ಕೊಕೇನ್ ಕೈವಶ ಆರೋಪ: ಬಂಗಾಳದ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಬಂಧನ

Pamela Goswami Drug Case: ಶುಕ್ರವಾರ ಸಂಜೆ ನ್ಯೂ ಏರ್​ಪೋ​ರ್ಟ್ ಪ್ರದೇಶದಲ್ಲಿ ಪಮೇಲಾ ತನ್ನ ಸ್ನೇಹಿತ ಹಾಗೂ ಸಹೋದ್ಯೋಗಿ ಪ್ರಬೀರ್ ಕುಮಾರ್ ಡೇ ಜತೆ ಕೆಫೆಗೆ ಹೋಗುತ್ತಿದ್ದಾಗ ಪೊಲೀಸರು ಕಾರು ತಪಾಸಣೆ ಮಾಡಿ 100 ಗ್ರಾಂ ಕೊಕೇನ್ ಪತ್ತೆ ಹಚ್ಚಿದ್ದಾರೆ.

ಕೊಕೇನ್ ಕೈವಶ ಆರೋಪ: ಬಂಗಾಳದ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಬಂಧನ
ಪಮೇಲಾ ಗೋಸ್ವಾಮಿ (ಕೃಪೆ: ಟ್ವಿಟರ್)


ಕೋಲ್ಕತ್ತಾ: 100 ಗ್ರಾಂ ಕೊಕೇನ್ ಕೈವಶವಿರಿಸಿಕೊಂಡ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಶುಕ್ರವಾರ ಬಂಧಿಸಲಾಗಿದೆ. ಪಮೇಲಾ ಅವರ ಕಾರಿನ ಸೀಟಿನಡಿಯಲ್ಲಿ ಮತ್ತು ಪರ್ಸ್​ನಲ್ಲಿ ಲಕ್ಷಗಟ್ಟಲೆ ರೂಪಾಯಿ ಬೆಲೆ ಬಾಳುವ ಕೊಕೇನ್ ಪತ್ತೆಯಾಗಿತ್ತು. ಬಂಗಾಳದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಪಮೇಲಾ ಗೋಸ್ವಾಮಿ.

ಶುಕ್ರವಾರ ಸಂಜೆ ನ್ಯೂ ಏರ್​ಪೋ​ರ್ಟ್ ಪ್ರದೇಶದಲ್ಲಿ ಪಮೇಲಾ ತನ್ನ ಸ್ನೇಹಿತ ಹಾಗೂ ಸಹೋದ್ಯೋಗಿ ಪ್ರಬೀರ್ ಕುಮಾರ್ ಡೇ ಜತೆ ಎನ್​ಆರ್ ಅವೆನ್ಯೂ ನಲ್ಲಿರುವ ಕೆಫೆಗೆ ಹೋಗುತ್ತಿದ್ದಾಗ ಪೊಲೀಸರು ಕಾರು ತಪಾಸಣೆ ಮಾಡಿದ್ದಾರೆ. ಈ ವೇಳೆ ಗೋಸ್ವಾಮಿ ಅವರ ಪರ್ಸ್ ಹಾಗೂ ಕಾರಿನ ಸೀಟಿನಡಿಯಿಂದ ಪೊಲೀಸರು 100 ಗ್ರಾಂ ಕೊಕೇನ್ ಪತ್ತೆಯಾಗಿದೆ. ತಕ್ಷಣವೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಇದು ಸಂಚು ಎಂದು ಗೋಸ್ವಾಮಿ ಆರೋಪಿಸಿದ್ದಾರೆ. ಕಾರಿನಲ್ಲಿದ್ದ ಪ್ರಬೀರ್ ಕುಮಾರ್ ಡೇ, ಪಮೇಲಾ ಗೋಸ್ವಾಮಿ ಅವರ ಸೆಕ್ಯುರಿಟಿ ಗಾರ್ಡ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಸಮಿಕ್ ಭಟ್ಟಾಚಾರ್ಯ, ಕಾರಿನೊಳಗೆ ಕೊಕೇನ್ ಇಟ್ಟವರು ಯಾರು ಎಂಬುದರ ಬಗ್ಗೆ ಕಾನೂನು ತನಿಖೆ ನಡೆಯಲಿದೆ. ಇನ್ನೂ ನೀತಿ ಸಂಹಿತೆ ಜಾರಿಯಾಗಿಲ್ಲ. ಪೊಲೀಸರು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವಾಗ ಏನು ಬೇಕಾದರೂ ನಡೆಯುತ್ತದೆ ಎಂದಿದ್ದಾರೆ.

ಬಂಗಾಳದಲ್ಲಿ ಈ ರೀತಿಯ ಪ್ರಕರಣ ನಡೆದಿರುವುದು ನಾಚಿಕೆಗೇಡು. ಬಂಗಾಳದಲ್ಲಿ ಬಿಜೆಪಿಯ ನಿಜ ಸ್ವರೂಪವನ್ನು ಇದು ತೋರಿಸಿದೆ. ಈ ಹಿಂದೆ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಕೆಲವು ಬಿಜೆಪಿ ನಾಯಕರ ಹೆಸರು ಕೇಳಿ ಬಂದಿತ್ತು ಎಂದು ಟಿಎಂಸಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಪಮೇಲಾ ಗೋಸ್ವಾಮಿ ಮತ್ತು ಪ್ರಬೀರ್ ಪದೇ ಪದೇ ಅದೇ ಕೆಫೆಗೆ ಹೋಗುತ್ತಿದ್ದರು. ಪಾರ್ಕ್ ಮಾಡಿದ ಕಾರಿನಲ್ಲಿ ಕುಳಿತ ಇವರು ಮೊಟಾರ್ ಸೈಕಲ್​ನಲ್ಲಿ ಬಂದ ವ್ಯಕ್ತಿಯೊಬ್ಬರಲ್ಲಿ ಏನೋ ವ್ಯವಹಾರ ನಡೆಸುತ್ತಿದ್ದರು. ಇದು ಡ್ರಗ್ ಜಾಲ ಆಗಿರಬಹುದು ಎಂಬ ಸಂದೇಹದಿಂದ ಶುಕ್ರವಾರ ಆಕೆಯ ಕಾರು ತಪಾಸಣೆ ಮಾಡಿ ಕೊಕೇನ್ ಪತ್ತೆ ಹಚ್ಚಿದ್ದೇವೆ ಎಂದಿದ್ದಾರೆ.

ಪಮೇಲಾ ಗೋಸ್ವಾಮಿ ಈ ಹಿಂದೆ ಗಗನಸಖಿ ಆಗಿ ಕೆಲಸ ಮಾಡಿದ್ದರು ಎನ್ನಲಾಗುತ್ತಿದೆ. ಮಾಡೆಲ್, ಕಿರುತೆರೆ ನಟಿ ಆಗಿದ್ದ ಅವರು 2019ರಲ್ಲಿ ಬಿಜೆಪಿ ಸೇರಿದ್ದರು. ಆಮೇಲೆ ಅವರನ್ನು ಹೂಗ್ಲಿ ಜಿಲ್ಲೆಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಯುವ ಮೋರ್ಚಾ ವೀಕ್ಷಕರಾಗಿ ನೇಮಕ ಮಾಡಲಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ
ಪಮೇಲಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯ.ರಾಗಿರುತ್ತಾರೆ. 24 ಗಂಟೆಗಳ ಹಿಂದೆ ತಮ್ಮ ಫೋಟೊ ಶೇರ್ ಮಾಡಿದ್ದ ಪಮೇಲಾ, ನೀವು ಬಲಶಾಲಿಯಾಗಿದ್ದಾಗ ಬಲಹೀನರಂತೆ ಕಾಣಿಸಿ, ಬಲಹೀನರಾದಾಗ ಶಕ್ತಿಶಾಲಿಯಾಗಿ ಕಾಣಿಸಿ- ಸನ್ ತ್ಸು, ದಿ ಆರ್ಟ್ ಆಫ್ ವಾರ್ ಎಂದು ಬರೆದಿದ್ದರು.

ಬಿಜೆಪಿ ಮೆರವಣಿಗೆಯಲ್ಲಿ ಭಾಗಿಯಾದಾಗಲೆಲ್ಲಾ ಇವರು ಅದರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ರೈತರ ಹೋರಾಟದ ಬಗ್ಗೆ ನಾವೇಕೆ ಚರ್ಚಿಸುತ್ತಿಲ್ಲ ಎಂದು ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಮಾಡಿದಾಗ ಪಮೇಲಾ ಕೂಡಾ ಪ್ರತಿಕ್ರಿಯೆ ನೀಡಿದ್ದರು. ಸಾಕಷ್ಟು ಮಾಹಿತಿ ಮತ್ತು ಜ್ಞಾನವಿಲ್ಲದೆ ಭಾರತದ ಭೂಪ್ರದೇಶದೊಳಗಿನ ಆಂತರಿಕ ಸಮಸ್ಯೆಗಳಿಂದ ಮಾತನಾಡುವುದನ್ನು ತಡೆಯಿರಿ. ‘ನಿಜವಾದ ರೈತರು’ ಆ ರೀತಿಯ ಭಯೋತ್ಪಾದಕರ ಬಗ್ಗೆ ನಾಚಿಕೆಪಡುತ್ತಾರೆ, ಈ ಸಮಯದಲ್ಲಿ ರೈತರನ್ನು ಮಧ್ಯವರ್ತಿಗಳು ವಂಚಿಸುತ್ತಿದ್ದಾರೆ. ಅವರ ಹಿಂಸಾತ್ಮಕ ಚಳವಳಿಗಳು ಕಾಂಗ್ರೆಸ್ ಅನ್ನು ಬೆಂಬಲಿಸುವ ಭಯೋತ್ಪಾದಕ ನಿಧಿಯೊಂದಿಗೆ ನಡೆಯುತ್ತಿವೆ ಎಂದು ಫೇಸ್​ಬುಕ್ ನಲ್ಲಿ ಬರೆದಿದ್ದರು.

ಇದನ್ನೂ ಓದಿ:  ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ