‘ಬಿಜೆಪಿ ಯಾವ ಕಾರಣಕ್ಕೂ ಗೆಲ್ಲಬಾರದು..’-ಗೋವಾಕ್ಕೆ ಹೊರಟು ನಿಂತ ಮಮತಾ ಬ್ಯಾನರ್ಜಿ

| Updated By: Lakshmi Hegde

Updated on: Oct 23, 2021 | 2:17 PM

ಗೋವಾದಲ್ಲಿ ಇನ್ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಟಿಎಂಸಿ ಸ್ಪರ್ಧೆ ಮಾಡುವುದಿಲ್ಲ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಈಗಾಗಲೇ ತಿಳಿಸಿದ್ದಾರೆ.

‘ಬಿಜೆಪಿ ಯಾವ ಕಾರಣಕ್ಕೂ ಗೆಲ್ಲಬಾರದು..’-ಗೋವಾಕ್ಕೆ ಹೊರಟು ನಿಂತ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal CM Mamata Banerjee) ಅಕ್ಟೋಬರ್​ 28-30ರವರೆಗೆ ಗೋವಾ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಬರುವ ವರ್ಷ ಅಲ್ಲಿ ವಿಧಾನಸಭೆ ಚುನಾವಣೆ (Goa Assembly Election) ನಡೆಯಲಿರುವ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿಗೆ ತಾವು ಗೆಲ್ಲಬೇಕು ಎಂಬ ಭಾವಕ್ಕಿಂತಲೂ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂಬ ಕಿಚ್ಚು ಹೆಚ್ಚಾಗಿದೆ.  ಅಂತೆಯೇ ಗೋವಾ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೋವಾದ ಜನರು ಕಳೆದ 10 ವರ್ಷಗಳಿಂದಲೂ ಬಿಜೆಪಿ ಅಧಿಕಾರದಡಿ ಸಂಕಷ್ಟಕ್ಕೀಡಾಗಿದ್ದಾರೆ. ನಾನು ಗೋವಾಕ್ಕೆ ಚೊಚ್ಚಲ ಭೇಟಿಗೆ ತಯಾರಿ ನಡೆಸುತ್ತಿದ್ದೇನೆ. ಈ ಹೊತ್ತಲ್ಲಿ ಬಿಜೆಪಿ ಮತ್ತು ಅದರ ಒಡೆದು ಆಳುವ ನೀತಿ ಪೂರ್ಣವಾಗಿ ನೆಲಕಚ್ಚುವಂತೆ ಮಾಡಲು ಜನರು, ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡುತ್ತೇನೆ ಎಂದು ಹೇಳಿದ್ದಾರೆ. 

ನಾವೆಲ್ಲ ಒಗ್ಗಟ್ಟಾಗುವ ಮೂಲಕ ಗೋವಾದಲ್ಲಿ ಒಂದು ಹೊಸ ಸರ್ಕಾರವನ್ನು ಆಡಳಿತಕ್ಕೆ ತರುತ್ತೇವೆ. ಅದು ಗೋವಾದ ಜನರ ಸರ್ಕಾರವಾಗಿರುತ್ತದೆ. ಜನರ ನಿರೀಕ್ಷೆಗಳನ್ನು ಪೂರೈಸುವ ಸರ್ಕಾರವಾಗಿರುತ್ತದೆ ಎಂದು ಹೇಳಿದ್ದಾರೆ.  ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ ಮತ್ತೆ ಅಧಿಕಾರ ಹಿಡಿದಿದೆ. ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಗೆದ್ದಿದ್ದರೂ ಮತ್ತೆ ತಮ್ಮ ಸ್ವಕ್ಷೇತ್ರ ಭವಾನಿಪುರದಲ್ಲಿ ಗೆದ್ದು ಸಿಎಂ ಗಾದಿಯನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಮಧ್ಯೆ ತಮ್ಮ ಪಕ್ಷದ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಸದ್ಯ ಬಿಜೆಪಿ ಆಡಳಿತ ಇರುವ ತ್ರಿಪುರ ಮತ್ತು ಗೋವಾಕ್ಕೆ ಕಾಲಿಟ್ಟಿದ್ದಾರೆ.

ಗೋವಾದಲ್ಲಿ ಮಾಜಿ ಸಚಿವ ಲುಯಿಝಿನ್ಹೋ ಫಲೇರೋ ಮತ್ತು ಇತರ ಕಾಂಗ್ರೆಸ್​ ನಾಯಕರು ಕಳೆದ ತಿಂಗಳು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇನ್ನು ಗೋವಾದಲ್ಲಿ ಇನ್ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಟಿಎಂಸಿ ಸ್ಪರ್ಧೆ ಮಾಡುವುದಿಲ್ಲ ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಈಗಾಗಲೇ ತಿಳಿಸಿದ್ದಾರೆ. ಈ ಮಧ್ಯೆ ಗೋವಾಕ್ಕೆ ಹೊರಟಿರುವ ಮಮತಾ ಬ್ಯಾನರ್ಜಿ ಅಲ್ಲಿ ಸಣ್ಣಪುಟ್ಟ ಪಕ್ಷಗಳ ನಾಯಕರೊಂದಿಗೆ ಮಾತುಕತೆ, ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು; ಬೆಂಕಿ ಇಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಕೊವಿಡ್ ವ್ಯಾಕ್ಸಿನ್ ಬಗ್ಗೆ ಬಿಲ್ ಗೇಟ್ಸ್ ಅವರೇ ಮೆಚ್ಚಿದ್ದಾರೆ; ಕಾಂಗ್ರೆಸ್ ಟೀಕೆ ಮಾಡಿಕೊಂಡು ಕೂತಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ