ದೇಶದಲ್ಲಿ ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಲಸಿಕೆ ನೀಡಬೇಕೆಂಬ ಗುರಿಯನ್ನ ಮುಟ್ಟಲು ಕೇಂದ್ರ ಸರ್ಕಾರ ವಿಫಲವಾಗುತ್ತಿದೆ. ಡಿಸೆಂಬರ್ ನೊಳಗೆ ದೇಶದ ಎಲ್ಲ ವಯಸ್ಕರಿಗೂ ಕೊರೊನಾ ಲಸಿಕೆ ನೀಡಬೇಕೆಂಬ ಗುರಿಯನ್ನು ಈಗಿನ ಸ್ಥಿತಿ ನೋಡಿದರೇ, ಮುಟ್ಟುವುದು ಅಸಾಧ್ಯ. ದೇಶದಲ್ಲಿ ಕೊರೊನಾ ಲಸಿಕೆ (Covid Vaccine) ನೀಡಿಕೆಯ ವೇಗ ಕುಂಠಿತವಾಗಲು ಕಾರಣವೇನು? ಡಿಸೆಂಬರ್ ನೊಳಗೆ ಎಷ್ಟು ಜನರಿಗೆ 2 ಡೋಸ್ ಲಸಿಕೆ ನೀಡಲು ಸಾಧ್ಯವಾಗುತ್ತೆ? ಡಿಸೆಂಬರ್ ನೊಳಗೆ ದೇಶವು ಹರ್ಡ್ ಇಮ್ಯೂನಿಟಿಯನ್ನು ಸಾಧಿಸಲು ಸಾಧ್ಯವಾಗುತ್ತಾ? ಎನ್ನುವುದರ ಫುಲ್ ಡೀಟೈಲ್ಸ್ ಇಲ್ಲಿದೆ ನೋಡಿ.
ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ನೀಡಿಕೆ ಗುರಿ ವಿಫಲ
ನಮ್ಮ ಭಾರತದಲ್ಲಿ ಈ ವರ್ಷದ ಜನವರಿ 16 ರಿಂದ ಕೊರೊನಾ ಲಸಿಕೆ ನೀಡಿಕೆಯ ಅಭಿಯಾನ ಆರಂಭವಾಗಿದೆ. ಜುಲೈ ಅಂತ್ಯಕ್ಕೆ ದೇಶಕ್ಕೆ 51.6 ಕೋಟಿ ಡೋಸ್ ಉತ್ಪಾದನೆಯಾಗಿ ಲಭ್ಯವಾಗುತ್ತೆ. ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ನೀಡಬೇಕೆಂಬ ಗುರಿಯನ್ನು ಕೇಂದ್ರದ ಆರೋಗ್ಯ ಇಲಾಖೆ ಹಾಕಿಕೊಂಡಿತ್ತು. ಆದರೆ ಈಗ ಜುಲೈ ಅಂತ್ಯಕ್ಕೆ ಬಂದು ನಿಂತಿದ್ದೇವೆ. ಈಗ ನೋಡಿದರೇ, ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡಿಕೆಯ ಗುರಿ ಸಾಧನೆಯಲ್ಲಿ ವಿಫಲವಾಗಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಜುಲೈ 29ರ ಇಂದು ಬೆಳಿಗ್ಗೆವರೆಗಿನ ಮಾಹಿತಿ ಪ್ರಕಾರ, ದೇಶದಲ್ಲಿ 45.07 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಜುಲೈ 28ರಂದು ದೇಶದಲ್ಲಿ 43.92 ಲಕ್ಷ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ನಿತ್ಯ 40 ಲಕ್ಷ ಡೋಸ್ ಸರಾಸರಿಯಲ್ಲಿ ಇನ್ನೂ ಮೂರು ದಿನದಲ್ಲಿ 1.20 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲು ಸಾಧ್ಯ. ಹೀಗಾಗಿ ಜುಲೈ ಅಂತ್ಯಕ್ಕೆ ಭಾರತದಲ್ಲಿ 46 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ಮಾತ್ರ ನೀಡಲು ಸಾಧ್ಯ. ಹೀಗಾಗಿ ನಿಗದಿತ ಗುರಿಗಿಂತ 5.6 ಕೋಟಿ ಡೋಸ್ ಕಡಿಮೆ ಲಸಿಕೆಯನ್ನು ನೀಡಬೇಕಾಗುತ್ತೆ.
ದೇಶದಲ್ಲಿರುವ 94 ಕೋಟಿ ವಯಸ್ಕರಿಗೆ 2 ಡೋಸ್ ಲಸಿಕೆ ನೀಡಲು 188 ಕೋಟಿ ಡೋಸ್ ಲಸಿಕೆ ನೀಡಬೇಕು. ಜುಲೈ ಅಂತ್ಯಕ್ಕೆ 46 ಕೋಟಿ ಡೋಸ್ ಲಸಿಕೆ ನೀಡಿದರೇ, ಇನ್ನೂ 142 ಕೋಟಿ ಡೋಸ್ ಲಸಿಕೆ ನೀಡುವುದು ಬಾಕಿ ಇದೆ. 2021ರ ಡಿಸೆಂಬರ್ ನೊಳಗೆ ದೇಶದ ವಯಸ್ಕರಿಗೆಲ್ಲಾ ಲಸಿಕೆ ನೀಡಲು ಉಳಿದಿರುವ 5 ತಿಂಗಳ ಅವಧಿಯಲ್ಲಿ 142 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಬೇಕು. ಜನವರಿಯಿಂದ ಜುಲೈ ತಿಂಗಳವರೆಗೆ ಆರೂವರೆ ತಿಂಗಳ ಅವಧಿಯಲ್ಲಿ 46 ಕೋಟಿ ಡೋಸ್ ಲಸಿಕೆ ನೀಡಿರುವ ದೇಶ, ಮುಂದಿನ 5 ತಿಂಗಳಲ್ಲಿ 142 ಕೋಟಿ ಡೋಸ್ ಲಸಿಕೆ ನೀಡುವುದು ಬಾರಿ ದೊಡ್ಡ ಗುರಿ.
ಗುರಿ ತಲುಪಲು 3 ಅಂಶ ಮುಖ್ಯ
ಆದರೆ, ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುವ ಪ್ರಕಾರ, ಈ ಗುರಿಯನ್ನು ತಲುಪಲು ಮೂರು ಅಂಶಗಳು ಬಹಳ ಮುಖ್ಯ. ಮೊದಲನೇಯದಾಗಿ ಭಾರತ್ ಬಯೋಟೆಕ್ ಕಂಪನಿಯು ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ 48 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಿ ದೇಶಕ್ಕೆ ಪೂರೈಸಬೇಕು. ಭಾರತ್ ಬಯೋಟೆಕ್ ಕಂಪನಿಯ ಮೇಲೆ ಕೇಂದ್ರ ಸರ್ಕಾರ ಬಾರಿ ನಿರೀಕ್ಷೆ ಇಟ್ಟುಕೊಂಡಿದೆ. ಎರಡನೇಯದಾಗಿ ಹೈದರಾಬಾದ್ ನ ಬಯೋಲಾಜಿಕಲ್-ಇ ಕಂಪನಿಯು ತನಗೆ ನೀಡಿರುವ ಆರ್ಡರ್ ಪ್ರಕಾರ ಆಗಸ್ಟ್ ನಿಂದ ಡಿಸೆಂಬರ್ ಅವಧಿಯಲ್ಲಿ 30 ಕೋಟಿ ಡೋಸ್ ಕೋರ್ಬಾವ್ಯಾಕ್ಸ್ ಲಸಿಕೆಯನ್ನು ಉತ್ಪಾದಿಸಿ ದೇಶಕ್ಕೆ ಪೂರೈಸಬೇಕು. ಬಯೋಲಾಜಿಕಲ್-ಇ ಕಂಪನಿಗೆ ಈಗಾಗಲೇ ಕೇಂದ್ರ ಸರ್ಕಾರವು 1,500 ಕೋಟಿ ರೂಪಾಯಿ ಹಣವನ್ನು ಅಡ್ವಾನ್ಸ್ ರೂಪದಲ್ಲಿ ನೀಡಿದೆ. ಮೂರನೇಯದಾಗಿ ಜನರು ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಬಿಟ್ಟು ಲಸಿಕಾ ಕೇಂದ್ರಗಳಿಗೆ ಬಂದು 2 ಡೋಸ್ ಲಸಿಕೆಯನ್ನು ಪಡೆಯಬೇಕು.
ಜುಲೈ ತಿಂಗಳಲ್ಲಿ 12 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆಗಸ್ಟ್ ತಿಂಗಳಲ್ಲಿ 15 ಕೋಟಿ ಡೋಸ್ ಲಸಿಕೆಯು ಲಭ್ಯವಾಗುತ್ತೆ ಎಂಬ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ಜೂನ್ 21ರ ನಂತರ ದೇಶದಲ್ಲಿ ಮತ್ತೆ ಕೇಂದ್ರೀಕೃತ ಕೊರೊನಾ ಲಸಿಕೆಯ ಖರೀದಿ ನೀತಿಯೇ ಜಾರಿಯಾಗಿದೆ. ಆದರೇ, ಕೊರೊನಾ ಲಸಿಕೆಯ ಉತ್ಪಾದನೆ ಏನೂ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಉತ್ಪಾದನೆಯ ವಿಷಯದಲ್ಲಿ ಈಗಲೂ ಸಮಸ್ಯೆ ಇದೆ. ಲಸಿಕೆಯ ಉತ್ಪಾದನೆಯ ಕೊರತೆ ಮುಂದುವರಿದಿದೆ. ಆದರೇ, ಕೇಂದ್ರ ಸರ್ಕಾರ ಕಡಿಮೆ ಜನಸಂಖ್ಯೆ ಇರುವ ದೇಶಗಳ ಜೊತೆಗೆ ಭಾರತವನ್ನ ಹೋಲಿಸಿಕೊಂಡು ಆ ದೇಶಗಳಿಗಿಂತ ನಮ್ಮಲ್ಲೇ ಹೆಚ್ಚಿನ ಕೋಟಿ ಡೋಸ್ ಲಸಿಕೆ ನೀಡಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕೆಲ ವಿದೇಶಗಳಲ್ಲಿ 2 ಡೋಸ್ ಲಸಿಕೆಯನ್ನು ಜನಸಂಖ್ಯೆಯ ಶೇ.50 ರಷ್ಟು ಜನರಿಗೆ ನೀಡಲಾಗಿದೆ.
ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ನಿಗೂಢತೆ
ಭಾರತದಲ್ಲಿ ಈಗ ಕೊರೊನಾ ಲಸಿಕಾ ಅಭಿಯಾನವು ಬಹುತೇಕ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೊವಿಶೀಲ್ಡ್ ಲಸಿಕೆಯ ಉತ್ಪಾದನೆಯಿಂದಲೇ ನಡೆಯುತ್ತಿದೆ. ಇದುವರೆಗೂ ನೀಡಿರುವ 45 ಕೋಟಿ ಡೋಸ್ ಲಸಿಕೆಯ ಪೈಕಿ 39 ಕೋಟಿ ಡೋಸ್ ಲಸಿಕೆಯು ಕೊವಿಶೀಲ್ಡ್ ಲಸಿಕೆಯೇ ಆಗಿದೆ. ಭಾರತ್ ಬಯೋಟೆಕ್ ಕಂಪನಿಯು ಜುಲೈ ಅಂತ್ಯದೊಳಗೆ 8 ಕೋಟಿ ಡೋಸ್ ಲಸಿಕೆಯನ್ನು ಪೂರೈಸಬೇಕಾಗಿತ್ತು. ಆದರೆ, ಜುಲೈ 16ರವರೆಗೆ 5.45 ಕೋಟಿ ಡೋಸ್ ಲಸಿಕೆಯನ್ನು ಮಾತ್ರ ಪೂರೈಸಿದೆ. ಜುಲೈ ತಿಂಗಳಲ್ಲಿ ತಿಂಗಳಿಗೆ 2.5 ಕೋಟಿ ಡೋಸ್ ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿದೆ. ಆದರೆ ಸದ್ಯದಲ್ಲೇ ತಿಂಗಳಿಗೆ 5.8 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಅದು ಕೂಡ ಬೇಡಿಕೆಯನ್ನು ಪೂರೈಸಲು ಸಾಕಾಗಲ್ಲ. ಏಕೆಂದರೇ, ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ ಭಾರತ್ ಬಯೋಟೆಕ್ ಕಂಪನಿಯು 40 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಪೂರೈಸುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಐದು ತಿಂಗಳ ಅವಧಿಯಲ್ಲಿ 40 ಕೋಟಿ ಡೋಸ್ ಲಸಿಕೆಯನ್ನು ಪೂರೈಸಬೇಕಾದರೇ, ಪ್ರತಿ ತಿಂಗಳು 8 ಕೋಟಿ ಡೋಸ್ ಲಸಿಕೆಯನ್ನು ಪೂರೈಸಬೇಕು. ಹೀಗಾಗಿ ಪ್ರತಿ ತಿಂಗಳ ತನ್ನ ಉತ್ಪಾದನೆಯನ್ನು 8 ಕೋಟಿ ಡೋಸ್ ಗೆ ಏರಿಸಬೇಕು. ಆಗಸ್ಟ್ ತಿಂಗಳಿನಿಂದ 28.5 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಕೇಂದ್ರ ಸರ್ಕಾರವು ಜುಲೈ 16ರಂದು ಆರ್ಡರ್ ನೀಡಿದೆ. ಇನ್ನೂಳಿದ 11.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನ ಭಾರತ್ ಬಯೋಟೆಕ್ ಕಂಪನಿಯು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಬೇಕು. ಉತ್ಪಾದನೆಯಾದ ಲಸಿಕೆಯ ಪೈಕಿ ಶೇ.25 ರಷ್ಟು ಲಸಿಕೆಯನ್ನು ಖಾಸಗಿ ವಲಯಕ್ಕೆ ಪೂರೈಸಲು ಕೇಂದ್ರ ಸರ್ಕಾರವೇ ಅವಕಾಶ ನೀಡಿದೆ. ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಎಷ್ಟಾಗುತ್ತಿದೆ ಎನ್ನುವ ಬಗ್ಗೆ ಕೇಂದ್ರ ಸರ್ಕಾರವೇ ಗೊಂದಲಕಾರಿ ಹೇಳಿಕೆಗಳನ್ನು ಪಾರ್ಲಿಮೆಂಟ್ ಗೆ ನೀಡಿದೆ.
ಆಗಸ್ಟ್ ತಿಂಗಳಲ್ಲಿ ಕಾರ್ಬೋವ್ಯಾಕ್ಸ್ ಲಸಿಕೆಗೆ ಅನುಮೋದನೆ
ಕೇಂದ್ರ ಸರಕಾರವು ಈಗ ಭಾರತದಲ್ಲಿ 5 ಮತ್ತು 6ನೇ ಲಸಿಕೆಯ ತುರ್ತು ಅನುಮೋದನೆಗೆ ಕಾಯುತ್ತಿದೆ. ಇದುವರೆಗೂ ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಹಾಗೂ ಮಾಡೆರ್ನಾ ಕಂಪನಿಯ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಆದರೆ, ಹೈದರಾಬಾದ್ ನ ಬಯೋಲಾಜಿಕಲ್-ಇ ಕಂಪನಿಯ ಕಾರ್ಬೋವ್ಯಾಕ್ಸ್ ಲಸಿಕೆಯು ತುರ್ತು ಬಳಕೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ. ಆಗಸ್ಟ್ ತಿಂಗಳಲ್ಲಿ ಬಯೋಲಾಜಿಕಲ್ ಇ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ದೇಶದ 94 ಕೋಟಿ ವಯಸ್ಕ ಜನರಿಗೆ ಲಸಿಕೆ ನೀಡಲು ಬಯೋಲಾಜಿಕಲ್ ಇ ಕಂಪನಿಯ ಲಸಿಕಾ ಉತ್ಪಾದನೆಯು ಮಹತ್ವದ ಪಾತ್ರ ವಹಿಸಲಿದೆ.
ಇನ್ನೂ ರಷ್ಯಾದ ಸ್ಪುಟ್ನಿಕ್ ಲಸಿಕೆಯ 32 ಲಕ್ಷ ಡೋಸ್ ಭಾರತಕ್ಕೆ ಅಮದು ಆಗಿದೆ. ಇದರ ಪೈಕಿ ಇದುವರೆಗೂ 4.23 ಲಕ್ಷ ಡೋಸ್ ಲಸಿಕೆಯನ್ನು ಮಾತ್ರ ಜನರಿಗೆ ನೀಡಲಾಗಿದೆ. ಸ್ಪುಟ್ನಿಕ್ ಲಸಿಕೆಯಲ್ಲಿ 2 ನೇ ಡೋಸ್ ಲಸಿಕೆಯನ್ನು ಮೊದಲ ಡೋಸ್ ನೀಡಿದ ವಯಲ್ ನಿಂದಲೇ ನೀಡಲು ಸಾಧ್ಯವಿಲ್ಲ. ಹೀಗಾಗಿ ಮೊದಲ ಡೋಸ್ ಲಸಿಕೆ ನೀಡಿದ್ದಷ್ಟೇ ಪ್ರಮಾಣದಲ್ಲಿ 2 ನೇ ಡೋಸ್ ಲಸಿಕೆಯ ದಾಸ್ತಾನು ಬಂದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಸ್ಪುಟ್ನಿಕ್ ಲಸಿಕೆ ನೀಡಲು ಹೈದರಾಬಾದ್ ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿಯು ಸಿದ್ದತೆ ನಡೆಸುತ್ತಿದೆ. ಭಾರತದಲ್ಲೇ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆ ಕೂಡ ಆರಂಭವಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ 10 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯು ಸಿಗುವ ವಿಶ್ವಾಸದಲ್ಲಿ ಕೇಂದ್ರ ಸರಕಾರ ಇದೆ.
ಇನ್ನೂ ಗುಜರಾತ್‌ನ ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈ ಕೋವ್ ಡಿ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗ ಮುಗಿದಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ತುರ್ತು ಬಳಕೆಗೆ ಅನುಮತಿ ಸಿಕ್ಕರೇ, ಆಕ್ಟೋಬರ್ ನಿಂದ ಲಸಿಕೆಯ ಜನರ ಬಳಕೆಗೆ ಲಭ್ಯವಾಗಲಿದೆ. ಜೈಡಸ್ ಕ್ಯಾಡಿಲಾ ಕಂಪನಿಯಿಂದ ಡಿಸೆಂಬರ್ ನೊಳಗೆ 5 ಕೋಟಿ ಡೋಸ್ ಜೈ ಕೋವ್ ಡಿ ಲಸಿಕೆ ಲಭ್ಯವಾಗುವ ನಿರೀಕ್ಷೆ ಮಾತ್ರ ಇದೆ.
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು 2021ರಲ್ಲಿ ಡಿಸೆಂಬರ್ ನೊಳಗೆ 90 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಲಿದೆ. ಈಗಾಗಲೇ 40 ಕೋಟಿ ಡೋಸ್ ಲಸಿಕೆಯನ್ನು ಜುಲೈ ಅಂತ್ಯದೊಳಗೆ ಪೂರೈಸಿದೆ. ಇನ್ನೂಳಿದ 5 ತಿಂಗಳ ಅವಧಿಯಲ್ಲಿ 50 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಪೂರೈಸಲಿದೆ. ಈಗಾಗಲೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಪ್ರತಿ ತಿಂಗಳಿಗೆ 11 ಕೋಟಿ ಡೋಸ್ ಲಸಿಕೆಯನ್ನ ಉತ್ಪಾದಿಸುತ್ತಿದೆ.
ಇದೇ ವೇಗದಲ್ಲಿ ಲಸಿಕೆ ನೀಡಿದರೇ, ಶೇ.40 ರಷ್ಟು ಜನರಿಗೆ ಲಸಿಕೆ
ಭಾರತದಲ್ಲಿ ಈಗ ನಿತ್ಯ ಸರಾಸರಿ 40 ಲಕ್ಷ ಡೋಸ್ ಲಸಿಕೆಯನ್ನ ನೀಡಲಾಗುತ್ತಿದೆ. ಡಿಸೆಂಬರ್ ನೊಳಗೆ ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ನಿತ್ಯ ಸರಾಸರಿ 90 ಲಕ್ಷ ಡೋಸ್ ಲಸಿಕೆ ನೀಡಬೇಕು. ಹೀಗಾಗಿ ಈಗ ನೀಡುತ್ತಿರುವ ವೇಗದಲ್ಲೇ ಮುಂದಿನ 5 ತಿಂಗಳು ಕೂಡ ಲಸಿಕೆ ನೀಡಿದರೆ, ಭಾರತವು ಡಿಸೆಂಬರ್ ನೊಳಗೆ ಎಲ್ಲ 94 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲು ಸಾಧ್ಯವಿಲ್ಲ. ಭಾರತದ ವಯಸ್ಕರ ಪೈಕಿ ಶೇ.40 ರಷ್ಟು ಜನರಿಗೆ ಮಾತ್ರ 2 ಡೋಸ್ ಡೋಸ್ ಲಸಿಕೆ ನೀಡಲು ಸಾಧ್ಯ ಎಂದು ಐಎಂಎಫ್ ನ ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್ ಹೇಳಿದ್ದಾರೆ. ಎಲ್ಲರಿಗೂ ಕೊರೊನಾ ಲಸಿಕೆ ನೀಡಿಕೆಯಿಂದ ಆರ್ಥಿಕ ಚೇತರಿಕೆ ಸಾಧ್ಯ ಎಂದು ಗೀತಾ ಗೋಪಿನಾಥ್ ಹೇಳಿದ್ದಾರೆ.
ಇದನ್ನೂ ಓದಿ:
ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಲಸಿಕೆ ಅಭಿಯಾನ; ಖಾಸಗಿ ಆಸ್ಪತ್ರೆಗಳ ಶೇ. 25 ರಷ್ಟು ಲಸಿಕೆ ಕೋಟಾ ತಗ್ಗಿಸುವ ಸಾಧ್ಯತೆ
Exclusive: ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು; ಬಿಜೆಪಿ ಲೆಕ್ಕಾಚಾರ ಬದಲಾಯಿತೇಕೆ?
(What causes the slowdown in coronavirus vaccination in the country here is the analysis)
Published On - 4:37 pm, Fri, 30 July 21