‘ಚುನಾವಣೆಯಲ್ಲಿ ಗೆದ್ದರೆ ಕೃಷಿ ಸಾಲ ಮನ್ನಾ, ಕೊವಿಡ್ 19 ಸಂತ್ರಸ್ತರಿಗೆ 25 ಸಾವಿರ ರೂ.ಪರಿಹಾರ’-ಪ್ರಿಯಾಂಕಾ ಗಾಂಧಿ ವಾದ್ರಾ ಭರವಸೆ
ಇಂದು ಕಾಂಗ್ರೆಸ್ನ ಪ್ರತಿಜ್ಞಾ ಯಾತ್ರೆಗಳಿಗೆ ಬಾರಾಬಂಕಿಯಲ್ಲಿ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಅಂದಹಾಗೆ ಇಂದಿನಿಂದ ನವೆಂಬರ್ 1ರವರೆಗೆ ಒಟ್ಟು ಮೂರು ಪ್ರತಿಜ್ಞಾ ಯಾತ್ರೆಗಳು ನಡೆಯಲಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಇದೀಗ ಉತ್ತರಪ್ರದೇಶ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ಚುನಾವಣೆ (Uttar Pradesh Assembly Election) ದೃಷ್ಟಿಯಿಂದ ಅಲ್ಲಿನ ಜನರಿಗೆ ಮಹತ್ವದ ಭರವಸೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್ನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿರುವ ಪ್ರಿಯಾಂಕಾ ಗಾಂಧಿ, ಒಂದೊಮ್ಮೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಪದವಿ ಪೂರ್ಣಗೊಳಿಸಿದ ಹುಡುಗಿಯರಿಗೆ ಸ್ಕೂಟಿ ಮತ್ತು 12ನೇ ಕ್ಲಾಸ್ ಪಾಸ್ ಆದ ಹುಡುಗಿಯರಿಗೆ ಸ್ಮಾರ್ಟ್ ಫೋನ್ ಕೊಡುವ ಭರವಸೆಯನ್ನೂ ಈಗಾಗಲೇ ಕೊಟ್ಟಿದ್ದಾರೆ.
ಹಾಗೇ ಇಂದು ಕಾಂಗ್ರೆಸ್ನ ಪ್ರತಿಜ್ಞಾ ಯಾತ್ರೆಗಳಿಗೆ ಬಾರಾಬಂಕಿಯಲ್ಲಿ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇನ್ನಷ್ಟು ಭರವಸೆಗಳನ್ನು ರಾಜ್ಯದ ಜನರಿಗೆ ನೀಡಿದ್ದಾರೆ. ಅಂದಹಾಗೆ ಇಂದಿನಿಂದ ಒಟ್ಟು ಮೂರು ಪ್ರತಿಜ್ಞಾ ಯಾತ್ರೆಗಳು ನಡೆಯಲಿದ್ದು, ಒಂದು ಯಾತ್ರೆ ಬಾರಾಬಂಕಿಯಿಂದ ಬುಂದೇಲ್ಖಂಡ, ಇನ್ನೊಂದು ಯಾತ್ರೆ ಸಹರಾನ್‌ಪುರದಿಂದ ಮಥುರಾಕ್ಕೆ ಮತ್ತು ಇನ್ನೊಂದು ವಾರಾಣಸಿಯಿಂದ ರಾಯಬರೇಲಿಗೆ ತೆರಳಲಿದೆ. ನವೆಂಬರ್ 1ರವರೆಗೆ ಈ ಯಾತ್ರೆ ನಡೆಯಲಿದೆ.
ಇಂದು ಬಾರಾಬಂಕಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡಲಾಗುವುದು, 20 ಲಕ್ಷ ಸರ್ಕಾರಿ ಕೆಲಸ ಸೃಷ್ಟಿಸಲಾಗುವುದು ಮತ್ತು ಕೊವಿಡ್ 19 ಸಾಂಕ್ರಾಮಿಕ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಹಾಗೇ ಕೊವಿಡ್ 19 ಸೋಂಕಿನಿಂದ ಸಂತ್ರಸ್ತರಾದವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ. ಛತ್ತೀಸ್ಗಡ್ನಲ್ಲಿರುವಂತೆ ನಾವೂ ಕೂಡ ಉತ್ತರಪ್ರದೇಶದಲ್ಲಿ ಗೋಧಿ, ಭತ್ತದ ಬೆಲೆಯನ್ನು 2500 ರೂ.ನಿಗದಿಪಡಿಸುತ್ತೇವೆ. ಪ್ರತಿ ಕ್ವಿಂಟಾಲ್ ಕಬ್ಬಿಗೆ ಬೆಂಬಲ ಬೆಲೆ 400 ರೂ.ನೀಡುತ್ತೇವೆ ಎಂದು ಹೇಳಿದ್ದಾರೆ.
ಹಾಗೇ, ಇಂದು ಕೂಡ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ಹಿಂಸಾಚಾರ ಉಲ್ಲೇಖಿಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸಚಿವರೊಬ್ಬರ ಪುತ್ರನೊಬ್ಬ ರೈತರನ್ನು ಕೊಲ್ಲುತ್ತಾರೆ ಎಂದಾದರೆ, ಈ ಸರ್ಕಾರ ರೈತರಿಗೆ ಎಷ್ಟರಮಟ್ಟಿಗೆ ಮಹತ್ವ ನೀಡುತ್ತದೆ ಎಂಬುದು ಗೊತ್ತಾಗುತ್ತದೆ. ಆರೋಪಿಯನ್ನು ಬಂಧಿಸಲೂ ಕೂಡ ಉತ್ತರಪ್ರದೇಶ ಸರ್ಕಾರ ತುಂಬ ವಿಳಂಬ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನನ್ನ ಪರವಾಗಿ ಜಮೀರ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ; ಜೆಡಿಎಸ್ ಎಂಎಲ್ಸಿ ಬಿಎಂ ಫಾರೂಕ್
Radhe Shyam: ‘ನನಗೆ ಎಲ್ಲಾ ಗೊತ್ತು, ಆದರೆ ಅದನ್ನ ಯಾರಿಗೂ ಹೇಳೋದಿಲ್ಲ’ ಎಂದ ಪ್ರಭಾಸ್; ಏಕಂತೆ?