ಈ ವಿಷಯವನ್ನು ಈಗ ಎಲ್ಲರೂ ಮನಗಾಣುತ್ತಿದ್ದಾರೆ. ರಾಜಕೀಯ ಸಲಹೆಗಾರರು ಎನಿಸಿಕೊಂಡವರಿಗೂ ಈ ವಿಷಯ ಅರಿವಾಗಿದೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಮುಖ್ಯ ಸಲಹೆಗಾರರಾಗಿ ನೇಮಿಸಿಕೊಂಡಿರುವ ವಿಷಯ ಬಹಿರಂಗಪಡಿಸಿದ್ದರು. ಪಂಜಾಬ್ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿಯೇ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಪ್ರಶಾಂತ್ ಕಿಶೋರ್ಗೆ ಸಂಪುಟ ದರ್ಜೆ ಸ್ಥಾನಮಾನ ಕಿಶೋರ್ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವನ ಸ್ಥಾನಮಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅವರ ಕಚೇರಿಯಿಂದ ಹೊರಬಿದ್ದಿರುವ ಟ್ವೀಟ್ ಒಂದರ ಪ್ರಕಾರ ಕಿಶೋರ್ ತಾವು ಸಲ್ಲಿಸುವ ಸೇವೆಗೆ ರೂ. 1 ಗೌರವಧನ ಪಡೆಯಲಿದ್ದಾರೆ. ಆದರೆ ಅವರಿಗೆ ಸರ್ಕಾರಿ ಬಂಗ್ಲೆ ಮತ್ತು ಆರೇಳು ಜನ ಸಿಬ್ಬಂದಿಯನ್ನು ಒದಗಿಸಲಾಗುವುದು. ಹಾಗೆಯೇ, ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವನಿಗೆ ಸಿಗುವ ಸಾರಿಗೆ ಭತ್ಯೆ, ಟೆಲಿಫೋನ್ ಮತ್ತು ವೈದ್ಯಕೀಯ ಸೌಲಭ್ಯಗಳು ಸಹ ದೊರೆಯಲಿವೆ.
ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿಯ ಸಂಸ್ಥಾಪಕರಾಗಿರುವ ಕಿಶೋರ್ ಅವರು 2017ರಲ್ಲಿ ಚುನಾವಣೆ ನಡೆದಾಗ ಅಮರಿಂದರ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ವ್ಯೂಹಗಳನ್ನು ರಚಿಸಿ ಗೆಲುವಿಗೆ ಕಾರಣರಾಗಿದ್ದರು. 117 ಸ್ಥಾನಗಳ ವಿಧಾನಸಭೆಗೆ 77 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಮರಳಿ ಪಡೆದಿತ್ತು.
ಆ ಗೆಲುವಿನ ನಂತರ ಅಮರಿಂದರ್ ಅವರು ಕಿಶೋರ್ ಮತ್ತವರ ತಂಡ ನೀಡಿದ ನೆರವನ್ನು ಕೊಂಡಾಡಿದ್ದರು. ಕಿಶೋರ್ ಹಾಗೂ ಅವರ ಟೀಮಿನ ಸಹಕಾರ ಕಾಂಗ್ರೆಸ್ ಪಕ್ಷವನ್ನು ಪಂಜಾಬಿನಲ್ಲಿ ಪುನಃ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿತು ಎಂದು ಅವರು ಉದ್ಗರಿಸಿದ್ದರು. ಕಿಶೋರ್ ಅವರು ಪ್ರಸ್ತುತವಾಗಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಕಿಶೋರ್ರನ್ನು ಪ್ರಧಾನ ಸಲಹೆಗಾರನಾಗಿ ನೇಮಿಸಿಕೊಂಡ ಅಮರಿಂದರ್ ಸಿಂಗ್
Published On - 5:16 pm, Tue, 2 March 21