ಪುಲ್ವಾಮ ದಾಳಿಗೆ ಯೋಧರು ಪ್ರತಿಭಟಿಸಿ ಗಡಿ ತೊರೆದರೆ ಏನಾಗುತ್ತದೆ?: ಮುಷ್ಕರ ನಿರತ ವೈದ್ಯರಿಗೆ ಟಿಎಂಸಿ ನಾಯಕನ ಪ್ರಶ್ನೆ
"ನನಗೊಂದು ಪ್ರಶ್ನೆಯಿದೆ" ಎಂದು ಎಕ್ಸ್ ನಲ್ಲಿ ಬೆಂಗಾಲಿಯಲ್ಲಿ ಪೋಸ್ಟ್ ಮಾಡಿದ ಘೋಷ್, "ಪುಲ್ವಾಮಾ ಪ್ರಕರಣದಲ್ಲಿ ಯಾವುದೇ ನ್ಯಾಯ ಸಿಕ್ಕಿಲ್ಲ, ಯೋಧರು ಗಡಿಯನ್ನು ತೊರೆದು 'ನಮಗೆ ನ್ಯಾಯ ಬೇಕು' ಪ್ರತಿಭಟನೆಯನ್ನು ಪ್ರಾರಂಭಿಸಿದರೆ, ನೀವು ಅದನ್ನು ಯಾವ ರೀತಿ ನೋಡುತ್ತೀರಿ?" ಎಂದು ಕೇಳಿದ್ದಾರೆ.ಮಂಗಳವಾರ, ಸುಪ್ರೀಂಕೋರ್ಟ್ ಪ್ರತಿಭಟನಾನಿರತ ವೈದ್ಯರಿಗೆ ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದು, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದೆ.

ಕೋಲ್ಕತ್ತಾ ಆಗಸ್ಟ್ 21: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವೈದ್ಯರನ್ನು ಬುಧವಾರ ಪ್ರಶ್ನಿಸಿರುವ ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ (Kunal Ghosh), ಗಡಿಯಲ್ಲಿನ ಸೈನಿಕರು ಪುಲ್ವಾಮಾ ದಾಳಿಯ ವಿರುದ್ಧ ಪ್ರತಿಭಟನೆ ಆರಂಭಿಸಿದರೆ ಏನಾಗುತ್ತದೆ ಎಂದು ಕೇಳಿದ್ದಾರೆ. ವೈದ್ಯರು ತಮ್ಮ ಮುಷ್ಕರವನ್ನು ಕೊನೆಗೊಳಿಸುವಂತೆ ಕುನಾಲ್ ಘೋಷ್ ಮನವಿ ಮಾಡಿದ್ದು, 2019 ರಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಪುಲ್ವಾಮಾ ದಾಳಿಯಲ್ಲಿ ಸೈನಿಕರಿಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
“ನನಗೊಂದು ಪ್ರಶ್ನೆಯಿದೆ” ಎಂದು ಎಕ್ಸ್ ನಲ್ಲಿ ಬೆಂಗಾಲಿಯಲ್ಲಿ ಪೋಸ್ಟ್ ಮಾಡಿದ ಘೋಷ್, “ಪುಲ್ವಾಮಾ ಪ್ರಕರಣದಲ್ಲಿ ಯಾವುದೇ ನ್ಯಾಯ ಸಿಕ್ಕಿಲ್ಲ, ಯೋಧರು ಗಡಿಯನ್ನು ತೊರೆದು ‘ನಮಗೆ ನ್ಯಾಯ ಬೇಕು’ ಪ್ರತಿಭಟನೆಯನ್ನು ಪ್ರಾರಂಭಿಸಿದರೆ, ನೀವು ಅದನ್ನು ಯಾವ ರೀತಿ ನೋಡುತ್ತೀರಿ?” ಎಂದು ಕೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸರ್ಕಾರವು ಭೀಕರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಪ್ರತಿಪಕ್ಷಗಳಿಂದ ಟೀಕೆಗೆ ಒಳಗಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಪರಾಧದ ವಿರುದ್ಧ ದೇಶಾದ್ಯಂತ ಸಾವಿರಾರು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ, ಸುಪ್ರೀಂಕೋರ್ಟ್ ಪ್ರತಿಭಟನಾನಿರತ ವೈದ್ಯರಿಗೆ ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದು, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಬಲಪ್ರಯೋಗ ಮಾಡದಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಮೃತದೇಹವನ್ನು ಸಂತ್ರಸ್ತೆಯ ಕುಟುಂಬಕ್ಕೆ ಹಸ್ತಾಂತರಿಸಿದ ಮೂರು ಗಂಟೆಗಳ ನಂತರ ಕೊಲೆ ಎಫ್‌ಐಆರ್ ದಾಖಲಿಸಿದ್ದಕ್ಕಾಗಿ ನ್ಯಾಯಾಲಯ ಬಂಗಾಳ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಮಹಿಳೆ ತನ್ನ 36 ಗಂಟೆಗಳ ಸುದೀರ್ಘ ಶಿಫ್ಟ್ ನಡುವೆ ವಿಶ್ರಾಂತಿ ಪಡೆಯಲು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಹೋಗಿದ್ದರು. ಮರುದಿನ ಬೆಳಗ್ಗೆ ಆಕೆ ಶವವಾಗಿ ಪತ್ತೆಯಾಗಿದ್ದಳು. ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ನಡೆದಾಗ ಆರ್‌ಜಿ ಕರ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಸಂದೀಪ್ ಘೋಷ್ ಅವರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸಂಚಿನ ಭಾಗವಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆಯೇ ಎಂದು ಕಂಡುಹಿಡಿಯಲು ಸಂಸ್ಥೆ ಪ್ರಯತ್ನಿಸುತ್ತಿದೆ. ಪ್ರಮುಖ ಆರೋಪಿ ಮತ್ತು ಮಾಜಿ ಪ್ರಾಂಶುಪಾಲರನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಸಂಸ್ಥೆ ಚಿಂತನೆ ನಡೆಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



