ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದಾಗ ವಂದೇ ಭಾರತ್ ರೈಲಿನ ಕಿಟಕಿಯಲ್ಲಿ ಬಿರುಕು; ತನಿಖೆ ಆರಂಭಿಸಿದ ರೈಲ್ವೆ
ಸೋಮವಾರ ಲಿಂಬಯಾತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಘಟನೆಯ ಬಗ್ಗೆ ಪ್ರಸ್ತಾಪಿಸಿದ ವಕೀಲ ವಾರಿಸ್ ಪಠಾಣ್, ಓವೈಸಿ ಪ್ರಯಾಣಿಸುತ್ತಿದ್ದ ಕೋಚ್ ಮೇಲೆ ಯಾರೋ ಕಲ್ಲು ಎಸೆದಿದ್ದಾರೆ ಎಂದು ಹೇಳಿದರು.
ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi) ಮತ್ತು ಅವರ ತಂಡ ಪ್ರಯಾಣಿಸುತ್ತಿದ್ದ ವಂದೇ ಭಾರತ್ (Vande Bharat) ರೈಲಿನ ಕಿಟಕಿ ಪ್ಯಾನೆಲ್ನಲ್ಲಿ ಬಿರುಕುಗಳು ಕಂಡುಬಂದಿರುವ ಘಟನೆಯ ಬಗ್ಗೆ ಪಶ್ಚಿಮ ರೈಲ್ವೆ (Western Railway) ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೈಲ್ವೇ ಪೊಲೀಸರ ಪ್ರಕಾರ, ಸೋಮವಾರ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಅವರ ತಂಡವು ಅಹಮದಾಬಾದ್‌ನಿಂದ ಸೂರತ್‌ಗೆ ಲಿಂಬಯತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಭರೂಚ್‌ನ ಅಂಕಲೇಶ್ವರ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರೈಲು ನರ್ಮದಾ ಸೇತುವೆಯನ್ನು ದಾಟಿದಾಗ, ಕೆಲವು ಕಾಂಕ್ರೀಟ್ ತುಂಡುಗಳು ಸೀಟ್ ಸಂಖ್ಯೆ 25 ರ ಬಳಿ ಕಿಟಕಿಗೆ ಬಡಿದವು. ಆದರೆ ಓವೈಸಿ ಸೀಟ್ ಸಂಖ್ಯೆ 18 ರಲ್ಲಿ ಇದ್ದರು ಎಂದು ಅವರು ಹೇಳಿದರು. ಸೂರತ್ ರೈಲು ನಿಲ್ದಾಣದಲ್ಲಿ ರೈಲು ನಿಂತ ನಂತರ ಪ್ರಯಾಣಿಕರೊಬ್ಬರು ಬಿರುಕು ಬಿಟ್ಟಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕರು ಕೂಡಲೇ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಲಿಂಬಯಾತ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಘಟನೆಯ ಬಗ್ಗೆ ಪ್ರಸ್ತಾಪಿಸಿದ ವಕೀಲ ವಾರಿಸ್ ಪಠಾಣ್, ಓವೈಸಿ ಪ್ರಯಾಣಿಸುತ್ತಿದ್ದ ಕೋಚ್ ಮೇಲೆ ಯಾರೋ ಕಲ್ಲು ಎಸೆದಿದ್ದಾರೆ ಎಂದು ಹೇಳಿದರು.
ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪಶ್ಚಿಮ ರೈಲ್ವೆ ಪೊಲೀಸ್ ಅಧೀಕ್ಷಕ ರಾಜೇಶ್ ಪರ್ಮಾರ್, “ನಾವು ರೈಲ್ವೆ ತಾಂತ್ರಿಕ ತಂಡದಿಂದ ವರದಿಯನ್ನು ಕೇಳಿದ್ದೇವೆ. ನಮ್ಮ ತಂಡಗಳು ಪ್ರದೇಶವನ್ನು ಪರಿಶೀಲನೆ ಮಾಡಿದೆ. ಆದರೆ ಘಟನೆ ನಡೆದ ಸ್ಥಳದಿಂದ ಯಾವುದೇ ಸುಳಿವು ಸಿಕ್ಕಿಲ್ಲ.
ಪ್ರಾಥಮಿಕ ತನಿಖೆಯ ನಂತರ, ಅಂಕಲೇಶ್ವರ ರೈಲು ನಿಲ್ದಾಣದ ಬಳಿ ರೈಲ್ವೆ ಹಳಿಗಳ ದುರಸ್ತಿ ಪ್ರಗತಿಯಲ್ಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ರೈಲುಗಳು ಕಡಿಮೆ ವೇಗದಲ್ಲಿ ಚಲಿಸುವಂತೆ ಎಚ್ಚರಿಕೆ ನೀಡಲಾಯಿತು. ವಂದೇ ಭಾರತ್ ರೈಲಿನ ವೇಗದಿಂದಾಗಿ ಕೆಲವು ಕಾಂಕ್ರೀಟ್ ತುಂಡುಗಳು ಕಿಟಕಿಗೆ ತಾಗಿರಬಹುದು ಎಂದಿದ್ದಾರೆ.