ಮೆಸ್ಸಿಯ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಯಾಚನೆ

ಫುಟ್ಬಾಲ್ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫುಟ್​​ಬಾಲ್ ಆರಾಧ್ಯ ದೈವ ಮೆಸ್ಸಿಯನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಹೆಚ್ಚುವರಿಯಾಗಿ ಹಣ ಕೊಟ್ಟು ಟಿಕೆಟ್ ಖರೀದಿಸಿದ್ದರು. ಆದರೆ, ಮೆಸ್ಸಿ ಬೇಗನೆ ಕ್ರೀಡಾಂಗಣದಿಂದ ಹೊರಗೆ ಹೋಗಿದ್ದರಿಂದ ಕೋಪಗೊಂಡ ಅಭಿಮಾನಿಗಳು ದಾಂಧಲೆ ಎಬ್ಬಿಸಿದ್ದಾರೆ.

ಮೆಸ್ಸಿಯ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಿಎಂ ಮಮತಾ ಬ್ಯಾನರ್ಜಿ ಕ್ಷಮೆ ಯಾಚನೆ
Messi Program In Kolkata

Updated on: Dec 13, 2025 | 3:22 PM

ಕೊಲ್ಕತ್ತಾ, ಡಿಸೆಂಬರ್ 13: ಅರ್ಜೆಂಟಿನಾದ ಫುಟ್​​ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅವರಿಗೆ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಮೆಸ್ಸಿ ಇಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಗೋಟ್ ಇಂಡಿಯಾ ಟೂರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೆಸ್ಸಿಯನ್ನು ಸರಿಯಾಗಿ ನೋಡಲಾಗದೆ ಹತಾಶರಾದ ಅಭಿಮಾನಿಗಳು ಗಲಾಟೆ ನಡೆಸಿ, ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆ ಯಾಚಿಸಿದ್ದಾರೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಮಮತಾ ಬ್ಯಾನರ್ಜಿ, ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ನೋಡಲು ನೆರೆದಿದ್ದ ಸಾವಿರಾರು ಕ್ರೀಡಾ ಪ್ರೇಮಿಗಳು ಮತ್ತು ಅಭಿಮಾನಿಗಳೊಂದಿಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾಂಗಣಕ್ಕೆ ಹೋಗುತ್ತಿದ್ದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ 70 ಅಡಿ ಎತ್ತರದ ‘ಲಿಯೋನೆಲ್ ಮೆಸ್ಸಿ’ ಪ್ರತಿಮೆ ಅನಾವರಣ

ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಿಯೋನೆಲ್ ಮೆಸ್ಸಿ ಮತ್ತು ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ. ಅರ್ಜೆಂಟೀನಾ ವಿಶ್ವಕಪ್ ವಿಜೇತ ನಾಯಕ ಮೆಸ್ಸಿ ಇಂದು ಮಧ್ಯಾಹ್ನ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.


ಆದರೆ, ಹೆಚ್ಚಿನ ಟಿಕೆಟ್ ಬೆಲೆಗಳನ್ನು ಪಾವತಿಸಿದರೂ ಅನೇಕ ಅಭಿಮಾನಿಗಳಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ. ಮಂತ್ರಿಗಳು, ಕ್ಲಬ್ ಅಧಿಕಾರಿಗಳು, ಮಾಜಿ ಫುಟ್ಬಾಲ್ ಆಟಗಾರರು, ಮಾಧ್ಯಮ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮೆಸ್ಸಿಯ ಸುತ್ತಲೂ ಜನರು ಮುತ್ತಿಕೊಂಡಿದ್ದರು. ಇದರಿಂದ ಕ್ರೀಡಾಂಗಣದ ಸೀಟ್​​​ಗಳಲ್ಲಿ ಕುಳಿತಿದ್ದವರಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: ಮೋದಿ ಅವರನ್ನು ಭೇಟಿ ಮಾಡಲಿರುವ ಮೆಸ್ಸಿ; ಭಾರತ ಪ್ರವಾಸದ ಪೂರ್ಣ ವಿವರ ಇಲ್ಲಿದೆ

ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಹೆಚ್ಚು ಬೆಲೆ ತೆತ್ತು ಟಿಕೆಟ್ ಖರೀದಿಸಿದ್ದರೂ ಆತನನ್ನು ನೋಡಲು ಸಾಧ್ಯವಾಗದೆ ಹತಾಶೆಗೊಂಡ ಅಭಿಮಾನಿಗಳು ಗಲಾಟೆಯೆಬ್ಬಿಸಿದರು. ಇದರಿಂದ ಮೆಸ್ಸಿ ಬೇಗನೆ ಮೈದಾನದಿಂದ ಹೊರಗೆ ಹೋದರು. ಇದರಿಂದ ಮೆಸ್ಸಿಯ ಅಭಿಮಾನಿಗಳು ಇನ್ನಷ್ಟು ಕೆರಳಿ ಮುರಿದ ಕುರ್ಚಿಗಳು, ಬಾಟಲಿಗಳನ್ನು ಎಸೆದು ಕ್ರೀಡಾಂಗಣದಲ್ಲಿ ದಾಂಧಲೆ ಎಬ್ಬಿಸಿದರು. ಇದರಿಂದ ಪರಿಸ್ಥಿತಿ ಹದಗೆಟ್ಟು, ಕ್ರೀಡಾಂಗಣದೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು.


ಈ ಘಟನೆಗೆ ಪ್ರತಿಕ್ರಿಯೆಯಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆದ ವಿಷಾದ ವ್ಯಕ್ತಪಡಿಸಿದ್ದಾರೆ. ಮೆಸ್ಸಿ ಮತ್ತು ಮೆಸ್ಸಿಯ ಅಭಿಮಾನಿಗಳಿಗೆ ಸಿಎಂ ಕ್ಷಮೆ ಯಾಚಿಸಿದ್ದಾರೆ. ಕಳಪೆ ಕಾರ್ಯಕ್ರಮ ನಿರ್ವಹಣೆಯೇ ಅವ್ಯವಸ್ಥೆಗೆ ಕಾರಣವೆಂದು ಅವರು ಹೇಳಿದ್ದಾರೆ. ಕ್ರೀಡಾಂಗಣದ ವ್ಯವಸ್ಥೆಗಳನ್ನು ಪರಿಶೀಲಿಸಲು ಮತ್ತು ಲೋಪಗಳನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

“ಈ ಘಟನೆಯ ತನಿಖೆಗೆ ನಾನು ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿರುವ ತನಿಖಾ ಸಮಿತಿಯನ್ನು ರಚಿಸುತ್ತಿದ್ದೇನೆ. ಸಮಿತಿಯು ಈ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತದೆ” ಎಂದು ಸಿಎಂ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Sat, 13 December 25